ಶುಕ್ರವಾರ, ಫೆಬ್ರವರಿ 3, 2023
24 °C
ಕೇಂದ್ರ ಜಲಶಕ್ತಿ ಸಚಿವರಿಗೆ ಬೊಮ್ಮಾಯಿ ಮನವಿ

ಮೇಕೆದಾಟು ಯೋಜನೆ ಶೀಘ್ರ ಅನುಮೋದನೆ ನೀಡಲು ಜಲಶಕ್ತಿ ಸಚಿವರಿಗೆ ಬೊಮ್ಮಾಯಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಇಲ್ಲಿ ಬುಧವಾರ ಭೇಟಿ ಮಾಡಿದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು. 

ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಕಳಸಾ ಬಂಡೂರಿ ಯೋಜನೆ ಹಾಗೂ ಮೇಕೆದಾಟು ಯೋಜನೆಗಳ ಕುರಿತು ಚರ್ಚಿಸಿದರು. ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದರು. ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ತೀರುವಳಿಗಳನ್ನು ಶೀಘ್ರವೇ ಒದಗಿಸುವಂತೆ ಕೋರಿದರು. ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಮಾಹಿತಿ ನೀಡಿದರು. 

ದೇವೇಗೌಡರು ಹೇಗಿದ್ದಾರೆ: ಬಸವರಾಜ ಬೊಮ್ಮಾಯಿ ಅವರು ಹಿರಿಯ ವಕೀಲ ಫಾಲಿ.ಎಸ್.ನರೀಮನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕಳೆದ ಮೂರು ದಶಕಗಳಲ್ಲಿ ಅಂತರ್‌ ರಾಜ್ಯ ಜಲವಿವಾದದ ಪ್ರಕರಣಗಳಲ್ಲಿ ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು. 

94 ವರ್ಷದ ನರೀಮನ್‌ ಅವರು ತಮ್ಮ ನೇತೃತ್ವದ ಕಾನೂನು ತಂಡವು ಮೂವತ್ತು ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ಅಂತರ್ ರಾಜ್ಯ ನ್ಯಾಯಮಂಡಳಿಗಳಲ್ಲಿ ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡರು.

ನನ್ನ ಗೆಳೆಯ ಎಚ್‌.ಡಿ.ದೇವೇಗೌಡ ಅವರ ಆರೋಗ್ಯ ಹೇಗಿದೆ ಎಂದು ಮುಖ್ಯಮಂತ್ರಿ ಅವರಲ್ಲಿ ಪ್ರಶ್ನಿಸಿದರು. ಹಿರಿಯ ಮುಖಂಡರಾದ ಎಸ್‌.ಎಂ.ಕೃಷ್ಣ, ಎಚ್‌.ಕೆ.ಪಾಟೀಲ, ಎಂ.ಬಿ.ಪಾಟೀಲ ಮತ್ತಿತರರನ್ನು ನೆನಪಿಸಿಕೊಂಡರು. 

‘ಇದೊಂದು ಸೌಹಾರ್ದದ ಭೇಟಿ. ಗಡಿ ಹಾಗೂ ಜಲವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು