ಸೋಮವಾರ, ಅಕ್ಟೋಬರ್ 25, 2021
26 °C
ಬ್ಯಾಡರಹಳ್ಳಿಯಲ್ಲಿ ಕೂಸು ಸೇರಿ ಐವರು ಮೃತಪಟ್ಟಿರುವ ಪ್ರಕರಣ

ಮೃತದೇಹಗಳ ಜೊತೆ ನಾಲ್ಕು ದಿನ ಕಳೆದ ಬಾಲಕಿ: ಬಿಸ್ಕತ್ ತಿಂದು ಬದುಕಿದ ಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೂಸು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯಲ್ಲಿ ಬದುಕುಳಿದಿರುವ ಬಾಲಕಿ, ಮನೆಯಲ್ಲಿದ್ದ ಮೃತದೇಹಗಳ ಜೊತೆಯಲ್ಲೇ ನಾಲ್ಕು ದಿನ ಕಳೆದಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿದೆ.

‘ಭಾರತಿ, ಸಿಂಧೂರಾಣಿ, ಸಿಂಚನಾ ಹಾಗೂ ಮಧುಸಾಗರ್ ಅವರು ನೇಣು ಹಾಕಿಕೊಳ್ಳುವ ವೇಳೆ ಎರಡೂವರೆ ವರ್ಷದ ಬಾಲಕಿ ಸ್ಥಳದಲ್ಲಿದ್ದಳು. ಜೊತೆಯಲ್ಲಿ, ಒಂಭತ್ತು ತಿಂಗಳ ಕೂಸು ಸಹ ಹಾಸಿಗೆ ಮೇಲಿತ್ತು. ಅವರಿಬ್ಬರನ್ನು ಬಿಟ್ಟು ನಾಲ್ವರು ಪ್ರತ್ಯೇಕ ಕೊಠಡಿಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆತ್ಮಹತ್ಯೆಗೂ ಮುನ್ನ ಮನೆಯ ಬಾಗಿಲು ಹಾಗೂ ಗೇಟ್ ಬಂದ್ ಮಾಡಲಾಗಿತ್ತು. ಬಾಲಕಿ ಹೊರಗೆ ಹೋಗಲೂ ಅವಕಾಶವೇ ಇರಲಿಲ್ಲ. ನಾಲ್ವರು ನೇಣಿಗೆ ಶರಣಾದರೂ ಏನಾಗಿದೆ ಎಂಬುದು ಬಾಲಕಿಗೆ ಗೊತ್ತಾಗಿರಲಿಲ್ಲ. ನೇತಾಡುತ್ತಿದ್ದ ತನ್ನ ತಾಯಿ ಸಿಂಚನಾ ಅವರ ಕಾಲುಗಳನ್ನು ಹಿಡಿದುಕೊಂಡು ಬಾಲಕಿ ಅತ್ತಿದ್ದಳು. ಮನೆಯಲ್ಲಿದ್ದ ಮೃತದೇಹಗಳ ಬಳಿಯೇ ಓಡಾಡಿ ನಾಲ್ಕು ದಿನ ಕಳೆದಿದ್ದಳು’ ಎಂದೂ ತಿಳಿಸಿವೆ.

‘ಮನೆಯಲ್ಲಿ ಒಂದು ಬಿಸ್ಕತ್ ಬಿಟ್ಟರೆ ತಿನ್ನಲು ಏನು ಇರಲಿಲ್ಲ. ಅದೇ ಬಿಸ್ಕತ್ ತಿಂದು ಬಾಲಕಿ ನಾಲ್ಕು ದಿನ ಬದುಕಿದ್ದಳು. ಪೊಲೀಸರು ಮನೆಯೊಳಗೆ ಹೋಗುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯನ್ನು ತ್ವರಿತವಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿ ಬಾಲಕಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಘಟನೆ ವಿವರಿಸದ ಬಾಲಕಿ : ‘ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿದ್ದಾಳೆ. ಘಟನೆ ಬಗ್ಗೆ ವಿವರಿಸುವಷ್ಟು ಮಾತು ಆಕೆಗೆ ಬರುವುದಿಲ್ಲ. ಸದ್ಯ ಸಂಬಂಧಿಕರ ಮನೆಯಲ್ಲಿ ಇದ್ದಾಳೆ. ಬೇರೆ ಊರಿನಲ್ಲಿರುವ ತಂದೆಯ ಸಂಬಂಧಿಕರಿಗೂ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕವೇ ಬಾಲಕಿಯನ್ನು ಮಾತನಾಡಿಸಬೇಕಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಒದಿ.. ಬೆಂಗಳೂರಿನಲ್ಲಿ ನಾಲ್ವರು ಆತ್ಮಹತ್ಯೆ; ಕೂಸಿನ ಮೃತದೇಹವೂ ಪತ್ತೆ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು