ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಿಷ್ಠರ ಅಂಗಳದಲ್ಲಿ ಸಂಪುಟ ವಿಸ್ತರಣೆ ವಿಚಾರ: ಮುಖ್ಯಮಂತ್ರಿ ಬೊಮ್ಮಾಯಿ

Last Updated 24 ಜನವರಿ 2022, 7:01 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಆಕಾಂಕ್ಷಿಗಳು ಸಚಿವ ಸ್ಥಾನದ ಮೇಲೆ ನಿರೀಕ್ಷೆ ಇಟ್ಟಿರುವುದು ತಪ್ಪೇನಿಲ್ಲ. ಅದನ್ನು ಯಾವಾಗ ಮಾಡಬೇಕು? ಯಾವ ರೀತಿ ಮಾಡಬೇಕು? ಎನ್ನುವುದು ಪಕ್ಷದ ವರಿಷ್ಠರ ಗಮನದಲ್ಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಬೆಳಿಗ್ಗೆ ಮಾತನಾಡಿದ ಅವರು, ‘ನಾನೂ ಕೂಡಾ ಪಕ್ಷದ ವರಿಷ್ಠರಗಮನಕ್ಕೆ ತರುತ್ತೇನೆ. ವರಿಷ್ಠರು ಯಾವಾಗ ಕರೆದು ಮಾತನಾಡುತ್ತಾರೊ ಆಗ ಎಲ್ಲ ವಿವರಗಳನ್ನು ಕೊಡುತ್ತೇನೆ’ ಎಂದರು.

‌‘ನಿಗಮ ಮಂಡಳಿಗಳಿಗೆ ನೇಮಕಾತಿ ವಿಚಾರದಲ್ಲಿ ಕೂಡಾ ಪಕ್ಷದಲ್ಲಿ ಚರ್ಚೆ ಆಗಬೇಕು. ಪಕ್ಷದಲ್ಲಿ ಚರ್ಚೆಯಾದ ಬಳಿಕ ಈ ಬಗ್ಗೆ ತೀರ್ಮಾನ ಆಗುತ್ತದೆ. ಪಕ್ಷದವರು ಕುಳಿತುಕೊಂಡು ಚರ್ಚೆ ಮಾಡುತ್ತಾರೆ. ಸದ್ಯಕ್ಕೆ ನನ್ನ ಮುಂದೆ ನಿಗಮ ಮಂಡಳಿಯ ಯಾವುದೇ ಪ್ರಸ್ತಾವ ಸದ್ಯಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸಚಿವ ಉಮೇಶ್‌ ಕತ್ತಿ ಮನೆಯಲ್ಲಿ ನಡೆದ ರಹಸ್ಯ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾಯಕರು ಹಲವಾರು ಸಂದರ್ಭದಲ್ಲಿ ಪ್ರತ್ಯೇಕವಾಗಿ ಸೇರುತ್ತಾರೆ. ಕಾಂಗ್ರೆಸ್‌ನವರೂ ಸೇರುತ್ತಾರೆ, ಬಿಜೆಪಿಯವರೂ ಸೇರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ‘ ಎಂದರು.

‘ಬಿಜೆಪಿ ಕಚೇರಿಯಿಂದ ಮಂಗಳವಾರದಿಂದ ಮೂರು ದಿನ ಸಭೆ ನಡೆಯುವ ಗುಟ್ಟೇನೆ?’ ಎಂದು ಕೇಳಿದ ಪ್ರಶ್ನೆಗೆ, ‘ಬಿಬಿಎಂಪಿ ವಿಚಾರದಲ್ಲಿ ಚರ್ಚಿಸಲು ಸಭೆ ಇದೆ. ಅಷ್ಟೆ’ ಎಂದರು.

‘ಬಜೆಟ್‌ ಕುರಿತು ಚರ್ಚೆ ಆರಂಭಿಸಿದ್ದೇನೆ. ಡಿಸೆಂಬರ್‌ ತಿಂಗಳಲ್ಲಿ ಹಣಕಾಸು ಇಲಾಖೆಯ ಜೊತೆ ಆಂತರಿಕ ಸಭೆ ಮಾಡಿದ್ದೇನೆ. ಆದಾಯ ಬರುವ ಇಲಾಖೆಗಳ ಜೊತೆಗೂ ಸಭೆ ಮಾಡಿ ಆದಾಯ ಬರಲು ಏನೆಲ್ಲ ಮಾಡಬೇಕು ಎಂದೂ ಸೂಚನೆ ನೀಡಿದ್ದೇನೆ. ಡಿಸೆಂಬರ್‌ ಅಂತ್ಯದಿಂದ ಕೋವಿಡ್‌ ಬಂದಿರುವುದರಿಂದ ಇದೇ 25ರಂದು ಮತ್ತೊಂದು ಸಭೆ ಮಾಡುತ್ತೇನೆ. ಆ ಬಳಿಕ ಎಲ್ಲ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಪ್ರಸ್ತಾವನೆಗಳ ಬಗ್ಗೆ ಸಭೆ ಮಾಡುತ್ತೇನೆ’ ಎಂದರು.

‘ಮುಖ್ಯಮಂತ್ರಿ ಆದ ಬಳಿಕ ಆರು ತಿಂಗಳಲ್ಲಿ ಏನು ಮಾಡಿದ್ದೇನೆ ಎನ್ನುವುದನ್ನು ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಹೇಳುತ್ತೇನೆ. ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎನ್ನುವುದಕ್ಕೆ ಸಾಧನೆಯ ಪುಸ್ತಕವನ್ನು ಮಾಡುತ್ತೇನೆ’ ಎಂದರು.

‘ಕೋವಿಡ್ ಬಗ್ಗೆ ನಾವು ಈಗಾಗಲೇ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ವಾರಾಂತ್ಯ ಕರ್ಫ್ಯೂ ತೆಗೆದಿದ್ದೇವೆ. ಕೋವಿಡ್‌ ಯಾವ ರೀತಿ ಮುಂದುವರಿಯುತ್ತಿದೆ. ಕೋವಿಡ್‌ ಬಂದವರ ಸ್ಥಿತಿಗತಿ ಬಗ್ಗೆಯೂ ಗಮನಿಸಿಬೇಕಿದೆ. ಎಲ್ಲವನ್ನೂ ಅಭ್ಯಾಸ ಮಾಡಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT