ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಗಡಿ ವ್ಯಾಜ್ಯ– ವಿಧಾನ ಪರಿಷತ್‌ನಲ್ಲೂ ಒಕ್ಕೊರಲ ನಿರ್ಣಯ

Last Updated 27 ಡಿಸೆಂಬರ್ 2022, 16:04 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯಗಳ ಪುನರ್‌ ವಿಂಗಡಣಾ ಕಾಯ್ದೆಯಲ್ಲಿ ನಿಗದಿಯಾದಂತೆ ರಾಜ್ಯದ ಗಡಿ, ನೆಲ ಹಾಗೂ ಜಲವನ್ನು ರಕ್ಷಿಸಿಕೊಳ್ಳುವ ಸರ್ವಾನುಮತದ ನಿರ್ಣಯವನ್ನು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಅಂಗೀಕರಿಸಲಾಯಿತು.‌

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ಅಲ್ಲಿನ ಕೆಲವು ರಾಜಕಾರಣಿಗಳು ಹಾಗೂ ಕೆಲವು ಸಂಘಟನೆಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಹಾಗೂ ಗಡಿ ಭಾಗದಲ್ಲಿ ಉಂಟಾಗಿದ್ದ ತ್ವೇಷಮಯ ವಾತಾವರಣದ ಕುರಿತು ನಿಯಮ 68ರ ಅಡಿಯಲ್ಲಿ ಸದನದಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮೂರೂ ಪಕ್ಷಗಳ ಸದಸ್ಯರು, ಮಹಾರಾಷ್ಟ್ರದ ಕೆಲವು ರಾಜಕೀಯ ಮುಖಂಡರು ಹಾಗೂ ಕೆಲವು ಸಂಘಟನೆಗಳ ನಾಯಕರ ಪ್ರಚೋದನಕಾರಿ ಹೇಳಿಕೆಗಳನ್ನು ಒಕ್ಕೊರಲಿನಿಂದ ಖಂಡಿಸಿದರು.

ಚರ್ಚೆಗೆ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ರಾಜ್ಯಗಳ ಪುನರ್‌ವಿಂಗಡಣಾ ಕಾಯ್ದೆಯ ಪ್ರಕಾರ ನಿಗದಿಯಾಗಿರುವ ರಾಜ್ಯದ ಗಡಿಯೇ ನಮಗೆ ಅಂತಿಮ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಕಣ್ಣಿಟ್ಟು ಮಹಾರಾಷ್ಟ್ರದ ಕೆಲವರು ಈ ರೀತಿ ಕಿಡಿಗೇಡಿತನ ಮಾಡಿದ್ದಾರೆ. ಇಂತಹ ಅತಿರೇಕಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

‘ಮಹಾರಾಷ್ಟ್ರದ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಇಲ್ಲಿನ ನಾಯಕರ ವಿರುದ್ಧ ವೈಯಕ್ತಿಕವಾಗಿ ನಿಂದನೆಗೆ ಇಳಿದಿರುವುದು ಖಂಡನೀಯ. ಸುಪ್ರೀಂ ಕೋರ್ಟ್‌ ಕೂಡ ಅಂತರರಾಜ್ಯ ಗಡಿ ಕುರಿತು ವಿಚಾರಣೆ ನಡೆಸುವಂತಿಲ್ಲ. ಸಂಸತ್ತಿನ ನಿರ್ಣಯವೇ ಅಂತಿಮ’ ಎಂದು ಹೇಳಿದರು.

ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌, ಎಸ್‌. ರವಿ, ಪಿ.ಆರ್‌. ರಮೇಶ್‌, ನಾಗರಾಜ್‌ ಯಾದವ್‌, ಮೋಹನ್‌ ಕೊಂಡಜ್ಜಿ, ಜೆಡಿಎಸ್‌ನ ಟಿ.ಎ. ಶರವಣ, ಕೆ.ಎ. ತಿಪ್ಪೇಸ್ವಾಮಿ, ಬಿಜೆಪಿಯ ಎನ್‌. ರವಿಕುಮಾರ್‌, ಕೆ.ಎಸ್‌. ನವೀನ್‌, ತೇಜಸ್ವಿನಿ ಗೌಡ, ಸಾಬಣ್ಣ ತಳವಾರ, ಹಣಮಂತ ನಿರಾಣಿ ಅವರು ಮಹಾರಾಷ್ಟ್ರದ ರಾಜಕಾರಣಿಗಳು ಹಾಗೂ ಕೆಲವು ಸಂಘಟನೆಗಳ ಪುಂಡಾಟಿಕೆಯನ್ನು ವಿರೋಧಿಸಿ ಮಾತನಾಡಿದರು.

‘ಮುಂಬೈ ಕೇಂದ್ರಾಡಳಿತ ಪ್ರದೇಶವಾಗಲಿ’

‘ಬೆಳಗಾವಿ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳು ಒತ್ತಾಯಿಸುತ್ತಿದ್ದಾರೆ. ಬಹುಭಾಷೆ, ಬಹು ಸಂಸ್ಕೃತಿಗಳ ಬೀಡಾಗಿರುವ ಮುಂಬೈ ಮಹಾನಗರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ನಾವು ಅಂತಹ ಆಗ್ರಹವನ್ನು ಮುಂದಿಡೋಣ’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.

ಚರ್ಚೆ ಆರಂಭಿಸಿ ಮಾತನಾಡಿದ ಅವರು, ‘ಮುಂಬೈನಲ್ಲಿ ಶೇಕಡ 20ರಷ್ಟು ಮಂದಿ ಕರ್ನಾಟಕದ ಕನ್ನಡಿಗರು ಮತ್ತು ಕೊಂಕಣಿ ಭಾಷಿಕರಿದ್ದಾರೆ. ಹಲವು ರಾಜ್ಯಗಳು, ರಾಷ್ಟ್ರಗಳ ಜನರು ಅಲ್ಲಿದ್ದಾರೆ. ಬೆಳಗಾವಿ ಮತ್ತು ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ. ಸರ್ವರಿಗೂ ಸೇರಿದ ಮುಂಬೈ ನಗರ ಕೇಂದ್ರಾಡಳಿತ ಪ್ರದೇಶವಾಗಲಿ’ ಎಂದು ಆಗ್ರಹಿಸಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ವಾರ್ಥಕ್ಕಾಗಿ ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಮಹಾರಾಷ್ಟ್ರ ಸರ್ಕಾರವೂ ಪ್ರಚೋದನೆ ನೀಡುತ್ತಿದೆ. ಅದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು ಎಂದರು.

ಈ ಮಾತನ್ನು ಬೆಂಬಲಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಮುಂಬೈ ನಗರ ಹಿಂದೆ ಮಹಾರಾಷ್ಟ್ರ ರಾಜ್ಯದ ಭಾಗವಾಗಿರಲಿಲ್ಲ. ಅದೊಂದು ಸ್ವತಂತ್ರ ಪ್ರಾಂತ್ಯವಾಗಿತ್ತು. ಕೇಂದ್ರಾಡಳಿತ ಪ್ರದೇಶವಾಗುವ ಎಲ್ಲ ಲಕ್ಷಣಗಳೂ ಆ ನಗರಕ್ಕೆ ಇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT