ಬೆಂಗಳೂರು: ಜಾರ್ಜ್ ಸೋರೋಸ್‌ನಂಥ ವಿದೇಶಿ ಮಾಫಿಯಾಗಳೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಜಾರ್ಜ್ ಸೋರೋಸ್ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತಾನು ಮತ್ತೊಮ್ಮೆ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಸಂಗತಿ ಕಾಂಗ್ರೆಸ್‌ಗೆ ಖಾತ್ರಿಯಾಗಿದೆ. ಹಾಗಾಗಿ ಈ ದೇಶವನ್ನು ಒಡೆದು ಆಳಬೇಕೆನ್ನುವ ನಿರ್ಧಾರಕ್ಕೆ ಬಂದಿದೆ. ಅದರ ಭಾಗವೇ ‘ಜಾರ್ಜ್ ಸೋರೋಸ್! ಸೋರೋಸ್ ಎಂಬ ವಿದೇಶಿ ಮಾಫಿಯಾ ಭಾರತದ ವಿರುದ್ಧ ವಿಷ ಕಾರುವುದಕ್ಕೆ ಕಾಂಗ್ರೆಸ್ ಪಕ್ಷವನ್ನು ತನ್ನ ಅಸ್ತ್ರವಾಗಿಸಿಕೊಂಡಿದ್ದಾನೆ’ ಎಂದು ವಾಗ್ದಾಳಿ ನಡೆಸಿದೆ.
‘ಭಾರತವನ್ನು ಒಳಗಿನಿಂದಲೇ ಟೊಳ್ಳುಗೊಳಿಸಿ ದೇಶ ಒಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಈ ದುರುದ್ದೇಶಕ್ಕಾಗಿ ಸೋರೋಸ್‌ನಂಥ ವಿದೇಶಿ ಮಾಫಿಯಾಗಳು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿವೆ. ಇನ್ನು ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಾಗಷ್ಟೇ ಉಳಿದಿಲ್ಲ. ಬದಲಾಗಿ ಟುಕ್ಡೆ ಟುಕ್ದೆ ಗ್ಯಾಂಗ್‌ನ ಲೀಡರ್ ಆಗಿ ತಿರುಗಿದೆ’ ಎಂದು ಬಿಜೆಪಿ ದೂರಿದೆ.
‘ಇದಕ್ಕೆ ಸಾಕ್ಷಿಯಂತೆ ಕೆಲ ದಿನಗಳ ಹಿಂದೆ ನರೇಂದ್ರ ಮೋದಿಯವರ ವಿರುದ್ಧ ಅಪಸತ್ಯಯುಕ್ತ ಕಿರುಚಿತ್ರ ಬಿಡುಗಡೆ ಮಾಡಿ ಷಡ್ಯಂತ್ರ ರೂಪಿಸಲಾಗಿತ್ತು. ಇವೆಲ್ಲವೂ ಭಾರತವನ್ನು ಛಿದ್ರಗೊಳಿಸಬೇಕೆಂಬ ಜಾಗತಿಕ ಹುನ್ನಾರದ ಭಾಗ. ರಾಹುಲ್ ಗಾಂಧಿಯ ಮಾತುಗಳು ಸೋರೋಸ್ ಅಂತವರ ಬಾಯಲ್ಲಿ ಪ್ರತಿಧ್ವನಿಸುತ್ತಿರುವುದು ಎಲ್ಲವನ್ನೂ ಬಹಿರಂಗಗೊಳಿಸುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.
‘ಇವರ ಈ ಪ್ರಯತ್ನ ಇದೇನೂ ಮೊದಲಲ್ಲ. ಶಾಹೀನ್ ಬಾಗ್, ಸಿಂಘು ಗಡಿ ಉದ್ವಿಗ್ನ, ಸಿಎಎ ಪ್ರತಿಭಟನೆ ಹೀಗೆ ದೇಶವನ್ನು ಅಸ್ಥಿರಗೊಳಿಸಲು ನಡೆಸಿದ ಷಡ್ಯಂತ್ರಗಳಲ್ಲೆಲ್ಲಾ ಸೋರೋಸ್ - ಕಾಂಗ್ರೆಸ್ ನೆರಳು ಎದ್ದು ಕಾಣುತ್ತದೆ. ಸೋರೋಸ್ ಸಂಸ್ಥೆಯ ಉಪಾಧ್ಯಕ್ಷ ಸಲಿಲ್ ಶೆಟ್ಟಿ ಕೂಡ ರಾಹುಲ್ ಗಾಂಧಿಯ ‘ಭಾರತ್ ತೋಡೊ’ ಯಾತ್ರೆಯ ಪ್ರಮುಖ ರುವಾರಿ’ ಎಂದು ಬಿಜೆಪಿ ಗುಡುಗಿದೆ.
‘ಇದೀಗ ವಿದೇಶಿ ಮಾಫಿಯಾಗಳ ಏಜೆಂಟ್ ಆಗಿರುವ ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ, ನರೇಂದ್ರ ಮೋದಿಯವರು ಮುನ್ನಡೆಸುತ್ತಿರುವ ಬಲಿಷ್ಠ-ಸಮರ್ಥ ಭಾರತಕ್ಕೆ ಯಾವುದೇ ಧಕ್ಕೆ ತರಲಾಗದು, ಭಾರತದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಅಸ್ಥಿರಗೊಳಿಸುವ ಎಲ್ಲ ಪ್ರಯತ್ನಗಳು ವಿಫಲವಾಗಲಿದೆ’ ಎಂದು ಬಿಜೆಪಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.