ಮಂಗಳವಾರ, ಮಾರ್ಚ್ 21, 2023
29 °C

ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ’ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ನನಗೀಗ 80 ವರ್ಷ ವಯಸ್ಸಾಗುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ. ಆದರೆ, ಪಕ್ಷದ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ’ ಎಂದರು.

‘ಮಗ ರಾಘವೇಂದ್ರ ಸಂಸದರಿದ್ದಾರೆ. ಮತ್ತೊಬ್ಬ ಮಗ ವಿಜಯೇಂದ್ರ ಕೂಡ ಬಿಜೆಪಿ ಗಟ್ಟಿಗೊಳಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ನಾನು ರಾಜಕೀಯದಿಂದ ನಿವೃತ್ತಿ ಹೊಂದಿಲ್ಲ. ಈ ಚುನಾವಣೆಯಲ್ಲಿ ಓಡಾಡುತ್ತೇನೆ. ದೇವರು ಶಕ್ತಿ ಕೊಟ್ಟರೆ ಮುಂದಿನ ಚುನಾವಣೆವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಪಕ್ಷವೂ ನನಗೆ ಸ್ಥಾನಮಾನ, ಅಧಿಕಾರ ಮತ್ತು ಗೌರವ ಕೊಟ್ಟಿದೆ. ಹಾಗಾಗಿ ರಾಷ್ಟ್ರ ರಾಜಕಾರಣಕ್ಕೆ ನಾನು ಹೋಗುವುದಿಲ್ಲ. ಬಿಜೆಪಿ ಋಣ ತೀರಿಸಲು ರಾಜ್ಯಾದ್ಯಂತ ಸಂಚರಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮುಂಬರುವ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುತ್ತೇನೆ. ಯಾರೋ ನಾನೇ ಮುಂದಿನ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಅದು ಎಂದಿಗೂ ನನಸಾಗದು. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಂದ ಅವರು, ‘ಪಕ್ಷದ ವರಿಷ್ಠರೆಲ್ಲ ಚರ್ಚಿಸಿ ಯೋಗ್ಯ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು. ಇದಕ್ಕಾಗಿ ಎರಡು ಸಮೀಕ್ಷೆ ನಡೆಸಲಾಗುವುದು. ಟಿಕೆಟ್‌ ನೀಡುವ ವಿಚಾರದಲ್ಲಿ ರಾಜಿ ಇಲ್ಲ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು