ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ರದ್ದು ಸಂವಿಧಾನಕ್ಕೆ ದ್ರೋಹ: ಸಿದ್ದರಾಮಯ್ಯ

Last Updated 30 ನವೆಂಬರ್ 2022, 17:38 IST
ಅಕ್ಷರ ಗಾತ್ರ

ಬೆಂಗಳೂರು: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 1ರಿಂದ ಎಂಟನೇ ತರಗತಿವರೆಗಿನ ಬಡ ಮಕ್ಕಳ ವಿದ್ಯಾರ್ಥಿ ವೇತನ ರದ್ದುಗೊಳಿಸಿ ಆದೇಶ ಹೊರಡಿಸಿರುವುದು ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ವಿರೋಧಿ ಸಂವಿಧಾನ ದ್ರೋಹಿ ಕೃತ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಸ್‍ಸಿ, ಎಸ್‍ಟಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ
ಗಳ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯ. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕು ಎಂಬ ಬಿಜೆಪಿಯ ಕಾರ್ಯಸೂಚಿ ನಿಧಾನಕ್ಕೆ ಕಾರ್ಯಗತವಾಗುತ್ತಿದೆ’ ಎಂದು ಅವರು ಕಿಡಿಕಾರಿದ್ದಾರೆ.

‘‌ಮೋದಿ ಸರ್ಕಾರದ ಈ ಶೂದ್ರ ವಿರೋಧಿ ನಿಲುವನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಮುಖ್ಯವಾಗಿ ಕೇಂದ್ರದ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿಯವರು ಧ್ವನಿ ಎತ್ತಿ ವಿದ್ಯಾರ್ಥಿ ವಿರೋಧಿ ನಿಲುವು ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.

‍‘ಬಿಸಿಯೂಟ, ಸಮವಸ್ತ್ರ, ಶೂ, ಕೆನೆ ಭರಿತ ಹಾಲು, ಸೈಕಲ್ ಹೀಗೆ ಸೌಲಭ್ಯನೀಡಿ ಅವರನ್ನು ಶಾಲೆಗೆ ಕರೆತಂದು ಶಿಕ್ಷಣ ನೀಡುವ ಜತೆಗೆ, ದಮನಿತರ ಮಕ್ಕಳು ಉದ್ಧಾರವಾಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿ ವೇತನದ ವ್ಯವಸ್ಥೆರೂಪಿಸಲಾಗಿತ್ತು. ಅದಕ್ಕೆ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 75-25 ಪ್ರಮಾಣದಲ್ಲಿ ಹಂಚಿಕೊಳ್ಳುವುದು ಇಲ್ಲಿಯವರೆಗೂ ನಡೆದುಕೊಂಡು ಬಂದಿತ್ತು. ಇದೀಗ ಕೇಂದ್ರ ಸರ್ಕಾರದ
ಈ ಹೊಣೆಗೇಡಿತನದ ನಿರ್ಧಾರದಿಂದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಮಕ್ಕಳು ಅನ್ಯಾಯಕ್ಕೆ ಒಳಗಾಗಲಿದ್ದಾರೆ’ ಎಂದಿದ್ದಾರೆ.

‘ಏಕಾಏಕಿ ವಿದ್ಯಾರ್ಥಿವೇತನನಿಲ್ಲಿಸುವುದರಿಂದ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆಯಾಗಲಿದೆ. ಪೋಷಕರ ಮೇಲೆ ಅವಲಂಬಿತರಾಗದೆವಿದ್ಯಾರ್ಥಿವೇತನದಿಂದ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಮಕ್ಕಳು ಈಗ ಪೋಷಕರನ್ನು ಅವಲಂಬಿಸುವ ಅನಿವಾರ್ಯ ಸೃಷ್ಟಿಯಾಗಲಿದೆ. ಈಗಾಗಲೇ ಮೋದಿ ಸರ್ಕಾರ ಪೆನ್ನು, ಪೆನ್ಸಿಲ್, ಬರವಣಿಗೆ ಪುಸ್ತಕ, ಡ್ರಾಯಿಂಗ್ ಶೀಟ್ ಸೇರಿ ಎಲ್ಲದರ ಮೇಲೂ ಜಿಎಸ್‍ಟಿ ವಿಧಿಸಿದೆ’ ಎಂದೂ ಹೇಳಿದ್ದಾರೆ.‌

ಏನು ಸಂಪಾದಿಸಲು ಹೊರಟಿದ್ದೀರಿ: ಮೋದಿ ಪ್ರಶ್ನಿಸಿದ ಖರ್ಗೆ

ನವದೆಹಲಿ: ಬಡವರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಕಸಿದುಕೊಂಡು ಏನು ಸಂಪಾದಿಸಲು ಹೊರಟಿದ್ದೀರಿ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬುಧವಾರ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ನರೇಂದ್ರ ಮೋದಿ ಜೀ, ನಿಮ್ಮ ಸರ್ಕಾರವು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿದೆ. ಬಡ ಮಕ್ಕಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನ ಕಸಿದುಕೊಂಡಿರುವುದರ ಅರ್ಥವೇನು? ಬಡ ಮಕ್ಕಳಿಗೆ ಕೊಡಬೇಕಾದ ಹಣ ಕಿತ್ತುಕೊಂಡು ನಿಮ್ಮ ಸರ್ಕಾರ ಎಷ್ಟು ಸಂಪಾದಿಸಲಿದೆ ಅಥವಾ ಉಳಿಸಲಿದೆ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿ, ಇದನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ವಯಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿತ್ತು. ತನ್ನ ಈ ನಿರ್ಧಾರ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 1ರಿಂದ 8ನೇ ತರಗತಿಯವರೆಗೆ ಮಾತ್ರ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ ಎಂದೂ ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT