ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ಫಿನೆಕ್ಸ್‌ ಹ್ಯಾಕ್: ₹56 ಸಾವಿರ ಕೋಟಿ ದೋಚಿದ ಪ್ರಕರಣ, ಶ್ರೀಕಿ ನಂಟು?

ತನಿಖೆ ವಿಸ್ತರಿಸದ ಪೊಲೀಸರು
Last Updated 12 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: 2016ರ ಆಗಸ್ಟ್‌ 2ರಂದು ಹಾಂಕಾಂಗ್‌ ಮೂಲದ ಬಿಟ್‌ಫಿನೆಕ್ಸ್‌ ಬಿಟ್‌ಕಾಯಿನ್‌ ಎಕ್ಸ್‌ಚೇಂಜ್‌ ಹ್ಯಾಕ್‌ ಮಾಡಿ 1,19,755 ಬಿಟ್‌ ಕಾಯಿನ್‌ಗಳನ್ನು ದೋಚಿದ್ದ‍ಪ್ರಕರಣದಲ್ಲಿ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ನಂಟಿದೆಯೇ ಎಂಬ ಸಂಶಯ ದಟ್ಟವಾಗುತ್ತಿದೆ.

ಶ್ರೀಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಬಿಟ್ ಫಿನೆಕ್ಸ್‌ ಹ್ಯಾಕಿಂಗ್‌ನಲ್ಲಿ ಈತ ಶಾಮೀಲಾಗಿರುವ ಖಚಿತ ಸುಳಿವು ರಾಜ್ಯದ ತನಿಖಾ ಸಂಸ್ಥೆಗಳಿಗೆ ಸಿಕ್ಕಿತ್ತು. ಹಾಗಿದ್ದರೂ ರಾಜ್ಯದ ಸಂಸ್ಥೆಗಳು ತನಿಖೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ವಿಳಂಬ ಮಾಡಿರುವುದು ಅನುಮಾನಗಳ ಹುತ್ತವನ್ನು ಬೆಳೆಸುತ್ತಿದೆ.

2016ರಲ್ಲಿ ಎರಡು ಬಾರಿ ತಾನು ಬಿಟ್‌ಫಿನೆಕ್ಸ್‌ ಎಕ್ಸ್‌ಚೇಂಜ್‌ನ ಸರ್ವರ್‌ ಅನ್ನೇ ಹಿಡಿತಕ್ಕೆ ತೆಗೆದುಕೊಂಡು 2,000 ಬಿಟ್‌ಕಾಯಿನ್‌ಗಳನ್ನು ದೋಚಿದ್ದಾಗಿ ಶ್ರೀಕೃಷ್ಣ ಸಿಸಿಬಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದ. ಅದೇ ಅವಧಿಯಲ್ಲಿ ಬಿಟ್‌ಫಿನೆಕ್ಸ್‌‌ ಎಕ್ಸ್‌ಚೇಂಜ್‌ನಿಂದ ಸದ್ಯದ ಮಾರುಕಟ್ಟೆ ಮೌಲ್ಯದಲ್ಲಿ ₹ 56,000 ಕೋಟಿ ಮೊತ್ತದ ಬಿಟ್‌ ಕಾಯಿನ್‌ಗಳನ್ನು ಹ್ಯಾಕರ್‌ಗಳು ದೋಚಿದ್ದರು. ಈ ತಂಡದ ಭಾಗವಾಗಿದ್ದ ಶ್ರೀಕಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ‘ಕೋಲ್ಡ್‌ ವ್ಯಾಲೆಟ್‌’ಗಳಲ್ಲಿ (ರಹಸ್ಯ ಆನ್ಲೈನ್‌ ವ್ಯಾಲೆಟ್‌) ಅಡಗಿಸಿಟ್ಟುಕೊಂಡು, ಬಳಿಕ ವರ್ಗಾವಣೆ ಮಾಡಿರುವ ಅನುಮಾನ ದಟ್ಟವಾಗಿದೆ.

2020ರ ನವೆಂಬರ್‌14ರಂದು ಶ್ರೀಕೃಷ್ಣನನ್ನು ಪೊಲೀಸರು ಬಂಧಿಸಿದ್ದರು. ಬಿಟ್‌ಫಿನೆಕ್ಸ್‌‌ ಸರ್ವರ್‌ನಿಂದ ಬಿಟ್‌ಕಾಯಿನ್‌ಗಳನ್ನು ದೋಚಿರುವುದಾಗಿ ಆರೋಪಿ ಆರಂಭದಲ್ಲೇ ತಪ್ಪೊಪ್ಪಿಕೊಂಡಿದ್ದ. ಆದರೆ, ಪ್ರಕರಣ ಅಂತರರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿಕೊಂಡಿದೆ ಎಂಬುದನ್ನು 2021ರ ಏಪ್ರಿಲ್‌ 28ರಂದು ಸಿಐಡಿಯ ಇಂಟರ್‌ಪೋಲ್‌ ಸಮನ್ವಯ ಅಧಿಕಾರಿಯ ಗಮನಕ್ಕೆ ತರಲಾಗಿತ್ತು. ಆ ಬಳಿಕವೂ ಆರು ತಿಂಗಳು ಕಳೆದಿದ್ದು, ಇಂಟರ್‌ಪೋಲ್‌ ನೆರವಿನಲ್ಲಿ ತನಿಖೆಯನ್ನು ವಿಸ್ತರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ಆರೋಪಿಗಳ ಜತೆ ನಂಟು: ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕಿಂಗ್‌ ನಡೆಸಿರುವುದು, ಬಿಟ್‌ಕಾಯಿನ್‌ಗಳನ್ನು ದೋಚಿ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾವಣೆ ಮಾಡಿರುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೃಹತ್ತಾದ ಹ್ಯಾಕರ್‌ಗಳ ಜಾಲವೊಂದನ್ನು ಕಟ್ಟಿಕೊಂಡಿರುವ ಕುರಿತು ಶ್ರೀಕಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಆರೋಪಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೃಹತ್‌ ಪ್ರಮಾಣದ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವ ಸುಳಿವು ತನಿಖೆಯ ಆರಂಭಿಕ ಹಂತದಲ್ಲೇ ನಗರದ ಪೊಲೀಸರಿಗೆ ದೊರಕಿತ್ತು ಎಂಬ ಅಂಶ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲೇ ಇದೆ.

ಇಸ್ರೇಲ್‌ ಸೇರಿದಂತೆ ವಿವಿಧ ರಾಷ್ಟ್ರಗಳ ಹ್ಯಾಕರ್‌ಗಳ ತಂಡ ಕಟ್ಟಿಕೊಂಡು ಬಿಟ್‌ಫಿನೆಕ್ಸ್‌‌ ಸರ್ವರ್‌ಗೆ ಲಗ್ಗೆ ಹಾಕಿದ್ದಾಗಿ ಶ್ರೀಕಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದ. 2016ರ ಬಿಟ್‌ಫಿನೆಕ್ಸ್‌‌ ಸರ್ವರ್‌ ಹ್ಯಾಕಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ನಲ್ಲಿ ಎಲಿ ಗಿಗಿ ಮತ್ತು ಅಸ್ಸಾಫ್‌ ಗಿಗಿ ಎಂಬ ಸಹೋದರರನ್ನು 2019ರಲ್ಲಿ ಬಂಧಿಸಲಾಗಿತ್ತು. ಇದೇ ತಂಡವೇ 1.20 ಲಕ್ಷ ಬಿಟ್‌ ಕಾಯಿನ್‌ಗಳನ್ನು ದೋಚಿ, ರಹಸ್ಯ ವ್ಯಾಲೆಟ್‌ಗಳಿಗೆ ವರ್ಗಾಯಿಸಿಕೊಂಡಿರಬಹುದು ಎಂಬ ಶಂಕೆ ಈಗ ಬಲವಾಗುತ್ತಿದೆ.

ಬಿಟ್‌ಕಾಯಿನ್‌ ನಿಗೂಢ ಕಣ್ಮರೆ: ಬಿಟ್‌ಫಿನೆಕ್ಸ್‌‌ ಸರ್ವರ್‌ನಿಂದ ಹ್ಯಾಕರ್‌ಗಳು 2016ರಲ್ಲಿ ದೋಚಿದ್ದ ಬಿಟ್‌ಕಾಯಿನ್‌ಗಳು 2020ರ ನವೆಂಬರ್‌ ಮತ್ತು 2024ರ ಏಪ್ರಿಲ್‌ನಲ್ಲಿ ಡಾರ್ಕ್‌ನೆಟ್‌ಗಳ ಮೂಲಕ ಖಾಸಗಿ ವ್ಯಾಲೆಟ್‌ಗಳಿಗೆ ವರ್ಗಾವಣೆ ಆಗಿವೆ. ಅಲ್ಲಿಂದ ಅವುಗಳನ್ನು ಬೇರೆಡೆ ವರ್ಗಾಯಿಸಿಕೊಳ್ಳಲಾಗಿದೆ ಎಂಬ ಸಂಗತಿ ‘ಎಲ್ಲಿಪ್ಟಿಕ್‌’ ಎಂಬ ಬ್ಲಾಕ್‌ಚೈನ್‌ ವಿಶ್ಲೇಷಣಾ ಸಂಸ್ಥೆ ಬಹಿರಂಗಡಿಸಿದ ವರದಿಯಲ್ಲಿದೆ. ‘ಅಲ್ಫಾ ಬೇ’ ಮತ್ತು ‘ಹೈಡ್ರಾ’ ಎಂಬ ಡಾರ್ಕ್‌ನೆಟ್‌ಗಳಿಂದ ‘ಜಾಯಿನ್‌ ಮಾರ್ಕೆಟ್‌’ ಮತ್ತು ‘ವಸಾಬಿ’ ಎಂಬ ರಹಸ್ಯ ವ್ಯಾಲೆಟ್‌ಗಳಿಗೆ ವರ್ಗಾಯಿಸಿರುವುದು ದೃಢಪಟ್ಟಿದೆ.

‘ನನ್ನ ‘ಕೋಲ್ಡ್‌ ವ್ಯಾಲೆಟ್‌’ನಲ್ಲಿ ಬಿಟ್‌ಕಾಯಿನ್‌ಗಳಿದ್ದು, ಅವುಗಳನ್ನು ಯೂರೋಪ್‌ಗೆ ವರ್ಗಾಯಿಸಿ ಭಾರತಕ್ಕೆ ಹಣ ತರಿಸಿಕೊಳ್ಳಲು ಪ್ರಯತ್ನಿಸಿದ್ದೆ’ ಎಂದು ಶ್ರೀಕೃಷ್ಣ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿರುವುದು ಆರೋಪಪಟ್ಟಿಯಲ್ಲಿ ದಾಖಲಾಗಿದೆ. ಬಿಟ್‌ಫಿನೆಕ್ಸ್‌‌ನಿಂದ ದೋಚಿದ್ದ ಬಿಟ್‌ಕಾಯಿನ್‌ಗಳ ಕುರಿತೇ ಆತ ಪೊಲೀಸರಿಗೆ ತಿಳಿಸಿರುವ ಸಾಧ್ಯತೆ ಇದೆ. 2020ರ ನವೆಂಬರ್‌ ಮತ್ತು 2021ರ ಏಪ್ರಿಲ್‌ನಲ್ಲಿ ಡಾರ್ಕ್‌ನೆಟ್‌ ಮೂಲಕ ನಡೆದಿರುವ ಬಿಟ್‌ಕಾಯಿನ್‌ಗಳ ವರ್ಗಾವಣೆಯಲ್ಲೂ ಆತನ ಕೈವಾಡ ಇರಬಹುದು ಎಂಬ ಅನುಮಾನ ರಾಜ್ಯದ ಪೊಲೀಸ್‌ ಇಲಾಖೆಯೊಳಗೆ ಕೇಳಿಬರುತ್ತಿದೆ.

40 ಕೋಟಿ ಡಾಲರ್‌ ಬಹುಮಾನ ಘೋಷಿಸಿದ್ದ ಬಿಟ್‌ಫಿನೆಕ್ಸ್‌

ಹ್ಯಾಕರ್‌ಗಳು ದೋಚಿದ್ದ 1.20 ಲಕ್ಷ ಬಿಟ್‌ಕಾಯಿನ್‌ಗಳ ಕುರಿತು ನಾಲ್ಕು ವರ್ಷಗಳಾದರೂ ಬಿಟ್‌ಫಿನೆಕ್ಸ್‌ ಕಂಪನಿಗೆ ಸುಳಿವು ದೊರಕಿರಲಿಲ್ಲ. ಈ ಬಿಟ್‌ಕಾಯಿನ್‌ಗಳ ಕುರಿತು ಖಚಿತ ಸುಳಿವು ನೀಡಿದವರಿಗೆ 40 ಕೋಟಿ ಅಮೆರಿಕನ್‌ ಡಾಲರ್‌ ಬಹುಮಾನ ನೀಡುವುದಾಗಿ 2020ರ ಆಗಸ್ಟ್‌ನಲ್ಲಿ ಕಂಪನಿ ಪ್ರಕಟಿಸಿತ್ತು. ಅದಾದ ಮೂರು ತಿಂಗಳಲ್ಲೇ ‘ಕೋಲ್ಡ್‌ ವ್ಯಾಲೆಟ್‌’ಗಳಲ್ಲಿದ್ದ ಬಿಟ್‌ಕಾಯಿನ್‌ಗಳ ಚಲನೆ ಆರಂಭವಾಗಿತ್ತು.

ಪೊಲೀಸರ ವಶದಲ್ಲಿದ್ದಾಗಲೇ ಅಕ್ರಮ?

2020ರ ನವೆಂಬರ್‌ 14ರಂದು ಪೊಲೀಸರಿಗೆ ಸೆರೆಸಿಕ್ಕಿದ್ದ ಶ್ರೀಕಿ, 2021ರ ಏಪ್ರಿಲ್‌ 17ರವರೆಗೂ ನ್ಯಾಯಾಂಗ ಬಂಧನ ಮತ್ತು ಪೊಲೀಸ್‌ ಕಸ್ಟಡಿಯಲ್ಲೇ ಇದ್ದ. ಈ ಅವಧಿಯಲ್ಲಿ ಬೃಹತ್‌ ಪ್ರಮಾಣದ ಬಿಟ್‌ಕಾಯಿನ್‌ ಮತ್ತು ಹಣಕಾಸು ಸಂಸ್ಥೆಗಳ ಸರ್ವರ್‌ಗಳನ್ನು ಹ್ಯಾಕ್‌ ಮಾಡಿ ಪೊಲೀಸ್‌ ಅಧಿಕಾರಿಗಳು, ಅಧಿಕಾರಸ್ಥ ರಾಜಕಾರಣಿಗಳಿಗೆ ಸಂಬಂಧಿಸಿದವರಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿದೆ.

ಇದೇ ಅವಧಿಯಲ್ಲಿ ‘ಕೋಲ್ಡ್‌ ವ್ಯಾಲೆಟ್‌’ನಲ್ಲಿದ್ದ ಬಿಟ್‌ಫಿನಿಕ್ಸ್‌ ಬಿಟ್‌ ಕಾಯಿನ್‌ಗಳ ವರ್ಗಾವಣೆಯೂ ನಡೆದಿದೆ. ಇದು ಕೂಡ ರಾಜ್ಯದ ‘ಬಿಟ್‌ಕಾಯಿನ್‌ ಹಗರಣ’ದ ಜತೆ ನಂಟು ಹೊಂದಿರುವ ಸಾಧ್ಯತೆ ಇದೆ ಎಂಬ ಮಾತುಗಳು ಪೊಲೀಸರ ವಲಯದಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT