ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿರುವ ಸಿದ್ದರಾಮಯ್ಯ: ಬಿಜೆಪಿ ಟೀಕೆ

Last Updated 26 ಅಕ್ಟೋಬರ್ 2021, 8:35 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಜಾತಿ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆಗಳು, ಟ್ವೀಟ್‌ಗಳಿಗೆ ಬಿಜೆಪಿ ಟ್ವೀಟ್‌ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಸಮಾಜವಾದದ ಹೆಸರಿನಲ್ಲಿ ಜಾತಿವಾದ ನಡೆಸುತ್ತಿರುವ ಸಿದ್ದರಾಮಯ್ಯಗೆ ಈಗ ರಾಜ್ಯದ ಯಾವ ಕ್ಷೇತ್ರದಲ್ಲೂ ನೆಲೆಯಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ದತೆ ನಡೆಸಿರುವ ಅವರು ಈಗ ಒಂದು ವರ್ಗದ ಓಲೈಕೆಗಾಗಿ ಹಿಂದೂ ಧರ್ಮದ ಅವಹೇಳನಕ್ಕೆ ಮುಂದಾಗಿದ್ದಾರೆ’ ಎಂದು ಬಿಜೆಪಿ ಹೇಳಿದೆ.

‘ಸಿದ್ದರಾಮಯ್ಯ ಅವರೇ, ವೀರಶೈವ - ಲಿಂಗಾಯತ ಸಮುದಾಯದ ಮೇಲೆ ನಿಮಗೇಕೆ ದ್ವೇಷ? ಹಿಂದೆ ಧರ್ಮ ಒಡೆಯಲು ಹೋಗಿ ಆ ಸಮುದಾಯದ ಭಾವನೆ ಕೆರಳಿಸಿದಿರಿ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾತಿಯವರು ಕಂಬಳಿ ನೇಯುತ್ತಾರಾ ಎಂದು ಪ್ರಶ್ನಿಸುವ ಮೂಲಕ ಕಾಯಕ ಧರ್ಮವನ್ನು ಅಪಮಾನ ಮಾಡುತ್ತಿದ್ದೀರಿ. ಬೊಮ್ಮಾಯಿ ಜಾತಿಯವರು ಕಂಬಳಿ ನೇಯ್ತಾರಾ? ಕಾಗೇರಿ ಜಾತಿಯವರು ಕುರಿ ಕಾಯ್ತಾರಾ? ಎಂದು ಪ್ರಶ್ನಿಸುವ ಮೂಲಕ ಸಮಾಜವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದೀರಿ ಸಿದ್ದರಾಮಯ್ಯ? ಹಾಲಿನಂಥ ಸಮಾಜದಲ್ಲಿ ಜಾತಿ ಹುಳಿ ಹಿಂಡಿ ಒಡೆಯುವುದೇ ನಿಮ್ಮ ರಾಜಕೀಯ ಧರ್ಮ. ಸಮಾಜ ಒಟ್ಟಾಗಿದ್ದರೆ ಈ ಮಜವಾದಿಗೆ ಸಂಕಟವಾಗುತ್ತದೆ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘ವೀರಶೈವ- ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಎಂದಾದರೂ ಗೌರವ ವ್ಯಕ್ತಪಡಿಸಿದ ಉದಾಹರಣೆ ಇದೆಯೇ? ಧರ್ಮ ವಿಭಜನೆಯ ಪ್ರಯತ್ನ ಮಾಡುವಾಗ ‘ಲಿಂಗಾಯತ ಸ್ವಾಮೀಜಿಗಳು ನೀಡಿದ ಮನವಿ ಪ್ರಕಾರ ಪ್ರತ್ಯೇಕ ಧರ್ಮದ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದ್ದೆ ಎಂದು ಜಾರಿಕೊಂಡಿದ್ದು ನೆನಪಿಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ರಾಜಕೀಯ ಏಳಿಗೆಗಾಗಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯುವ ಪ್ರಯತ್ನ ನಡೆಸಿದರು. ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರ ಪ್ರಯೋಗಿಸಿ ಎಂ.ಬಿ.ಪಾಟೀಲರನ್ನು ಬಲಿಪಶುವಾಗಿಸಿದರು. ಸಿದ್ದರಾಮಯ್ಯನವರೇ, ವೀರಶೈವ- ಲಿಂಗಾಯಿತ ಸಮುದಾಯ ಬಿಜೆಪಿ ಜೊತೆ ನಿಲ್ಲುವುದನ್ನು ತಡೆಯುವುದಕ್ಕಾಗಿ ಧರ್ಮ ವಿಭಜನೆಗೆ ಮುಂದಾಗಿದ್ದಲ್ಲವೇ? ಜಾತಿ ರಹಿತ, ವರ್ಗ ರಹಿತ ಸಮಾಜ ಸ್ಥಾಪನೆಯೇ ಬಿಜೆಪಿಯ ಉದ್ದೇಶ. ಆದರೆ ಹಾಲಿನಂಥ ಸಮಾಜವನ್ನು ಒಡೆಯುವುದು ಜಾತಿವಾದಿ ಸಿದ್ದರಾಮಯ್ಯ ಅವರ ಗುರಿ. ಗಡಿಗೆಯಲ್ಲಿ ತುಂಬಿರುವ ಹಾಲನ್ನು ಕೆಡಿಸುವುದಕ್ಕೆ ಒಂದು ಹನಿ ಹುಳಿ ಸಾಕಲ್ಲವೇ? ಹಾಗೆಯೇ ಸಮಾಜ ವಿಭಜನೆಗೆ ಸಿದ್ದರಾಮಯ್ಯ ಅವರ ದ್ವೇಷದ ನುಡಿ ಸಾಕು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಯಡಿಯೂರಪ್ಪನವರು ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಮಠಾಧೀಶರನ್ನು ಮನೆಗೆ ಕರೆಸಿ ದುಡ್ಡು ಹಂಚಿದರು ಎನ್ನುವ ಮೂಲಕ ಸಿದ್ದರಾಮಯ್ಯ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ. ಒಂದು ಸಮುದಾಯವನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನಿಂದಿಸುವುದು ಹಾಗೂ ಒಡೆಯುವುದು ಅವರಿಗೆ ಚಾಳಿಯಾಗಿಬಿಟ್ಟಿದೆ’ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT