ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರಿಗೆ ಎರಡು ನಾಲಿಗೆ: ಸಿದ್ದರಾಮಯ್ಯ

Last Updated 13 ಆಗಸ್ಟ್ 2021, 18:32 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ರಾಜ್ಯ ಸರ್ಕಾರದ ನಿಲುವು ಏನು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಮೇಕೆದಾಟು ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿಯವರು ತಳೆದಿರುವ ಗಟ್ಟಿ ನಿಲುವಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಆದರೆ, ಬಿಜೆಪಿ ತಮಿಳುನಾಡು ರಾಜ್ಯ ಘಟಕ ಯೋಜನೆಯನ್ನು ವಿರೋಧಿಸುತ್ತಿದೆ. ಆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬಿಜೆಪಿ ತಮಿಳುನಾಡು ಘಟಕವನ್ನು ಬೆಂಬಲಿಸುತ್ತಿದ್ದಾರೆ. ಈ ದ್ವಂದ್ವ ನೀತಿ ಯಾಕೆ’ ಎಂದು ಪ್ರಶ್ನಿಸಿದ್ದಾರೆ.

‘ತಮ್ಮ ಸಡಿಲ ನಾಲಿಗೆಯ ಮೂಲಕ ವಿವಾದ ಸೃಷ್ಟಿಸುತ್ತಿರುವ ಸಿ.ಟಿ. ರವಿ ಅವರಂತಹ ಕೂಗು ಮಾರಿಗಳ ಬಾಯಿ ಮುಚ್ಚಿಸದೇ ಹೋದರೆ ನಾವೇ ಕಚ್ಚಾಡುವಂತಹ ವಾತಾವರಣ ನಿರ್ಮಾಣ ಆಗಬಹುದು’ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದಾರೆ.

‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂಬ ಕುವೆಂಪು ಅವರ ಕವನದ ಸಾಲುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್‌ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಸ್ಪಷ್ಟಪಡಿಸಬೇಕು. ನಾವು ಕೂಡಾ ಭಾರತೀಯರೇ; ಹಾಗಂತ ಇದಕ್ಕಾಗಿ ರಾಜ್ಯದ ಹಿತಾಸಕ್ತಿ ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ನೆಲ, ಜಲ, ಭಾಷೆಯ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ರಾಜಕೀಯ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೇಕೆದಾಟು ವಿಚಾರದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಬಿಜೆಪಿಯೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡು ಸರ್ಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಎರಡು ಜಲ ವಿದ್ಯುತ್‌ ಯೋಜನೆಗಳನ್ನು ಕರ್ನಾಟಕ ವಿರೋಧಿಸಿಲ್ಲ. ಮೇಕೆದಾಟು ಯೋಜನೆಯು ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ರೂಪಿಸಿರುವ ಯೋಜನೆ. ಎರಡೂ ನಗರಗಳಲ್ಲಿ ಕನ್ನಡಿಗರು ಮಾತ್ರ ವಾಸಿಸುತ್ತಿಲ್ಲ. ತಮಿಳು ಭಾಷಿಕರು ಸೇರಿದಂತೆ ವಿವಿಧ ರಾಜ್ಯಗಳ ಜನರಿದ್ದಾರೆ. ಕುಡಿಯುವ ನೀರು ಪೂರೈಸುವ ಯೋಜನೆಗೆ ತಮಿಳುನಾಡಿನ ವಿರೋಧ ಸಲ್ಲದು ಎಂದಿದ್ದಾರೆ.

ಶುಭಾಶಯ ಕೋರಿದ ಸಚಿವ ನಿರಾಣಿ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್‌. ನಿರಾಣಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿಮಾಡಿ, ಜನ್ಮದಿನದ ಶುಭಾಶಯ ಕೋರಿದರು.

ಗುರುವಾರ ಸಿದ್ದರಾಮಯ್ಯ ಅವರ ಜನ್ಮದಿನ. ಈ ಪ್ರಯುಕ್ತ ಶುಕ್ರವಾರ ಅವರನ್ನು ಭೇಟಿಯಾದ ನಿರಾಣಿ, ಶಾಲು ಹೊದಿಸಿ, ಹಾರ ಹಾಕಿ, ಹೂಗುಚ್ಛ ನೀಡಿ ಗೌರವಿಸಿದರು. ಕೆಲಕಾಲ ಚಚರ್ಚೆಯನ್ನೂ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT