ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಓದಿಗೆ ನೆರವಾದ ತಮ್ಮ, ಐದು ಚಿನ್ನದ ಪದಕ ಗಳಿಸಿದ ಅಕ್ಕ

ಅರ್ಥಶಾಸ್ತ್ರದಲ್ಲಿ ಬಿ.ಎಚ್‌.ಚಂದ್ರಿಕಾಗೆ ಐದು ಚಿನ್ನದ ಪದಕ
Last Updated 6 ಡಿಸೆಂಬರ್ 2022, 2:37 IST
ಅಕ್ಷರ ಗಾತ್ರ

ಬೆಂಗಳೂರು: ಬಡತನದ ಕಾರಣದಿಂದ ಶಿಕ್ಷಣವನ್ನುಅರ್ಧಕ್ಕೇ ಮೊಟಕುಗೊಳಿಸಿದ ತಮ್ಮ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಅಕ್ಕನ ಓದಿಗೆ ನೆರವಾಗಿದ್ದರ ಫಲವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಬಿ.ಎಚ್‌.ಚಂದ್ರಿಕಾ ಐದು ಚಿನ್ನದ ಪದಕ ಗಳಿಸಿದ್ದಾರೆ.

ಬಿಡದಿ ಸಮೀಪದ ಬನ್ನಿಗಿರಿಯ ಚಂದ್ರಿಕಾ ಅವರ ತಂದೆ ಹನುಮಯ್ಯ, ತಾಯಿ ಲಕ್ಷ್ಮಮ್ಮ ಕೂಲಿ ಕಾರ್ಮಿಕರು. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗದಷ್ಟು ಬಡತನ. ತಂದೆ ತಾಯಿ ಕಷ್ಟ ನೋಡಲು ಸಾಧ್ಯವಾಗದೆ ಪಿಯು ಮುಗಿದ ನಂತರ ಶಿಕ್ಷಣಕ್ಕೆ ತಿಲಾಂಜಲಿ ಹೇಳಿ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದ ಸಹೋದರ ಅಕ್ಕನ ಓದಿಗೆ ನೆರವಾಗಿದ್ದಾನೆ.

‘ಕಷ್ಟಪಟ್ಟು ಓದಿದ್ದೇನೆ. ಕುಟುಂಬದ ಶ್ರಮಕ್ಕೆ ಫಲ ಸಿಕ್ಕಿದೆ. ಮುಂದೆ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗುವೆ. ಶ್ರೇಷ್ಠ ಅರ್ಥಶಾಸ್ತ್ರಜ್ಞೆ ಆಗಬೇಕು ಎನ್ನುವ ಕನಸಿದೆ’ ಎಂದು ಚಂದ್ರಿಕಾ ಪ್ರತಿಕ್ರಿಯಿಸಿದರು.

ಬಡತನದ ಕಾರಣಕ್ಕೆ ತುಮಕೂರಿನ ಸಿದ್ದಗಂಗಾ ಮಠದಲ್ಲೇ ಇದ್ದು ಶಿಕ್ಷಣ ಪಡೆದ ಬೀದರ್‌ ಜಿಲ್ಲೆ ವರವಟ್ಟಿಯ ಮಯೂರ ಸಂಸ್ಕೃತ ವಿಭಾಗದಲ್ಲಿ 6 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ತಂದೆ ಶಿವಕುಮಾರಸ್ವಾಮಿ ಮಠಪತಿ, ತಾಯಿ ಗಂಗಮ್ಮ ಅವರು ಚಿಕ್ಕಂದಿನಲ್ಲೇ ಮಠಕ್ಕೆ ತಂದು ಬಿಟ್ಟಿದ್ದರು. ಅಲ್ಲಿ ಸಂಸ್ಕೃತ ಕಲಿತು ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ರಸಾಯನ ಶಾಸ್ತ್ರದಲ್ಲಿ 7 ಚಿನ್ನದ ಪದಕ ಪಡೆದ ಕೆ.ಅರ್ಚನಾ ಅವರ ತಂದೆ ಕೃಷ್ಣಪ್ಪ ಅವರು ಗ್ರಾಮೀಣ ಬಯಲಾಟದ ಕಲಾವಿದರು. ಮೂವರು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇಬ್ಬರು ವಿಜ್ಞಾನ ಪದವೀಧರರಾದರೆ, ಒಬ್ಬರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಸಾಗುವ ಬಯಕೆ ಅರ್ಚನಾ ಅವರದು.

ಬೆಂಗೂಳೂರಿನ ಲೆಕ್ಕಪರಿಶೋಧಕರ ಪುತ್ರ ಚೇತನ್‌ಸೂರ್ಯ ಭೌತ ವಿಜ್ಞಾನ ವಿಭಾಗದಲ್ಲಿ, ರಾಜಸ್ಥಾನದಿಂದ ರಾಜ್ಯಕ್ಕೆ ಬಂದು ಹಿಂದಿ ಭಾಷಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅನಿತಾಭಾಟೆ, ರಂಗಭೂಮಿಯನ್ನೇ ಉಸಿರಾಗಿಸಿಕೊಂಡ ವಿಜಯಪುರದ ಮಾಧುರಿ ಅವರುಚಿನ್ನದ ಬೇಟೆಯಾಡಿದ್ದಾರೆ.

ಯೂನಿವರ್ಸಲ್ ಸ್ಕೂಲ್‌ಗೆ 10 ರ್‍ಯಾಂಕ್‌:ನಗರದ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್‍ನ ಸುಷ್ಮಾ ಎಚ್.ದೊಡ್ಡಬಿಲ್ಲಾ ಅವರು ಬಿ.ಎ.ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರ ಪಡೆದಿದ್ದಾರೆ. ಇದೇ ಸಂಸ್ಥೆಯ ಒಟ್ಟು 9 ವಿದ್ಯಾರ್ಥಿಗಳು ವಿವಿಧ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT