ಮಂಗಳವಾರ, ಮಾರ್ಚ್ 21, 2023
31 °C

ಕಪ್ಪು ಶಿಲೀಂಧ್ರ: 2 ದಿನ 20 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಎರಡೇ ದಿನಗಳಲ್ಲಿ 20 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಅವಧಿಯಲ್ಲಿ ಸೋಂಕು ತಗಲಿರುವ ಹೊಸ ಪ್ರಕರಣ ವರದಿಯಾಗಿಲ್ಲ. ಆದರೆ, ಕಳೆದೊಂದು ವಾರದಿಂದ ಅಧಿಕ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಈವರೆಗೆ 3,713 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರಲ್ಲಿ 387 ಮಂದಿ ಸಾವಿಗೀಡಾಗಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 33 ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ನಡೆದಿವೆ. ಈವರೆಗೆ 1,182 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಅವರಲ್ಲಿ 127 ಮಂದಿ ಸಾವಿಗೀಡಾಗಿದ್ದಾರೆ.

ಧಾರವಾಡದಲ್ಲಿ 284, ವಿಜಯಪುರದಲ್ಲಿ 226, ಕಲಬುರ್ಗಿಯಲ್ಲಿ 207, ಬಳ್ಳಾರಿಯಲ್ಲಿ 165, ಬೆಳಗಾವಿಯಲ್ಲಿ 159, ಚಿತ್ರದುರ್ಗದಲ್ಲಿ 156, ರಾಯಚೂರಿನಲ್ಲಿ 137, ಮೈಸೂರಿನಲ್ಲಿ 132, ಬಾಗಲಕೋಟೆಯಲ್ಲಿ 131, ದಾವಣಗೆರೆಯಲ್ಲಿ 118, ಕೋಲಾರದಲ್ಲಿ 110 ಹಾಗೂ ದಕ್ಷಿಣ ಕನ್ನಡದಲ್ಲಿ 103 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇದೆ. ಕಳೆದ ಒಂದು ತಿಂಗಳಿನಿಂದ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ.

ರಾಜ್ಯದ 26 ಜಿಲ್ಲೆಗಳಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ 30, ಧಾರವಾಡ ಹಾಗೂ ಬಳ್ಳಾರಿಯಲ್ಲಿ ತಲಾ 28, ಕಲಬುರ್ಗಿಯಲ್ಲಿ 23, ದಾವಣಗೆರೆಯಲ್ಲಿ 20, ಮೈಸೂರಿನಲ್ಲಿ 17, ಶಿವಮೊಗ್ಗದಲ್ಲಿ 15, ಬಾಗಲಕೋಟೆಯಲ್ಲಿ 13, ಹಾಸನ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 11 ಹಾಗೂ ಗದಗದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆಯಿದೆ.

‘ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಇಳಿಕೆ ಕಂಡಿವೆ. ಸೋಂಕಿತರಲ್ಲಿ ಕೆಲವರು ತಡವಾಗಿ ಆಸ್ಪತ್ರೆಗೆ ತೆರಳುತ್ತಿರುವುದರಿಂದ ಜೀವಕ್ಕೆ ಅಪಾಯವಾಗುತ್ತಿದೆ. ಕೆಲ ಆಸ್ಪತ್ರೆಗಳು ಕೂಡ ಮರಣ ಪ್ರಕರಣಗಳನ್ನು ತಡವಾಗಿ ವರದಿ ಮಾಡುತ್ತಿವೆ. ಹೀಗಾಗಿ, ವಾರದ ಹಿಂದೆ ಮೃತಪಟ್ಟವರ ಮಾಹಿತಿ ಕೂಡ ಈಗ ಪೋರ್ಟಲ್‌ನಲ್ಲಿ ದಾಖಲಾಗುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು