ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಭೇಟಿ ಅವಕಾಶ ಕೋರಿದ್ದ ಅರ್ಜಿ ಹಿಂಪಡೆದ ಬಿನೀಶ್‌ ಕೊಡಿಯೇರಿ

ಕಸ್ಟಡಿಯಲ್ಲಿದ್ದಾಗ ವಕೀಲರ ಭೇಟಿಗೆ ಅವಕಾಶ
Last Updated 4 ನವೆಂಬರ್ 2020, 19:23 IST
ಅಕ್ಷರ ಗಾತ್ರ

ಬೆಂಗಳೂರು: ಬಂಧನದಲ್ಲಿರುವಾಗ ವಕೀಲರ ಭೇಟಿಗೆ ಅವಕಾಶ ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಡ್ರಗ್ಸ್‌ ಜಾಲಕ್ಕೆ ಹಣ ಒದಗಿಸಿರುವ ಆರೋಪದ ಮೇಲೆ ಬಂಧಿತನಾಗಿರುವ ಬಿನೀಶ್‌ ಕೊಡಿಯೇರಿ ಹಿಂಪಡೆದಿದ್ದಾರೆ.

ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ತನಿಖೆ ನಡೆಸುತ್ತಿರುವ ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಿನೀಶ್‌ ಕೊಡಿಯೇರಿಯನ್ನು ಬಂಧಿಸಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. ಕಸ್ಟಡಿಯಲ್ಲಿರುವ ಅವಧಿಯಲ್ಲಿ ವಕೀಲರನ್ನು ಭೇಟಿಮಾಡಲು ಅವಕಾಶ ಕೋರಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬಂಧನದಲ್ಲಿರುವ ಅವಧಿಯಲ್ಲಿ ವಕೀಲರನ್ನು ಭೇಟಿಮಾಡಲು ಅವಕಾಶ ನೀಡುವುದಾಗಿ ಇ.ಡಿ ಪರ ವಕೀಲರು ನ್ಯಾಯಾಲಯಕ್ಕೆ ಬುಧವಾರ ತಿಳಿಸಿದರು. ಬಳಿಕ ಬಿನೀಶ್‌ ಕೊಡಿಯೇರಿ ಅರ್ಜಿಯನ್ನು ಹಿಂದಕ್ಕೆ ಪಡೆದರು.

ನೇರ ಭೇಟಿಗೆ ಅವಕಾಶವಿಲ್ಲ: ಅರ್ಜಿದಾರರ ಪರ ವಕೀಲರೊಬ್ಬರು ಅರ್ಜಿ ಸಲ್ಲಿಕೆಗೂ ಮುನ್ನ ಖುದ್ದಾಗಿ ಮುಖ್ಯ ನ್ಯಾಯಮೂರ್ತಿ ನಿವಾಸಕ್ಕೆ ಬಂದಿದ್ದನ್ನು ವಿಚಾರಣೆ ವೇಳೆ ಪ್ರಸ್ತಾಪಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌, ‘ಎಲ್ಲ ವಕೀಲರೂ ತಮ್ಮ ವಾದವನ್ನು ಇ–ಮೇಲ್‌ ಅಥವಾ ವೆಬ್‌ ಪೋರ್ಟಲ್‌ ಮೂಲಕವೇ ಮಂಡಿಸಬೇಕು’ ಎಂದು ಸೂಚಿಸಿದರು.

ವಾದ ಮಂಡನೆಗೆ ಹಾಜರಾಗಿದ್ದ ಹಿರಿಯ ವಕೀಲರು, ಆರೋಪಿ ಪರ ವಕೀಲರ ಪರವಾಗಿ ನ್ಯಾಯಾಲಯದ ಕ್ಷಮೆ ಯಾಚಿಸಿದರು. ‘ಕಕ್ಷಿದಾರರ ಹಿತಾಸಕ್ತಿ ರಕ್ಷಿಸುವ ಧಾವಂತದಲ್ಲಿ ಅಂತಹ ತಪ್ಪು ಮಾಡಿದ್ದಾರೆ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಕುರಿತು ಎಲ್ಲ ವಕೀಲರಿಗೂ ಮಾಹಿತಿ ನೀಡಲಾಗಿದೆ. ವಕೀಲರು ಕಡ್ಡಾಯವಾಗಿ ಇ–ಮೇಲ್‌ ಅಥವಾ ವೆಬ್‌ ಪೋರ್ಟಲ್‌ ಮೂಲಕವೇ ತಮ್ಮ ಅರ್ಜಿ ಸಲ್ಲಿಕೆ, ವಾದ ಮಂಡನೆ ಮಾಡಬೇಕು. ಆ ಬಳಿಕವೇ ನ್ಯಾಯಾಂಗದ ಅಧಿಕಾರಿಗಳು ಮುಂದಿನ ಕ್ರಮ ಜರುಗಿಸುತ್ತಾರೆ’ ಎಂದು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT