ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಜಾತಿಯವರಿಗೆ ಹಿಂದುತ್ವದ ಅಫೀಮು ತಿನ್ನಿಸುವ ಬಿಜೆಪಿ: ಸಿದ್ದರಾಮಯ್ಯ

ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಸಿದ್ದರಾಮಯ್ಯ ಆರೋಪ
Last Updated 23 ಜನವರಿ 2023, 4:51 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿಯವರು ಮಂಗಳೂರು ಹಾಗೂ ಉಡುಪಿಯನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗಗಳ ಮಕ್ಕಳಿಗೆ ಹಿಂದುತ್ವದ ಅಫೀಮನ್ನು ತಿನ್ನಿಸುವ ಮೂಲಕ ಹೊಡೆದಾಟಕ್ಕೆ ಪ್ರಚೋದನೆ ನೀಡುತ್ತಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರು, ‘ಚರಂಡಿ, ಮೋರಿ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ. ಲವ್‌ ಜಿಹಾದ್‌ ಬಗ್ಗೆ ಮಾತನಾಡಿ’ ಎಂದು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಒಂದು ರಾಜಕೀಯ ಪಕ್ಷದ ಅಧ್ಯಕ್ಷರು ಕಾರ್ಯಕರ್ತರಿಗೆ ಹೇಳುವ ಮಾತಾ ಇದು. ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯವು ಆರ್ಥಿಕವಾಗಿ ದಿವಾಳಿಯಾಗಿದೆ. ಅವರ ಬಳಿ ಅಭಿವೃದ್ಧಿ ವಿಚಾರಗಳಿಲ್ಲ. ಹಾಗಾಗಿ ಜಾತಿ ಧರ್ಮದ ಆಧಾರದಲ್ಲಿ ಯುವಕರನ್ನು ಎತ್ತಿಕಟ್ಟಿ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನನ್ನನ್ನು ಹಿಂದೂ ವಿರೋಧಿ ಎಂದು ಬ್ರ್ಯಾಂಡ್‌ ಮಾಡಲಾಗುತ್ತಿದೆ. ಆರ್‌ಎಸ್‌ಎಸ್‌ ಪ್ರಕಾರ ಮಹಾತ್ಮ ಗಾಂಧಿ ಹಿಂದೂವಲ್ಲ, ಅವರನ್ನು ಕೊಂದ ನಾಥೂರಾಮ್‌ ಗೋಡ್ಸೆ ನಿಜವಾದ ಹಿಂದೂ. ಜವಹರಲಾಲ್‌ ನೆಹರೂ, ಡಾ.ಬಿ.ಆರ್‌.ಅಂಬೇಡ್ಕರ್‌ ಹಿಂದೂವಲ್ಲ, ಪ್ರಧಾನಿ ನರೇಂದ್ರ ಮೋದಿ ಮಹಾನ್‌ ಹಿಂದೂ. ನನ್ನ ಪ್ರಕಾರ ಮೋದಿ ಅವರಿಗಿಂತ ದೊಡ್ಡ ಸುಳ್ಳುಗಾರ ಯಾರೂ ಇಲ್ಲ’ ಎಂದರು.

‘ನಮ್ಮ ಧರ್ಮದ ಬಗ್ಗೆ ಅಭಿಮಾನ ಇರಲಿ. ಅದರ ಜೊತೆ ಪರಧರ್ಮ ಸಹಿಷ್ಣುತೆಯೂ ಮುಖ್ಯ. ಸಂವಿಧಾನ ಹೇಳುವುದೂ ಇದನ್ನೇ’ ಎಂದು ತಿಳಿಸಿದರು.

‘ಕರಾವಳಿಯ ಜನ ರಾಜಕೀಯ ಪ್ರಬುದ್ಧತೆ ಇರುವವರು. 2013ರಂತೆಯೇ ಈ ಬಾರಿಯೂ ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿ’ ಎಂದು ಅವರು ಕೋರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ನಾನು ಇಂಧನ ಸಚಿವನಾದಾಗ ರಾಜ್ಯದಲ್ಲಿ ವರ್ಷಕ್ಕೆ 10 ಸಾವಿರ ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿತ್ತು. ಜಗತ್ತಿನಲ್ಲೇ ಅತೀ ದೊಡ್ಡ ಸೌರ ವಿದ್ಯುತ್‌ ಪಾರ್ಕ್ ಸ್ಥಾಪಿಸಿ ವಿದ್ಯುತ್ ಉತ್ಪಾದನೆಯನ್ನು 20 ಸಾವಿರ ಮೆಗಾ ವಾಟ್‌ಗೆ ಹೆಚ್ಚಿಸಿದ್ದೇನೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ನನಗೆ ಪ್ರಮಾಣಪತ್ರ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದು ಹೇಗೆ ಎಂದು ಗೊತ್ತಿದೆ’ ಎಂದರು.

'ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತದೆ. ನಮಗೆ ಭಾವನಗಿಂತ ಬದುಕು ಮುಖ್ಯ. ಅಧಿಕಾರಕ್ಕೆ ಬರುವುದಕ್ಕಿಂತಲೂ ಜನರ ಬದುಕಿನಲ್ಲಿ ಬದಲಾವಣೆ ತರುವುದು ನಮಗೆ ಮುಖ್ಯ. ಕರಾವಳಿಯ ಯುವಜನರು ಉದ್ಯೋಗಕ್ಕಾಗಿ ದುಬೈ, ಮುಂಬೈ, ಬೆಂಗಳೂರಿಗೆ ವಲಸೆ ಹೋಗುವುದನ್ನು ತಡೆಯುವ ರೀತಿಯಲ್ಲಿ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಪಕ್ಷವು ಕಾರ್ಯಕ್ರಮ ರೂಪಿಸಲಿದೆ’ ಎಂದು ಭರವಸೆ ನೀಡಿದರು.

ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ್‌, ‘ಸದ್ಗುರುವಿಗೆ ₹ 100 ಕೋಟಿ ನೀಡಲು ಬಿಜೆಪಿ ಸರ್ಕಾರದ ಬಳಿ ಹಣ ವಿದೆ. ಆದರೆ, ಬಡಮಕ್ಕಳ ವಿದ್ಯಾರ್ಥಿವೇತನಕ್ಕೆ ಹಣವಿಲ್ಲ. ಇದು ಬಸವರಾಜ ಬೊಮ್ಮಾಯಿ ಆಡಳಿತ ವೈಖರಿ‘ ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ವಿಧಾನಸಭೆಯ ವಿರೋಧ ಪಕ್ಷದ ಉಪಾಧ್ಯಕ್ಷ ಯು.ಟಿ.ಖಾದರ್‌, ಜೆ.ಆರ್‌.ಲೋಬೊ, ಐವನ್‌ ಡಿಸೋಜ, ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿದರು.

ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಶಾಹುಲ್ ಹಮೀದ್‌ ವಂದಿಸಿದರು. ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಪಕ್ಷದ ಮುಖಂಡರಾದ ಬಿ.ಜನಾರ್ದನ ಪೂಜಾರಿ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಧು ಬಂಗಾರಪ್ಪ, ಪುಷ್ಪಾ ಅಮರನಾಥ್‌, ಸಚಿನ್‌ ಮೀಗ, ಮೊಹಮ್ಮದ್ ನಲಪ್ಪಾಡ್‌, ಶಕುಂತಳಾ ಶೆಟ್ಟಿ, ‌ಮೊಹಿಯುದ್ದೀನ್‌ ಬಾವ, ಕೃಪಾ ಆಳ್ವ, ಮಮತಾ ಗಟ್ಟಿ, ರೋಜಿ ಜಾನ್‌, ಕೀರ್ತಿ ಗಣೇಶ್‌, ಗಂಗಾಧರ ಗೌಡ ಮತ್ತಿತರರು ಇದ್ದರು.

****

ಪಕ್ಷಕ್ಕೆ ಮುಖಂಡರ ಸೇರ್ಪಡೆ

ಬಿಜೆಪಿ ಮುಖಂಡ ಅಶೋಕ ಕುಮಾರ್‌ ರೈ ಕೋಡಿಂಬಾಡಿ, ಧರಣಿ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷವನ್ನು ತೊರೆದಿದ್ದ ಎಂ.ಜಿ.ಹೆಗಡೆ ಮರುಸೇರ್ಪಡೆಯಾದರು.


****

ದೇಶದ ವೇದ ಉಪನಿಷತ್ತು, ಭಗವದ್ಗೀತೆಗಳಲ್ಲಿ ಹಿಂದುತ್ವ ಪದ ಬಳಕೆಯೇ ಆಗಿಲ್ಲ. ಇದು ಆರ್‌ಎಸ್‌ ಮುಖ್ಯ ಕಚೇರಿ ಇರುವ ನಾಗಪುರದ ಕೊಡುಗೆ
ರಣದೀಪ್‌ ಸಿಂಗ್‌ ಸುರ್ಜೇವಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT