ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಹಾಳು ಮಾಡಿದವರಿಗೆ ಏನು ಶಿಕ್ಷೆ: ರಿಜ್ವಾನ್ ಅರ್ಷದ್

Last Updated 25 ಏಪ್ರಿಲ್ 2022, 15:40 IST
ಅಕ್ಷರ ಗಾತ್ರ

ಬೆಂಗಳೂರು: ಆಪಾದಿತರ ವಿರುದ್ಧ ಬಿಜೆಪಿ ಸರ್ಕಾರಗಳು ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಿವೆ. ಒಂದು ನಿರ್ದಿಷ್ಟ ಧರ್ಮದ ಮತ್ತು ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಈ ಕಾರ್ಯಾಚರಣೆಯನ್ನು ಬಿಜೆಪಿ ನಡೆಸುತ್ತಿದೆ ಎಂಬ ಆರೋಪಗಳಿವೆ. ಕರ್ನಾಟಕದಲ್ಲೂ ಈ ಸಂಬಂಧ ಕಾನೂನು ತರಬೇಕು ಎಂದು ಸಚಿವರೇ ಪ್ರತಿಪಾದಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಆಪಾದಿತರ ಆಸ್ತಿ ದ್ವಂಸ ವಿವಾದದ ತಿರುಳೇನು?’ ಎನ್ನುವ ಕುರಿತು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.

‘ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಕ್ರಮವಿಲ್ಲ ಏಕೆ’

ಜಹಾಂಗೀರ್‌ಪುರಿಯಲ್ಲಿ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ನಡೆಸಿದ ರ್‍ಯಾಲಿ ವೇಳೆ ಪ್ರಚೋದನಕಾರಿ ಹಾಡು ಮತ್ತು ಭಾಷಣಗಳಿಂದ ಅಲ್ಲಿ ಗಲಭೆ ನಡೆದಿದೆ. ಸಾಮರಸ್ಯ ಕದಡಿದವರನ್ನು ಸುಮ್ಮನೆ ಬಿಟ್ಟು ಅದಕ್ಕೆ ಪ್ರತಿಕ್ರಿಯಿಸಿದವರ ಮನೆಗಳನ್ನು ದ್ವಂಸ ಮಾಡಲಾಗಿದೆ. ಬದ್ಧತೆ ಇದ್ದಿದ್ದರೆ ಅವರ ಮನೆಗಳ ಮೇಲೆಯೂ ಬುಲ್ಡೋಜರ್ ಹತ್ತಿಸಬೇಕಿತ್ತು. ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಏನೇ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಭೂ ಕಬಳಿಕೆ, ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ನಡೆಸುವ ಕಾರ್ಯಾಚರಣೆಗಳಿಗೆ ಇದನ್ನು ಹೋಲಿಸುವುದು ಸರಿಯಲ್ಲ. ಒಂದು ವರ್ಗದ ಜನರನ್ನು ಗುರಿಯಾಗಿಸಿ ಮನೆಗಳ ನೆಲಸಮ ಮಾಡಲಾಗಿದೆ. ದೇಶದ ಅಭಿವೃದ್ಧಿ, ಆರ್ಥಿಕತೆ ಬಗ್ಗೆ ಚರ್ಚೆಗಳೇ ಇಲ್ಲ. ಇವುಗಳನ್ನು ಮರೆ ಮಾಚುವ ಸಲುವಾಗಿಯೇ ಕೋಮು ಸಾಮರಸ್ಯ ಹಾಳು ಮಾಡುವ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ.

–ರಿಜ್ವಾನ್ ಅರ್ಷದ್, ಕಾಂಗ್ರೆಸ್ ಶಾಸಕ

‘ಮಾಫಿಯಾಗಳ ವಿರುದ್ಧದ ಕಾರ್ಯಾಚರಣೆ’

ಬಿಜೆಪಿ ಸರ್ಕಾರ ಒಂದು ಧರ್ಮ ಮತ್ತು ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ದೆಹಲಿ ಮತ್ತು ಉತ್ತರ ಪ್ರದೇಶದ ಘಟನಾವಳಿಗಳಿಗೆ ಬೇರೆ ಬೇರೆ ಆಯಮಗಳಿವೆ. ದೆಹಲಿಯಲ್ಲಿ ಮನೆಗಳ ನೆಲಸಮದ ವಿಷಯದಲ್ಲಿ ಅಲ್ಲಿನ ಪಾಲಿಕೆ ತೀರ್ಮಾನ ಕೈಗೊಂಡಿತ್ತು. ಅಕ್ರಮವಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಮಾಫಿಯಾಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಅಂತವರನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಮೆರವಣಿಗೆ ಮಾಡಿದವರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಲು ನಮ್ಮದು ತಾಲಿಬಾನ್ ಸರ್ಕಾರ ಅಲ್ಲ. ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಮಾಫಿಯಾದವರು ಕಬ್ಜ ಮಾಡಿಕೊಂಡಿದ್ದಾರೆ ಎಂದು ಎ.ಟಿ.ರಾಮಸ್ವಾಮಿ ವರದಿ ಹೇಳುತ್ತದೆ. ಅದರ ವಿರುದ್ಧ ಕಾರ್ಯಾಚರಣೆ ನಡೆಸುವುದು ತಪ್ಪೆ? ಮಾಫಿಯಾಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬಗ್ಗೆ ಕಾನೂನು ಬಲಗೊಳಿಸುವ ಅಗತ್ಯವಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯವಿದೆ.

–ಅಶ್ವತ್ಥನಾರಾಯಣಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

‘ಮೊದಲು ಬಿಜೆಪಿಯವರ ಆಸ್ತಿ ಮುಟ್ಟುಗೋಲಾಗಲಿ’

ಕ್ರಿಮಿನಲ್‌ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದಿದ್ದರೆ ಮೊದಲು ಬಿಜೆಪಿಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಶಾಸಕರು ಮತ್ತು ಸಂಸದರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಜನತೆಯ ಹಕ್ಕುಗಳನ್ನು ರಕ್ಷಿಸುವ ಸ್ಥಾನದಲ್ಲಿರುವ ಸರ್ಕಾರವೇ ಒಂದು ಧರ್ಮದವರ ವಿರುದ್ಧ ಪೂರ್ವಗ್ರಹ ಪೀಡಿತವಾಗಿ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ದೆಹಲಿ ಮತ್ತು ಉತ್ತರ ಪ್ರದೇಶ ರೀತಿಯ ಬುಲ್ಡೋಜರ್ ನೀತಿಯನ್ನು ದೇಶವಿಡೀ ಹಬ್ಬಿಸಬಾರದು. ಕಟ್ಟಡಗಳನ್ನು ಧ್ವಂಸ ಮಾಡಿ ಭಾರತದ ಬಡವರನ್ನು ಬೀದಿಗೆ ಎಸೆಯುವುದೆಂದರೆ ಪ್ರಜಾಪ್ರಭುತ್ವವನ್ನೇ ಧ್ವಂಸ ಮಾಡಿದಂತೆ. ಮನೆಯೇ ಇಲ್ಲದಿದ್ದರೆ ಹೆಣ್ಣು ಮಕ್ಕಳು ಘನತೆಯಿಂದ ಬದುಕುವುದು ಹೇಗೆ? ನ್ಯಾಯಾಂಗದ ಕೆಲಸವನ್ನೂ ಕಾರ್ಯಾಂಗವೇ ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನೇ ಅಪ್ರಸ್ತುತಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಾಲಯ ಸುಮ್ಮನಾದರೆ ಜನ ಅಸಹಾಯಕರಾಗುತ್ತಾರೆ. ಅದಕ್ಕೆ ಅವಕಾಶ ಆಗಬಾರದು.

–ಯಮುನಾ ಗಾಂವ್ಕರ್, ಸಿಪಿಎಂ ನಾಯಕಿ

ಪೂರ್ಣ ಸಂವಾದ ವೀಕ್ಷಿಸಲು: www.facebook.com/prajavani.net

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT