ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡವರ ‘ಡ್ರಗ್ಸ್’ ನಶೆ: ಡ್ರಗ್ಸ್ ದಂಧೆಯೇ ಪ್ರತೀಕ್ ವೃತ್ತಿ, ಗೆಳತಿಯಿಂದ ಸಹಕಾರ

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣ; ಇನ್‌ಸ್ಟಾಗ್ರಾಮ್ ಖಾತೆಯಿಂದ ವ್ಯವಹಾರ
Last Updated 1 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಹಾಗೂ ಖರೀದಿದಾರರ ನಡುವೆ ಮಧ್ಯವರ್ತಿ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರತೀಕ್ ಶೆಟ್ಟಿ, ಡ್ರಗ್ಸ್ ದಂಧೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಆತನ ದಂಧೆಗೆ ಗೆಳತಿ ಅಪೇಕ್ಷಾ ನಾಯಕ್ ಸಹಕಾರ ನೀಡುತ್ತಿದ್ದಳೆಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ 15ನೇ ಆರೋಪಿ ಆಗಿರುವ ಪ್ರತೀಕ್ ಶೆಟ್ಟಿ ಹಾಗೂ 25ನೇ ಆರೋಪಿ ಅಪೇಕ್ಷಾ ನಾಯಕ್, ಹಲವು ವರ್ಷಗಳ ಸ್ನೇಹಿತರು. ಇಬ್ಬರೂ ಒಟ್ಟಿಗೆ ‘ಡ್ರಗ್ಸ್ ಪಾರ್ಟಿ’ಯಲ್ಲಿ ಪಾಲ್ಗೊಳ್ಳುತ್ತಿದ್ದರು. ಡ್ರಗ್ಸ್ ಸೇವಿಸುತ್ತಿದ್ದ ಅವರಿಬ್ಬರು, ಡ್ರಗ್ಸ್ ಮಾರಾಟದ ಮೂಲಕವೂ ಹಣ ಸಂಪಾದಿಸುತ್ತಿದ್ದರು’ ಎಂಬ ಅಂಶ ಸಿಸಿಬಿ ಪೊಲೀಸರ ದೋಷಾರೋಪ ಪಟ್ಟಿಯಲ್ಲಿದೆ.

‘ಪ್ರಕರಣದ ಆರೋಪಿಯೂ ಆಗಿರುವ ಆರ್‌ಟಿಒ ಕಚೇರಿ ಎಫ್‌ಡಿಎ ಬಿ.ಕೆ.ರವಿಶಂಕರ್ ನಾದಿನಿಯೇ ಈ ಅಪೇಕ್ಷಾ ನಾಯಕ್. ಆಕೆಯನ್ನು ಪಾರ್ಟಿಯೊಂದರಲ್ಲಿ ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದ ಪ್ರತೀಕ್, ಆಕೆಯ ಜೊತೆ ಡ್ರಗ್ಸ್ ದಂಧೆ ಮುಂದುವರಿಸಿದ್ದ. ಇವರಿಬ್ಬರು ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ವೀರೇನ್ ಖನ್ನಾ, ರವಿಶಂಕರ್ ಹಾಗೂ ಇತರೆ ಆರೋಪಿಗಳ ಜೊತೆ ಒಡನಾಟವಿಟ್ಟುಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ನೈಜೀರಿಯಾ ಪ್ರಜೆಗಳಿಗೂ ಇವರಿಬ್ಬರು ಆತ್ಮಿಯರಾಗಿದ್ದರು. ಇದಕ್ಕೆ ಸಂಬಂಧಪಟ್ಟ ಮೊಬೈಲ್ ಮಾತುಕತೆ ವಿವರಗಳು ಸಿಕ್ಕಿವೆ.’

‘ಇಬ್ಬರೂ ಆರೋಪಿಗಳು ನಗರದ ವಿವಿಧ ಹೋಟೆಲ್, ವಿಲ್ಲಾ ಹಾಗೂ ಕ್ಲಬ್‌ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದರು. ಪಾರ್ಟಿಗೆ ಯುವಕ–ಯುವತಿಯರನ್ನು ಆಹ್ವಾನಿಸಿ ಡ್ರಗ್ಸ್ ಮಾರುತ್ತಿದ್ದರು. ಈ ಬಗ್ಗೆಯೂ ಪುರಾವೆಗಳು ಲಭ್ಯವಾಗಿವೆ’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ಇನ್‌ಸ್ಟಾಗ್ರಾಮ್ ಖಾತೆಯಿಂದ ವ್ಯವಹಾರ: ‘ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ‘#pattshetty’ ಹೆಸರಿನಲ್ಲಿ ಖಾತೆ ಹೊಂದಿದ್ದ ಪ್ರತೀಕ್ ಶೆಟ್ಟಿ, ಅದರ ಮೂಲಕವೇ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ವ್ಯವಹಾರ ಮಾಡುತ್ತಿದ್ದ’ ಎಂಬ ಅಂಶ ಪಟ್ಟಿಯಲ್ಲಿದೆ.

‘ಪ್ರಕರಣದ ಆರೋಪಿಗಳಾಗಿರುವ ನೈಜೀರಿಯಾ ಪ್ರಜೆಗಳ ಜೊತೆ ಹೆಚ್ಚು ಒಡನಾಟ ಹೊಂದಿದ್ದ ಪ್ರತೀಕ್, ಅವರಿಂದಲೇ ಡ್ರಗ್ಸ್ ಖರೀದಿಸಿದ್ದಕ್ಕೆ ಸಾಕ್ಷ್ಯಗಳಿವೆ. ಅವರನ್ನು ಇತರರಿಗೆ ಪರಿಚಯ ಮಾಡಿಕೊಟ್ಟು ‘ಕಮಿಷನ್’ ಸಹ ಪಡೆಯುತ್ತಿದ್ದ. ಪ್ರತೀಕ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದಾಗ, 11.50 ಗ್ರಾಂ ಎಕ್ಸೈಟೆಸ್ಸಿ ಮಾತ್ರೆಗಳು ಪತ್ತೆಯಾಗಿದ್ದವು’ ಎಂಬ ಮಾಹಿತಿಯನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಡ್ರಗ್ಸ್ ಮಾರಾಟ ಪ್ರಕರಣವೊಂದರಲ್ಲಿ ನೈಜೀರಿಯಾ ಪ್ರಜೆಗಳ ಜೊತೆ ಪ್ರತೀಕ್‌ನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದರು. ಕೆಲ ದಿನ ಜೈಲಿನಲ್ಲಿದ್ದ ಆತ, ಜಾಮೀನು ಮೇಲೆ ಹೊರಬಂದು ಪುನಃ ಡ್ರಗ್ಸ್ ಮಾರಲಾರಂಭಿಸಿದ್ದ. ಇತರೆ ಆರೋಪಿಗಳ ಜೊತೆ ಸಂಘಟಿತನಾಗಿ ‘ಡ್ರಗ್ಸ್ ಪೆಡ್ಲರ್’ ಆಗಿ ಬೆಳೆಯುತ್ತಿದ್ದ’ ಎಂಬ ಅಂಶವೂ ಪಟ್ಟಿಯಲ್ಲಿದೆ.

ಲಾಕ್‌ಡೌನ್‌ನಲ್ಲೂ ಡ್ರಗ್ಸ್ ಪಾರ್ಟಿ: ‘ಆರೋಪಿಯೂ ಆಗಿರುವ ನಟಿ ಸಂಜನಾ ಗಲ್ರಾನಿ ಜೊತೆ ಒಡನಾಟ ಹೊಂದಿದ್ದ ಅಪೇಕ್ಷಾ, ಕೆಲ ಆ್ಯಪ್‌ಗಳಲ್ಲಿ ಖಾತೆ ತೆರೆಯಲು ಸಹಕಾರ ನೀಡಿದ್ದಳು. ಅಂಥ ಖಾತೆಗಳಿಂದಲೂ ಡ್ರಗ್ಸ್ ವ್ಯವಹಾರ ನಡೆಯುತ್ತಿತ್ತು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಲಾಕ್‌ಡೌನ್‌ ಸಮಯದಲ್ಲೂ ಕೆಲವೆಡೆ ಪಾರ್ಟಿಗಳು ನಡೆದಿದ್ದವು. ಅಪೇಕ್ಷಾ, ಗೆಳೆಯ ಪ್ರತೀಕ್ ಜೊತೆ ಪಾರ್ಟಿಗಳಲ್ಲಿ ಪಾಲ್ಗೊಂಡು ಡ್ರಗ್ಸ್ ಸೇವನೆ ಮಾಡಿದ್ದಳು’ ಎಂದೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಸದಾಶಿವನಗರ ಮನೆಯಲ್ಲಿ ಡ್ರಗ್ಸ್ ಪಾರ್ಟಿ’
‘ಪ್ರಕರಣದ 10ನೇ ಆರೋಪಿ ಅಭಿಸ್ವಾಮಿ ಅಲಿಯಾಸ್ ಅಭಿಜಿತ್ ರಂಗಸ್ವಾಮಿ, ಖಾಸಗಿ ಕಂಪನಿ ಉದ್ಯೋಗಿ. ಸದಾಶಿವನಗರದ ಭಾಷ್ಯಂ ವೃತ್ತ ಬಳಿಯ ಹಾಗೂ ನೆಲಮಂಗಲ ರಸ್ತೆಯಲ್ಲಿರುವ ಮನೆಗಳಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದ’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

‘ಪ್ರತಿ ಬಾರಿಯೂ ರಾತ್ರಿ 10 ಗಂಟೆಗೆ ಆರಂಭವಾಗುತ್ತಿದ್ದ ಪಾರ್ಟಿ, ನಸುಕಿನವರೆಗೂ ನಡೆಯುತ್ತಿತ್ತು. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಸಹ ಒಮ್ಮೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅವರ ಎದುರೇ ಕೊಕೇನ್ ಹಾಗೂ ಎಕ್ಸೈಟೆಸ್ಸಿ ಮಾತ್ರೆಗಳ ಮಾರಾಟ ಆಗಿತ್ತು. ಈ ಬಗ್ಗೆ ಅವರಿಬ್ಬರು ಸಾಕ್ಷಿ ಹೇಳಿದ್ದಾರೆ.’

‘ಪ್ರಕರಣದಲ್ಲಿ ನಟಿ ರಾಗಿಣಿ ಬಂಧನವಾಗುತ್ತಿದ್ದಂತೆ ಸ್ನೇಹಿತರೊಬ್ಬರನ್ನು ತನ್ನ ಮನೆಗೆ ಕರೆಸಿದ್ದ ಅಭಿಸ್ವಾಮಿ, ‘ಡ್ರಗ್ಸ್ ಪ್ರಕರಣದಲ್ಲಿ ನನ್ನ ಹೆಸರು ಸಹ ಇದೆ. ಪೊಲೀಸರು ನನ್ನನ್ನು ಯಾವಾಗ ಬೇಕಾದರೂ ಬಂಧಿಸಬಹುದು. ಈ ಬಗ್ಗೆ ಆತಂಕ ಶುರುವಾಗಿದೆ’ ಎಂದಿದ್ದ. ಅದೇ ದಿನ ಸ್ನೇಹಿತನ ಮೊಬೈಲ್‌ನಿಂದ ಪೆಡ್ಲರ್‌ಗೆ ಕರೆ ಮಾಡಿ ಕೊಕೇನ್‌ ಡ್ರಗ್ಸ್ ತರಿಸಿಕೊಂಡು ಸೇವಿಸಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT