ಬಿಟ್ಕಾಯಿನ್ ಹಗರಣ, ಕತ್ತಲಲ್ಲಿ ಕಪ್ಪು ಬೆಕ್ಕು ಹುಡುಕುವ ಯತ್ನ: ಸಿದ್ದರಾಮಯ್ಯ

ಬೆಂಗಳೂರು: ಬಿಟ್ಕಾಯಿನ್ ಹಗರಣದಲ್ಲಿ ದಾಖಲೆಗಳನ್ನು ಮುಂದಿಡಲು ಭಯವೇಕೆ. ನಿಮ್ಮ ಪಕ್ಷದ ನಾಯಕರ ಬುಡ ಸುತ್ತಿಕೊಳ್ಳಬಹುದೇ ಎಂಬ ಭಯ ಕಾಡುತ್ತಿದೆಯೇ ಎಂದು ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹ್ಯಾಕಿಂಗ್ ಆರೋಪಿ ಶ್ರೀಕಿ ಕಾಂಗ್ರೆಸ್ ನಾಯಕರ ಮಕ್ಕಳ ಜತೆ ಸಂಪರ್ಕ ಹೊಂದಿರುವುದು ಸುಳ್ಳೇ’ ಎಂದು ಪ್ರಶ್ನಿಸಿದೆ.
‘ನೀವು ಟಿಪ್ಪು ಕುರಿತಾದ ಸುಳ್ಳು ಇತಿಹಾಸ ಓದುವ ಬದಲು ಬಿಟ್ಕಾಯಿನ್ ಕುರಿತಾದ ದೋಷಾರೋಪ ಪಟ್ಟಿ ತರಿಸಿಕೊಂಡು ಮೊದಲು ಓದಿ. ಆಗ ನಿಮ್ಮ ಪಕ್ಷದ ನಾಯಕರು ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದಾರೆಂಬುದು ಅರ್ಥವಾಗುತ್ತದೆ’ ಎಂದು ಹೇಳಿದೆ.
‘ಬಿಟ್ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಅಕ್ಷರಶಃ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲದ ವಸ್ತುವನ್ನು ಇದೆ ಎಂದು ಸ್ಥಾಪಿಸುವ ಭ್ರಮಾತ್ಮಕ ಕಾಯಿಲೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವಂತಿದೆ’ ಎಂದು ಬಿಜೆಪಿ ಹರಿಹಾಯ್ದಿದೆ.
‘ಡಾರ್ಕ್ನೆಟ್ ಮತ್ತು ಬಿಟ್ಕಾಯಿನ್ ಜತೆ ಡ್ರಗ್ಸ್ ಹಗರಣಕ್ಕೆ ನಂಟಿದೆ ಎಂದು ನಾವು ಮೊದಲೇ ಪ್ರತಿಪಾದಿಸಿದ್ದೆವು. ಡಿ.ಕೆ.ಶಿವಕುಮಾರ್ ಆಪ್ತ ಮೊಹಮ್ಮದ್ ನಲಪಾಡ್, ಉಮರ್ ನಲಪಾಡ್ ಅವರು ಬಿಟ್ಕಾಯಿನ್ ದಂಧೆಯ ಆರೋಪಿಯ ಜತೆ ಹೊಂದಿರುವ ನಂಟೇ ಇದಕ್ಕೆ ಸಾಕ್ಷಿ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಶ್ರೀಕಿ ನಿರಾತಂಕವಾಗಿ ಓಡಾಡಿಕೊಂಡು ಇದ್ದರಲ್ಲವೇ’ ಎಂದೂ ಪ್ರಶ್ನಿಸಿದೆ.
‘ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಶ್ರೀಕಿ ಜತೆಗೆ ವ್ಯವಹಾರ ನಡೆಸಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಿದೆ’ ಎಂದೂ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.