ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸಜ್ಜಾಗುತ್ತಿರುವ ರಾಷ್ಟ್ರೀಯ ಪಕ್ಷಗಳು: ಎಚ್ಚರಿಕೆ ಕೊಟ್ಟ ನೇತಾರರು

ನಾಯಕರಿಗೆ ಅಮಿತ್ ಶಾ –ರಾಹುಲ್‌ ತಾಕೀತು
Last Updated 4 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಗೆ ವರ್ಷದೊಳಗೆ ನಡೆಯಲಿರುವ ಚುನಾವಣೆಯ ಮೊದಲ ಅಂಕದ ಪರದೆ ಸರಿದು, ರಾಜ್ಯದ ನಾಯಕರು ಹುರಿಗೊಳ್ಳುತ್ತಿರುವ ಹೊತ್ತಿನಲ್ಲೇ ನಾಡಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷಗಳ ತಲೆಯಾಳುಗಳ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ.

ತಪ್ಪು ಮರುಕಳಿಸದಂತೆ ಜಾಗ್ರತೆ ವಹಿಸಿ: ಅಮಿತ್ ಶಾ

‘ಆಡಳಿತದ ಕಾರ್ಯಶೈಲಿ ಬದಲಿಸಿಕೊಳ್ಳಬೇಕು, ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಹೆಚ್ಚು ಆಕ್ರಮಣಕಾರಿ ರೀತಿಯಲ್ಲಿ ತಯಾರಿ ನಡೆಸಿಕೊಳ್ಳಬೇಕು ಮತ್ತು ಪ್ರವೀಣ್‌ ಹತ್ಯೆ ನಂತರ ನಡೆದ ಬೆಳವಣಿಗೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸರ್ಕಾರ ಮತ್ತು ಪಕ್ಷದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಜತೆ ಗುರುವಾರ ಪ್ರತ್ಯೇಕ ಸಭೆ ನಡೆಸಿದ ಅಮಿತ್ ಶಾ, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು. ಬೊಮ್ಮಾಯಿ ಜತೆ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಇದ್ದರು. ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಕರೆಸಿಕೊಂಡು ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳ ಬಗ್ಗೆ ಮಾಹಿತಿ ಪಡೆದರು. ಕೋಮು ಸಾಮರಸ್ಯ ಕದಡುವ ಪ್ರಯತ್ನಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕಬೇಕು ಎಂಬ ಸೂಚನೆಯನ್ನೂ ನೀಡಿದರೆಂದು ಮೂಲಗಳು ತಿಳಿಸಿವೆ.

ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ಯಡಿಯೂರಪ್ಪ ಅವರ ಜತೆ ಬೆಳಗಿನ ಉಪಹಾರ ಸೇವಿಸಿದ ಶಾ, ಸುಮಾರು ಅರ್ಧ ತಾಸು ಮಾತುಕತೆ ನಡೆಸಿದರು. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಜನ್ಮದಿನ ಕಾರ್ಯಕ್ರಮದ ಪರಿಣಾಮಗಳು ಮತ್ತು ಇತರ ರಾಜಕೀಯ ವಿದ್ಯಮಾನಗಳ ಬಗ್ಗೆ ಯಡಿಯೂರಪ್ಪ ಮಾಹಿತಿ ನೀಡಿದರು. ‘ಸಿದ್ದರಾಮಯ್ಯ ಜನ್ಮದಿನದಂದು ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಲ್ಲ ನಾಯಕರೂ ಒಗ್ಗಟ್ಟು ಪ್ರದರ್ಶಿಸಿದರು. ಇದನ್ನು ನಾವು ಹಗುರವಾಗಿ ಪರಿಗಣಿಸಬಾರದು. ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ ಹೆಜ್ಜೆ ಇಡಬೇಕು. ಇಲ್ಲವಾದರೆ ಚುನಾವಣೆಯಲ್ಲಿ ಕಷ್ಟವಾಗಬಹುದು’ ಎಂಬುದಾಗಿ ಯಡಿಯೂರಪ್ಪ ಹೇಳಿದ್ದಾಗಿ, ಮೂಲಗಳು ಹೇಳಿವೆ.

ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ಪಕ್ಷದ ಕಾರ್ಯಕರ್ತ ಪ್ರವೀಣ್‌ ಹತ್ಯೆ, ಆ ಬಳಿಕ ಪಕ್ಷದ ಕಾರ್ಯಕರ್ತರ ಆಕ್ರೋಶ ಮತ್ತು ರಾಜೀನಾಮೆ ಪರ್ವದ ಬಗ್ಗೆ ಯಡಿಯೂರಪ್ಪ ಅವರು ಶಾ ಅವರಿಗೆ ವಿವರ ನೀಡಿದರು.

ಪಕ್ಷ–ಸರ್ಕಾರದ ಮುಖ್ಯಸ್ಥರ ಜತೆ ಮಾತನಾಡಿದ ಶಾ ಅವರು, ‘ಚುನಾವಣೆ ಹೊತ್ತಿನಲ್ಲಿ ಪಕ್ಷದ ಜಿಲ್ಲಾ ಮಟ್ಟದ
ನಾಯಕರು, ಕಾರ್ಯಕರ್ತರು ಅಸಮಾಧಾನಗೊಂಡಾಗ ಅದನ್ನು ಬಗೆಹರಿಸಲು ತಕ್ಷಣವೇಕಾರ್ಯಪ‍್ರವೃತ್ತವಾಗಬೇಕಿತ್ತು. ಇಂತಹ ಬೆಳವಣಿಗೆಗಳು ಪಕ್ಷದ ಸಂಘಟನೆಗಳ ಮೇಲೆ ಹೊಡೆತ ಕೊಡುತ್ತವೆ. ಈ ಬಗ್ಗೆ ಸರ್ಕಾರ ಮತ್ತು ಪಕ್ಷ ಮುನ್ನಡೆಸುವವರು ಜಾಗರೂಕತೆಯಿಂದ ಇದ್ದು, ಇದು ಮರುಕಳಿಸದಂತೆ ಎಚ್ಚರವಹಿಸಿ’ ಎಂದಿದ್ದಾಗಿ ಗೊತ್ತಾಗಿದೆ.

ನಳಿನ್‌ ಮೇಲೂ ಬೇಸರ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರ ಮೇಲೂ ಶಾ ಬೇಸರಗೊಂಡಿದ್ದರು. ಶಾ ಅವರಿಗೆ ನಳಿನ್‌ ಹೂ ಗುಚ್ಛ ಕೊಡಲು ಹೋದಾಗ ಅದನ್ನು ವ್ಯಕ್ತಪಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಲೋಕಾಭಿರಾಮ ಅಷ್ಟೇ–ರವಿ: ‘ಸರ್ಕಾರದ ಅಥವಾ ಪಕ್ಷದ ಯಾವುದೇ ನಾಯಕರ ಬಗ್ಗೆ ಅಮಿತ್ ಶಾ ಏನೂ ಹೇಳಿಲ್ಲ. ಅಸಮಾಧಾನ ಮತ್ತು ಅತೃಪ್ತಿಯ ಪ್ರಶ್ನೆಯೇ ಇಲ್ಲ. ಈ ಕುರಿತು ವದಂತಿ ಹರಡಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಲಾಜಿಲ್ಲದೇ ಉಚ್ಚಾಟಿಸಿ:ರಾಹುಲ್‌ ಗಾಂಧಿ

ಮುಂಬರುವ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್‌ ‘ಸಾಮೂಹಿಕ ನಾಯಕತ್ವ’ದಲ್ಲಿ ಎದುರಿಸಲಿದೆ ಎಂದು ಸ್ಪಷ್ಟಡಿಸಿದ ಬಳಿಕವೂ ಪಕ್ಷದ ಕೆಲವು ನಾಯಕರು, ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ನಾಯಕ ರಾಹುಲ್‌ ಗಾಂಧಿ, ಅಂಥವರಿಗೆ ನೋಟಿಸ್‌ ನೀಡಿ ಪಕ್ಷದಿಂದಲೇ ಉಚ್ಚಾಟಿಸುವಂತೆ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆದಿದೆ. ಹೈಕಮಾಂಡ್‌ ಸೂಚನೆ ಹೊರತಾಗಿಯೂ ಮುಖ್ಯಮಂತ್ರಿ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ವಿಷಯ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಇದರಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.

25 ಸದಸ್ಯರಿರುವ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಪಕ್ಷ ಸಂಘಟನೆ, ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾರ್ಯತಂತ್ರ, ರಾಜ್ಯ ರಾಜಕೀಯದಲ್ಲಿನ ಪ್ರಸಕ್ತ ವಿದ್ಯಮಾನಗಳು, ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆದಿದೆ.

‘ಒಗ್ಗಟ್ಟಿನಿಂದ ಚುನಾವಣೆಗೆ ಹೋಗಬೇಕು. ಪಕ್ಷದ ಸೂಚನೆಯಿದು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಈ ಬಗ್ಗೆ ಈಗಾಗಲೇ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಆ ಬಳಿಕವೂ ಮುಖ್ಯಮಂತ್ರಿ ವಿಚಾರದಲ್ಲಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ.ಇಂಥ ನಡೆಯನ್ನು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದೇ ಪರಿಗಣಿಸಬೇಕಾಗುತ್ತದೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ’ ಎಂದು ಸಭೆಯಲ್ಲಿ ರಾಹುಲ್‌ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮೊದಲು ಮಾಡಬೇಕು. ಬಿಜೆಪಿ ವಿರುದ್ಧ ಹೋರಾಡುವುದು, ಆ ಪಕ್ಷದವರ ಜನವಿರೋಧಿ ನೀತಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಮೊದಲ ಆದ್ಯತೆಯಾಗಬೇಕಿದೆ. ಅದನ್ನು ಬಿಟ್ಟು ಮುಖ್ಯಮಂತ್ರಿ ಯಾರಾಗಬೇಕೆಂಬ ವಿಚಾರವೂ ಸೇರಿದಂತೆ, ಆಂತರಿಕ ವಿಚಾರಗಳನ್ನು ಪಕ್ಷದೊಳಗೆ ಚರ್ಚಿಸುವುದು ಸರಿಯಲ್ಲ’ ಎಂದೂ ರಾಹುಲ್‌ ಹೇಳಿದ್ದಾರೆ ಎಂದೂ ಗೊತ್ತಾಗಿದೆ.

‘ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು’ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್ ಪದೇ ಪದೇ ಹೇಳಿದ್ದು ಕಾಂಗ್ರೆಸ್‌ ಹೈಕಮಾಂಡ್‌ನ್ನು ಮುಜುಗರಕ್ಕೆ ಸಿಲುಕಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT