ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ಕಾಯಿನ್ ಹಗರಣ: 'ಸುಪ್ರೀಂ' ತನಿಖೆಗೆ ಪ್ರಿಯಾಂಕ್‌ ಖರ್ಗೆ ಆಗ್ರಹ

Last Updated 12 ನವೆಂಬರ್ 2021, 11:15 IST
ಅಕ್ಷರ ಗಾತ್ರ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಮೂಲಕ ವಶಪಡಿಸಿಕೊಂಡ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣದ ಕುರಿತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸರ್ಕಾರ ನಡೆಸುವ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಹಗರಣದಲ್ಲಿ ಪೊಲೀಸರು, ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ಸೇರಿದಂತೆ ಹಲವರು ಶಾಮೀಲಾಗಿದ್ದಾರೆ. ಆದ್ದರಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲೇ ತನಿಖೆ ನಡೆಸಬೇಕು’ ಎಂದರು.

ಸತ್ಯಾಂಶ ಹೊರಬಂದ ಬಳಿಕ ಮುಂದಿನ ಕ್ರಮ ಆಗುತ್ತದೆ. ಮೂರನೇ ಮುಖ್ಯಮಂತ್ರಿ ಯಾರಾದರೂ ಆಗಲಿ. ಆ ಬಗ್ಗೆ ತಾವೇನೂ ಹೇಳುವುದಿಲ್ಲ. ಮಾಜಿ ಗೃಹ ಸಚಿವರೂ ಆಗಿರುವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲವೂ ಗೊತ್ತಿದೆ. ಅವರೇ ಜನರ ಎದುರು ಸತ್ಯ ಹೇಳಲಿ ಎಂದು ಒತ್ತಾಯಿಸಿದರು.

ಶ್ರೀಕಿಯನ್ನು ಬಂಧಿಸಿದ ನಂತರ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಹಲವು ಅನುಮಾನಗಳಿವೆ. ₹ 9 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಿಸಿದ್ದರು. ಇನ್‌ಸ್ಪೆಕ್ಟರ್‌ ಶ್ರೀಧರ್‌ ಪೂಜಾರ್‌ ಎಂಬುವವರು ಪಂಚನಾಮೆಗೆ ಸಾಕ್ಷಿಗಳನ್ನಾಗಿ ಬೆಸ್ಕಾಂ ಲೈನ್‌ಮನ್‌ ಮತ್ತು ವಾಣಿಜ್ಯ ತೆರಿಗೆ ಇಲಾಖೆಯವರನ್ನು ಕರೆಸಿದ್ದರು. ಬಿಟ್‌ಕಾಯಿನ್‌ ಬಗ್ಗೆ ಲೈನ್‌ಮನ್‌ಗಳಿಗೆ ಏನು ಗೊತ್ತಿರಲು ಸಾಧ್ಯ ಎಂದು ಪ್ರಶ್ನಿಸಿದರು.

ಬಿಟ್‌ಕಾಯಿನ್‌ ವರ್ಗಾಯಿಸಿಕೊಂಡು ಹವಾಲಾ ಮೂಲಕ ಹಣ ಕೊಡುತ್ತಿದ್ದ ರಾಬಿನ್‌ ಖಂಡೇಲ್‌ವಾಲಾ ಎಂಬಾತ ಮೌರ್ಯ ಹೋಟೆಲ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದ. ಆತನ ಬಗ್ಗೆ ಸರಿಯಾದ ತನಿಖೆಯನ್ನೇ ನಡೆಸಿಲ್ಲ. ಶ್ರೀಕಿ ವಾಲೆಟ್‌ನಲ್ಲಿ 31 ಬಿಟ್‌ಕಾಯಿನ್‌ಗಳು ಇದ್ದವು ಎಂದು ಹೇಳಲಾಗಿತ್ತು. ನಂತರ ವಾಲೆಟ್‌ ತೆರೆದಾಗ ಅಲ್ಲಿ 186 ಬಿಟ್‌ಕಾಯಿನ್‌ಗಳು ಇದ್ದವು. 31 ಬಿಟ್‌ಕಾಯಿನ್‌ಗಳು 186 ಆಗಿದ್ದು ಹೇಗೆ ಎಂದು ಪ್ರಿಯಾಂಕ್‌ ಕೇಳಿದರು.

ಪೊಲೀಸರ ವಶದಲ್ಲಿದ್ದಾಗ ತನಗೆ ಡ್ರಗ್ಸ್‌ ನೀಡಲಾಗಿತ್ತು ಎಂಬುದನ್ನು ಶ್ರೀಕಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಆ ಬಗ್ಗೆ ಸರಿಯಾದ ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವಲ್ಲೂ ಪೊಲೀಸರು ವಿಳಂಬ ಮಾಡಿದ್ದಾರೆ. ಇದೆಲ್ಲವೂ ಅಕ್ರಮ ನಡೆದಿರುವ ಸುಳಿವು ನೀಡುತ್ತವೆ ಎಂದು ಹೇಳಿದರು.

ರಾಜ್ಯ ಸರ್ಕಾರ ತಕ್ಷಣವೇ ಪ್ರಕರಣವನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT