ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಎಸೆತ: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

Last Updated 19 ಆಗಸ್ಟ್ 2022, 22:18 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ದಾಳಿಮಾಡಿ, ಮೊಟ್ಟೆ ಎಸೆದಿರುವ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.

ಮೊಟ್ಟೆ ಎಸೆದ ಘಟನೆ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು, ‘ಘಟನೆಯ ಹಿಂದೆ ಪ್ರಬಲ ಕೈವಾಡವಿದೆ. ತಕ್ಷಣವೇ ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ತಪ್ಪಿದರೆ ಪ್ರತಿ ಜಿಲ್ಲೆಯಲ್ಲೂ ಹೋರಾಟ ಆರಂಭಿಸ
ಲಾಗುವುದು’ ಎಂದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ‘ಸಿದ್ದರಾಮಯ್ಯ ಅವರ ಮೇಲಿನ ದಾಳಿಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೈವಾಡವಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‌ಎಸ್‌ನ ಕೈಗೊಂಬೆ. ಮೇಲಿನವರು ಕುಣಿಸಿದಂತೆ ಕುಣಿಯುತ್ತಾರೆ. ಮೋದಿ, ಶಾ ಆಣತಿಯಂತೆ ದಾಳಿ ನಡೆದಿದೆ’ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಮಾತನಾಡಿ, ‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಗೋಡ್ಸೆ ಅಭಿಮಾನಿಗಳು. ಅವರು ಎಂದಿಗೂ ನೇರವಾಗಿ ಹೋರಾಟ ಮಾಡಲಾರರು. ಮಹಾತ್ಮ ಗಾಂಧಿಯವರನ್ನು ಗೋಡ್ಸೆ ಹೇಗೆ ಕೊಂದಿದ್ದ ಎಂಬುದನ್ನು ನೋಡಿಲ್ಲವೆ. ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ವಿರುದ್ಧ ಮಾತನಾಡು ತ್ತಾರೆ ಎಂಬ ಕಾರಣಕ್ಕಾಗಿಯೇ ಈ ದಾಳಿ ನಡೆದಿದೆ’ ಎಂದರು.

‘ಇಂತಹ ಘಟನೆಗಳು ಅನಾಹುತಕ್ಕೆ ಎಡೆಮಾಡುತ್ತವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಶಾಸಕರಾದ ಕೃಷ್ಣ ಬೈರೇಗೌಡ, ರಿಜ್ವಾನ್‌ ಅರ್ಷದ್‌, ಮುಖಂಡ ವಿ.ಎಸ್‌. ಉಗ್ರಪ್ಪ ಸೇರಿ ಹಲವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

‘ಕಸದ ತೊಟ್ಟಿ ಮೇಲಿಡಲೂ ಯೋಗ್ಯವಲ್ಲ’
‘ವಿ.ಡಿ. ಸಾವರ್ಕರ್‌ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ಬ್ರಿಟೀಷರ ಕ್ಷಮೆಯಾಚಿಸಿ, ಅವರಿಂದ ಪಿಂಚಣಿ ಪಡೆದ ಸಾವರ್ಕರ್‌ ಮತ್ತು ದೇಶದ ಮೊದಲ ಭಯೋತ್ಪಾದಕ ನಾಥೂರಾಮ ಗೋಡ್ಸೆಯ ಭಾವಚಿತ್ರಗಳು ಕಸದ ತೊಟ್ಟಿ ಮೇಲೆ ಹಾಕುವುದಕ್ಕೂ ಯೋಗ್ಯವಲ್ಲ’ ಎಂದು ಬಿ.ಕೆ. ಹರಿ‍ಪ್ರಸಾದ್‌ ಹೇಳಿದರು.

‘ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ದಾಳಿ ನಡೆದಿದೆ. ನಾವು ಖಾಕಿ ಚೆಡ್ಡಿಗಳಿಗೆ ಹೆದರುವುದಿಲ್ಲ. ಸಾವರ್ಕರ್‌, ಗೋಡ್ಸೆ ವಿರುದ್ಧ ನಮ್ಮ ಮಾತು ಮುಂದುವರಿಯುತ್ತದೆ’ ಎಂದರು.

‘ನೇಮಕಾತಿ: ಶೇ 40 ವಸೂಲಿ’
‘ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯಲ್ಲೂ ಶೇ 40 ವಸೂಲಿ ನಡೆದಿರುವುದು ನಿಶ್ಚಿತ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

‘ಅನರ್ಹರಿಗೆ ಅರ್ಹತೆ?’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಯ ತುಣುಕನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಕೆಪಿಸಿಸಿ, ‘ಶೇ 40 ಸರ್ಕಾರದ ಹುದ್ದೆ ಮಾರಾಟದ ಪರ್ವ ಮುಂದುವರಿದಿದೆ’ ಎಂದು ಹೇಳಿದೆ.

‘ಪಿಎಸ್‌ಐ ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್‌ ಇನ್‌ಸ್ಪೆಕ್ಟರ್‌ಗಳ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್‌ಸಿಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT