ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಭಯದಲ್ಲಿ ಬಾದಾಮಿಯಿಂದ ಕೋಲಾರಕ್ಕೆ ಓಡಿದ ಸಿದ್ದರಾಮಯ್ಯ: ಬಿಜೆಪಿ ವ್ಯಂಗ್ಯ

Last Updated 24 ಫೆಬ್ರುವರಿ 2023, 11:08 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಕುರಿತು ಬಿಜೆಪಿ ವ್ಯಂಗ್ಯವಾಡಿದೆ. 2018ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಗೆದ್ದಿದ್ದ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಅವರು ಕ್ಷೇತ್ರ ಬದಲಿಸುವ ಹಳೇ ಚಾಳಿ ಮುಂದುವರಿಸಿದ್ದಾರೆ ಎಂದು ಟೀಕಿಸಿದೆ.

ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, 'ಗೆದ್ದೆತ್ತಿನ ಬಾಲ ಹಿಡಿದು ಓಡುವ ಬಾದಾಮಿ ಶಾಸಕ ಸಿದ್ದರಾಮಯ್ಯನವರು ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಸೋಲುವ ಭಯದಲ್ಲಿ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಓಡಿದ್ದರು. ಬಾದಾಮಿಯಲ್ಲಿ ಸೋಲುವ ಆತಂಕದಲ್ಲಿ ಕೋಲಾರಕ್ಕೆ ರನ್ನಿಂಗ್ ರೇಸ್ ಮಾಡುತ್ತಿದ್ದಾರೆ. ಇದಕ್ಕೆ ಇವರು ಕೊಟ್ಟ ಸಬೂಬು ಕ್ಷೇತ್ರ ಬಹು ದೂರ ದೂರ' ಎಂದು ಕುಟುಕಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಮೈಸೂರಿನಿಂದ 550 ಕಿ.ಮಿ, ಬೆಂಗಳೂರಿನಿಂದ 460 ಕಿ.ಮಿ ದೂರುವಿರುವ ಬಾದಾಮಿ ಅಂದು (2018ರಲ್ಲಿ) ಸಿದ್ದರಾಮಯ್ಯನವರಿಗೆ ಬಹಳ ಸಮೀಪವಾಗಿತ್ತು. ಇಂದು ಬಾದಾಮಿಗೆ ಹೋಗಲು ವಯಸ್ಸಾಗಿದೆ ಎನ್ನುತ್ತ ಸಿಎಂ ಕನಸು ಕಾಣುವವರು ಕರ್ನಾಟಕದ 1,91,791 ಚದರ ಕಿಲೋ ಮೀಟರ್ ವ್ಯಾಪ್ತಿಯನ್ನು ಸುತ್ತಿ ಅಭಿವೃದ್ಧಿ ಮಾಡುತ್ತಾರೆ ಎನ್ನುವುದು ಹಗಲುಗನಸು' ಎಂದು ಚಾಟಿ ಬೀಸಿದೆ.

'ಮಾನ್ಯ ಸಿದ್ದರಾಮಯ್ಯನವರು ಬಾದಾಮಿ ದೂರ ಎನ್ನುವ ಕುಂಟು ನೆಪದಿಂದ ಕ್ಷೇತ್ರವನ್ನು 5 ವರ್ಷ ಕಡೆಗಣಿಸಿದ್ದರು. ಅದರ ಪರಿಣಾಮವಾಗಿ ಇಂದು ಸೋಲಿನ ಭಯ ಕನಸ್ಸಿನಲ್ಲೂ ಕಾಡಿದೆ. ನಿಮಗೆ ನಿಜಕ್ಕೂ ತಾಕತ್ತು ಧಮ್ಮು ಇದ್ದರೆ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದು ಇಡೀ ರಾಜ್ಯದ ಜನರಿಗೆ ನೀವೊಬ್ಬ ಜನನಾಯಕ ಎನ್ನುವುದನ್ನು ಸಾಬೀತುಪಡಿಸಿ' ಎಂದು ಸವಾಲು ಹಾಕಿದೆ.

'ಚಾಮುಂಡೇಶ್ವರಿಯಿಂದ ವರುಣಾ, ವರುಣಾದಿಂದ ಚಾಮುಂಡೇಶ್ವರಿ, ಚಾಮುಂಡೇಶ್ವರಿಯಿಂದ ಬಾದಾಮಿ, ಬಾದಾಮಿಯಿಂದ ಕೋಲಾರ. ಸಿದ್ದರಾಮಯ್ಯನವರೇ, ಇದುವರೆಗೂ ಒಂದೇ ಒಂದು ಕ್ಷೇತ್ರದ ಜನರಿಗೆ ಪ್ರಿಯವಾಗದ ನೀವು, ಇಡೀ ರಾಜ್ಯದಲ್ಲಿ ಎಲ್ಲೇ ನಿಂತರೂ ಗೆಲ್ಲುತ್ತೇನೆ ಎನ್ನುವ ದಾರ್ಷ್ಟ್ಯವನ್ನು ತೋರುತ್ತಿರುವುದು ವಿಪರ್ಯಾಸ' ಎನ್ನುವ ಮೂಲಕ ಮೂದಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT