ಸೋಮವಾರ, ಸೆಪ್ಟೆಂಬರ್ 26, 2022
20 °C
ಸಾಹಸಿ ಯುವತಿ ಅಮೃತಾಗೆ ಕೆನರಾ ಪ್ರೌಢಶಾಲೆಯಲ್ಲಿ ಅಭಿನಂದನೆ

ಬೈಕ್‌ ಏರಿ 22,000 ಕಿ.ಮೀ. ಸವಾರಿ ನಡೆಸಿದ ಕುಂಬ್ಳೆಯ ಕುವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಬೈಕ್‌ನಲ್ಲಿ ದೇಶದಾದ್ಯಂತ 22,000 ಕಿ.ಮೀ. ಯಾತ್ರೆ ನಡೆಸಿರುವ ಕಾಸರಗೋಡಿನ ಕುಂಬ್ಳೆಯ ಕುವರಿ ಅಮೃತಾ ಜೋಷಿ ಅವರನ್ನು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್‌ನಲ್ಲಿ ಬುಧವಾರ ಅಭಿನಂದಿಸಲಾಯಿತು.

ಅಮೃತಾ ಕೇರಳದ ಕಲ್ಲಿಕೋಟೆಯಲ್ಲಿ ಫೆ. 4ರಂದು ಯಾತ್ರೆ ಆರಂಭಿಸಿರುವ ಅವರು ಮೂರು ತಿಂಗಳು ಏಕಾಂಗಿಯಾಗಿ ಬೈಕ್‌ನಲ್ಲಿ ದೇಶವ್ಯಾಪಿ ಸಂಚರಿಸಿದ್ದಾರೆ. ಕಲ್ಲಿಕೋಟೆಯಲ್ಲೇ ಯಾತ್ರೆಯನ್ನು ಸಂಪನ್ನಗೊಳಿಸಲಿದ್ದಾರೆ. ಅವರು ನಗರದ ಕೆನರಾ ಬಾಲಕಿಯರ ಪ್ರೌಢಶಾಲೆ ಹಾಗೂ ಕೆಪಿಟಿಯ ಹಳೆ ವಿದ್ಯಾರ್ಥಿನಿ. 

ಯಾತ್ರೆಯ ಅನುಭವಗಳನ್ನು ಹಂಚಿಕೊಂಡ ಅಮೃತಾ, ‘ಬಾಲ್ಯದಿಂದಲೂ ಬೈಕ್ ಸವಾರಿಯ ಹುಚ್ಚು ಇತ್ತು. ಇದಕ್ಕೆ ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದೆ. ಬೈಕಿನಲ್ಲೇ ದೇಶ ಸುತ್ತುವ ಸಂಕಲ್ಪ ಮಾಡಿದೆ’ ಎಂದರು. 

‘ಸೈನಿಕರಿಗೆ ಗೌರವಾರ್ಪಣೆ ಹಾಗೂ ಸಮಾನತೆ ಸಾರುವುದು ನನ್ನ ಯಾತ್ರೆಯ ಉದ್ದೇಶ. ತಮಿಳುನಾಡು, ಆಂಧ್ರಪ್ರದೇಶದ ಮೂಲಕ ಈಶಾನ್ಯ ರಾಜ್ಯಗಳಿಗೆ ತೆರಳಿದೆ. ಚೀನಾ ಗಡಿಯಲ್ಲಿರುವ ತವಾಂಗ್‌ನಲ್ಲಿ ಸಂಚಾರ ಕೊನೆಗೊಳಿಸಲು ಉದ್ದೇಶಿಸಿದ್ದೆ. ಏ.9ರಂದು ಅಲ್ಲಿಂದ ಮತ್ತೆ ಸಂಚಾರ ಮುಂದುವರಿಸಿ ನೇಪಾಳ, ಬರ್ಮಾ ದೇಶಗಳಿಗೂ ಭೇಟಿ ನೀಡಿದ್ದೇನೆ. ಉತ್ತರ ಪ್ರದೇಶದಲ್ಲಿ ಬೈಕ್‌ಗೆ ಹಿಂಬದಿಯಿಂದ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಕೆಟಿಎಂ ಬೈಕ್ ಸಂಪೂರ್ಣ ಜಖಂಗೊಂಡಿತು. ಚಿಕಿತ್ಸೆ ಹಾಗೂ ಒಂದು ತಿಂಗಳು ವಿಶ್ರಾಂತಿ ಪಡೆದು, ನಂತರ ಬಿಎಂಡಬ್ಲ್ಯು ಬೈಕ್‌ನಲ್ಲಿ ಸವಾರಿ ಮುಂದುವರಿಸಿದೆ. ಲಡಾಕ್‌, ಪಂಜಾಬ್, ರಾಜಸ್ಥಾನ ಪ‍್ರವಾಸ ಮುಗಿಸಿಕೊಂಡು ಕರ್ನಾಟಕಕ್ಕೆ ಬಂದಿದ್ದೇನೆ’ ಎಂದರು.

‘ನಿತ್ಯ 8ರಿಂದ 12 ಗಂಟೆ ಸಂಚರಿಸುತ್ತಿದ್ದೆ. ಎಲ್ಲಿಯೂ ಅಹಿತಕರ ಅನುಭವವಾಗಿಲ್ಲ. ಎಲ್ಲೆಡೆ ಜನರು ಸಹೋದರಿಯಂತೆ  ಬರಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಏಕಾಂಗಿಯಾಗಿ ಜಗತ್ತು ಸುತ್ತುವುದು ನನ್ನ ಕನಸು’ ಎಂದು ಅವರು ಹೇಳಿದರು.
ಎರಡೂವರೆ ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಅಮೃತಾ, ‘ನಾನು ಬೈಕ್‌ ಸವಾರಿ ಮಾಡಬೇಕೆಂಬುದು ತಂದೆಯ ಕನಸು ಕೂಡಾ ಆಗಿತ್ತು. ಅವರ ಆಸೆಯನ್ನು ಈಡೇರಿಸಿದ ತೃಪ್ತಿ ಇದೆ’ ಎಂದರು.

ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ರಂಗನಾಥ ಭಟ್, ಜತೆ ಕಾರ್ಯದರ್ಶಿ ಸುರೇಶ್ ಕಾಮತ್, ಕೆನರಾ ಹೈಸ್ಕೂಲ್ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ, ಆಡಳಿತ ಮಂಡಳಿ ಸದಸ್ಯ ಮಂಗಲ್ಪಾಡಿ ನರೇಶ್ ಶೆಣೈ, ಅಮೃತಾ ಅವರ ತಾಯಿ ಅನ್ನಪೂರ್ಣ ಜೋಷಿ, ಪ್ರೌಢಶಾಲೆಯ ಅಧ್ಯಾಪಕರು ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು