ನಾಗರಹೊಳೆ ರಾಷ್ಟ್ರೀಯ ಉದ್ಯಾನ: ರಾಜೀವ್ ಹೆಸರು ಕೈಬಿಡಲು ಸಿಎಂಗೆ ಪ್ರತಾಪ್ ಪತ್ರ

ಬೆಂಗಳೂರು: ‘ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನಾಗರಹೊಳೆ ರಾಷ್ಟ್ರೀಯ ಉದ್ಯಾನ’ ಎಂದು ಮರು ನಾಮಕಾರಣ ಮಾಡಬೇಕೆಂದು ಕೋರಿ ಸಂಸದ ಪ್ರತಾಪಸಿಂಹ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಾಪ್ ಸಿಂಹ ಅವರು ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆಯ ಕುರಿತು ಗುರುವಾರ ಟ್ವಿಟರ್‌ನಲ್ಲಿ ಮನವಿ ಪತ್ರ ಪ್ರಕಟಿಸಿದ್ದರು ಹಾಗೂ ಶುಕ್ರವಾರ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಕುರಿತು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಕಾರಾತ್ಮವಾಗಿ ಸ್ಪಂದಿಸಿರುವುದಾಗಿ ಟ್ವೀಟಿಸಿದ್ದಾರೆ.
‘ಈ ಕುರಿತು ಕೊಡಗಿನಲ್ಲಿ ಆನ್‌ಲೈನ್ ಅಭಿಯಾನವೂ ನಡೆದಿದೆ. ದೇಶದಲ್ಲಿರುವ ರಾಷ್ಟ್ರೀಯ ಉದ್ಯಾನಗಳಲ್ಲಿ ಹಲವು ಉದ್ಯಾನಗಳು ನೆಹರೂ ಕುಟುಂಬದವರ ಹೆಸರಿನಲ್ಲಿವೆ. ಕೊಡಗಿನ ಅಸ್ಮಿತೆಗಾಗಿ ಮರುನಾಮಕಾರಣ ಮಾಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ವಿಸ್ತರಣೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುದಾನ ಕೋರಿ & ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪರವರ ಹೆಸರು ಮರುನಾಮಕರಣ ಮಾಡಲು ಸಲ್ಲಿಸಿದ ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BSBommai ರವರಿಗೆ ಧನ್ಯವಾದಗಳು pic.twitter.com/NhYFBa3KDt
— Pratap Simha (@mepratap) September 3, 2021
‘ಪತ್ರ ಬಂದಿದೆ ಆದರೆ ಅದನ್ನು ಇನ್ನೂ ನೋಡಿಲ್ಲ’ ಎಂದು ಬೊಮ್ಮಾಯಿ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಅಸ್ಸಾಂನಲ್ಲಿ ರಾಷ್ಟ್ರೀಯ ಉದ್ಯಾನಕ್ಕಿದ್ದ ರಾಜೀವ್‌ಗಾಂಧಿ ಹೆಸರನ್ನು ಕೈಬಿಟ್ಟ ಬೆನ್ನಲ್ಲೇ ಪ್ರತಾಪ್ ಸಿಂಗ್ ಈ ಬೇಡಿಕೆ ಇಟ್ಟಿದ್ದಾರೆ.
'ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೊಡಗಿನ ಹೆಮ್ಮೆಯ ಪುತ್ರ. ಅವರು ನಿವೃತ್ತಿಯ ಬಳಿಕ ಕೊಡಗಿಗೆ ಮರಳಿದರು ಹಾಗೂ ಅಲ್ಲಿಯೇ ನಿಧನರಾದರು. ಕೊಡಗಿನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು... ಏಕೆ ಎಲ್ಲದಕ್ಕೂ ಗಾಂಧಿ–ನೆಹರು ಕುಟುಂಬದ ಹೆಸರನ್ನೇ ಇಡಬೇಕು?' ಎಂದು ಪ್ರತಾಪ್ ಸಿಂಹ ಪ್ರಶ್ನಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.
'ಯಾವುದೇ ನಗರ, ಸ್ಥಳ ಅಥವಾ ರಸ್ತೆಗೆ ಹೆಸರಿಡುವಾಗ ಅದಕ್ಕೊಂದು ಮಹತ್ವವಿರಬೇಕು. ಸ್ಥಳೀಯರಿಗೆ ಅದು ಆಪ್ತವಾಗಬೇಕು. ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ರಾಜೀವ್ ಗಾಂಧಿ ಹೆಸರೇಕೆ? ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರಿಡಲು ಮನವಿ ಮಾಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.