ಬುಧವಾರ, ಡಿಸೆಂಬರ್ 8, 2021
28 °C

ಸಂವಿಧಾನ ಬದಲಿಸುವ ಮಾತಾಡುವ ಬಿಜೆಪಿಗರು ಕನ್ನಡಕ್ಕಾಗಿ ತಿದ್ದುಪಡಿ ತರಲಿ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂವಿಧಾನವನ್ನು ಬದಲಿಸುವ ಮಾತನಾಡುವ ಬಿಜೆಪಿ ನಾಯಕರು ಕನ್ನಡಕ್ಕಾಗಿ ಸಾಂವಿಧಾನಿಕ ತಿದ್ದಿಪಡಿ ಮಾಡಿ, ಕನ್ನಡಕ್ಕೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಪ್ರಯತ್ನಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ ಕುಮಾರಸ್ವಾಮಿ ಹೇಳಿದ್ದಾರೆ. 

‘ದೇಶದ ಇತರೆ ಅಧಿಕೃತ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡುವ ಸಾಧ್ಯತೆಗಳಿವೆಯೇ. ಕೇಂದ್ರ ಸರ್ಕಾರದ ಪ್ರಕಟಣೆ, ಅಧಿಸೂಚನೆಗಳು ಸ್ಥಳೀಯ ಭಾಷೆಯಲ್ಲೂ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ,’ ಎಂಬ ತಮಿಳುನಾಡಿನ ಎಂಡಿಎಂಕೆ ರಾಜ್ಯಸಭೆ ಸದಸ್ಯ ವೈಕೋ ಅವರ ಪ್ರಶ್ನೆಗೆ ಸಂಸತ್‌ನಲ್ಲಿ ಉತ್ತರ ನೀಡಿರುವ ಕೇಂದ್ರ ಸರ್ಕಾರ ಅಂಥ ಯಾವುದೇ ಪ್ರಸ್ತಾವ ಇಲ್ಲ ಎಂದು ಹೇಳಿದೆ. ಇದೇ ಹಿನ್ನೆಲೆಯಲ್ಲಿ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಎಚ್‌.ಡಿ ಕುಮಾರಸ್ವಾಮಿ, ‘ಕನ್ನಡ ರಾಷ್ಟ್ರಭಾಷೆಯೇ ‌ಕೇಂದ್ರಸರ್ಕಾರಿ ಆಡಳಿತದಲ್ಲಿ ಕನ್ನಡ ಸೇರಿ ಇತರ ಭಾಷೆಗಳನ್ನು ಸೇರಿಸಬೇಕಷ್ಟೆ. ಇದಕ್ಕಾಗಿ ಸಾಂವಿಧಾನಿಕ ತಿದ್ದುಪಡಿ ತರಬೇಕಿದೆ,’ ಎಂದು ಹೇಳಿದ್ದಾರೆ. 

ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲಾಗುವುದೇ ಎಂಬ ಪ್ರಶ್ನೆಗೆ ಕೇಂದ್ರ ಇಲ್ಲವೆಂದಿದೆ.ಇದು ಭಾಷಾ ತಿರಸ್ಕಾರದ ಸಂಕೇತ. ಆದರೆ ಹಿಂದಿಯಂತೆ ಕನ್ನಡವೂ ದೇಶದ ಅಧಿಕೃತ ಭಾಷೆ. ಕನ್ನಡ ರಾಷ್ಟ್ರಭಾಷೆಯೇ. ಕೇಂದ್ರಸರ್ಕಾರಿ ಆಡಳಿತದಲ್ಲಿ ಕನ್ನಡ ಸೇರಿ ಇತರ ಭಾಷೆಗಳನ್ನು ಸೇರಿಸಬೇಕಷ್ಟೆ ಎಂದಿದ್ದಾರೆ. 

ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಅಂಶಗಳಿವೆ. ಇದೇ ನೆಪದಲ್ಲಿ ಹಿಂದಿ ಹೇರುವ ಪ್ರಯತ್ನ ಕೇಂದ್ರ ಸರ್ಕಾರಗಳಿಂದ ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸುವ ಮಾತನಾಡುವ ಬಿಜೆಪಿ ನಾಯಕರು ಕನ್ನಡ ಮತ್ತು ಇತರ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲು ಪ್ರಯತ್ನಿಸಲಿ ಎಂದು ಆಗ್ರಹಿಸಿದ್ದಾರೆ. 

ಇತರ ಭಾಷೆಗಳಿಗೆ ಹಿಂದಿಯಷ್ಟು ಸ್ಥಾನಮಾನ ನೀಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿರುವ ಬಿಜೆಪಿ, ಹಿಂದಿಯೇತರ ರಾಜ್ಯಗಳ, ಹಿಂದಿಯೇತರ ಭಾಷಿಕರ ಸಂಸದರನ್ನೂ ಒಳಗೊಂಡು ಸರ್ಕಾರ ರಚಿಸಿದೆ ಎಂಬುದು ನೆನಪಿರಲಿ.ಎಲ್ಲ ಅಧಿಕೃತ ಭಾಷೆಗಳನ್ನು ಆಡಳಿತದಲ್ಲಿ ಜಾರಿಗೆ ತಂದು ಅವರೆಲ್ಲರ ಋಣ ತೀರಿಸುವುದು ಬಿಜೆಪಿಯ ಕರ್ತವ್ಯ ಎಂದು ನೆನಪಿಸಿದ್ದಾರೆ. 

ಕೇಂದ್ರ ಸರ್ಕಾರದ ಅಧಿಸೂಚನೆ, ಪ್ರಕಟಣೆಗಳು ಇತರೆ ಅಧಿಕೃತ ಭಾಷೆಗಳಲ್ಲಿಯೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆ ವೇಳೆ ಕೇಂದ್ರಕ್ಕೆ ಸೂಚನೆ ನೀಡಿದೆ. ಅಲ್ಲದೇ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ, ಎಲ್ಲ ಭಾಷೆಗಳೂ ಸರಿಸಮಾನ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು