ಭಾನುವಾರ, ಮೇ 9, 2021
22 °C
ರಶೀದಿ, ಮೊಬೈಲ್ ಪುರಾವೆ ಸಲ್ಲಿಕೆ

ಯುವತಿಯ ವೈದ್ಯಕೀಯ ಪರೀಕ್ಷೆ: ಕೊಟ್ಟ ದೂರಿಗೆ ಬದ್ಧ -ಸಂತ್ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸ್ವ–ಇಚ್ಛಾ ಹೇಳಿಕೆ ನೀಡಿ ವಿಚಾರಣೆ ಎದುರಿಸುತ್ತಿರುವ ಸಂತ್ರಸ್ತೆ, ತನ್ನ ಮೇಲೆ ಆಗಿರುವ ಅತ್ಯಾಚಾರಕ್ಕೆ ಸಂಬಂಧಪಟ್ಟ ಸಮಗ್ರ ದಾಖಲೆಗಳನ್ನೇ ತನಿಖಾಧಿಕಾರಿ ಎದುರು ಇಟ್ಟಿದ್ದಾರೆ.

ನ್ಯಾಯಾಲಯದ ಎದುರು ಮಂಗಳವಾರ ಮಧ್ಯಾಹ್ನ ಹಾಜರಾಗಿದ್ದ ಯುವತಿ ಹೇಳಿಕೆ ದಾಖಲಿಸಿದ್ದರು. ಇದಾದ ನಂತರ, ತನಿಖಾ ಪ್ರಕ್ರಿಯೆಗಳನ್ನು ಪೂರೈಸುವಂತೆ ತನಿಖಾಧಿಕಾರಿ ಎಂ.ಸಿ. ಕವಿತಾ ಅವರಿಗೆ ನ್ಯಾಯಾಲಯ ಅವಕಾಶ ನೀಡಿದೆ.

ಮಂಗಳವಾರ ಸಂಜೆಯೇ ಸಂತ್ರಸ್ತೆಯನ್ನು ಆಡುಗೋಡಿಯಲ್ಲಿರುವ ಸಿಸಿಬಿಯ ತಾಂತ್ರಿಕ ವಿಭಾಗದ ಕೊಠಡಿಗೆ ಕರೆದೊಯ್ದಿದ್ದ ಕವಿತಾ, ಧ್ವನಿ ಮಾದರಿ ಸಂಗ್ರಹಿಸಿದರು. 

ಬುಧವಾರ ಬೆಳಿಗ್ಗೆ ಪುನಃ ಸಂತ್ರಸ್ತೆಯನ್ನು ಸಂಪರ್ಕಿಸಿದ ಕವಿತಾ, ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ನಂತರ, ಆಡುಗೋಡಿಗೆ ಕರೆತಂದು ರಾತ್ರಿಯವರೆಗೆ ವಿಚಾರಣೆ ನಡೆಸಿದರು.

‘ಹೇಳಿಕೆ ನೀಡಿದ ಸಂತ್ರಸ್ತೆ, ತಮ್ಮ ಪ್ರತಿಯೊಂದು ಮಾತಿಗೂ ತನಿಖಾಧಿಕಾರಿ ಎದುರು ದಾಖಲೆ ಮುಂದಿಟ್ಟು ಉತ್ತರಿಸಿದರು. ಪೂರಕ ಪ್ರಶ್ನೆಗಳಿಗೂ ನೇರವಾಗಿ ಉತ್ತರಿಸಿದರು’ ಎಂದು ಮೂಲಗಳು ಹೇಳಿವೆ.

ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ, ರಶೀದಿ ಸೇರಿದಂತೆ ಹಲವು ಪುರಾವೆಗಳನ್ನು ಸಂತ್ರಸ್ತೆಯೇ ಸ್ವಯಂಪ್ರೇರಣೆಯಿಂದ ತನಿಖಾಧಿಕಾರಿಗೆ ಒಪ್ಪಿಸಿದ್ದಾರೆ.

‘ರಮೇಶ ಜಾರಕಿಹೊಳಿ ಹೇಗೆ ಪರಿಚಯ’ ಎಂಬ ಪ್ರಶ್ನೆಗೆ ಚಿನ್ನಾಭರಣ ಖರೀದಿಯ ರಶೀದಿ, ಮೊಬೈಲ್ ಹಾಗೂ ಇತರೆ ದಾಖಲೆಗಳನ್ನು ತನಿಖಾಧಿಕಾರಿ ಮುಂದಿಟ್ಟು ಮಾತನಾಡಿದ ಸಂತ್ರಸ್ತೆ, ‘ಕಿರುಚಿತ್ರ ನಿರ್ಮಾಣಕ್ಕಾಗಿ ರಮೇಶ ಜಾರಕಿಹೊಳಿ ಪರಿಚಯವಾಗಿತ್ತು. ಸಚಿವರಾಗಿದ್ದರಿಂದ ಅವರ ಮೇಲೆ ನಂಬಿಕೆ ಬಂದು ಮೊಬೈಲ್‌ ನಂಬರ್‌ ಕೊಟ್ಟಿದ್ದೆ. ಆದರೆ, ಅವರು ಕರೆ ಮಾಡಿ ಸಲುಗೆಯಿಂದ ಮಾತನಾಡಲಾರಂಭಿಸಿದ್ದರು’ ಎಂದು ಹೇಳಿರುವುದಾಗಿ ಗೊತ್ತಾಗಿದೆ.

‘ಎಂಜಿನಿಯರಿಂಗ್ ಮುಗಿಸಿದ್ದೇನೆಂದು ತಿಳಿದುಕೊಂಡು ಕೆಲಸ ಕೊಡಿಸುವ ಭರವಸೆ ನೀಡಿದ್ದರು. ನಂತರ, ತಾವು ಹೇಳಿದಂತೆ ಸಹಕರಿಸುವಂತೆ ಹೇಳಿದ್ದರು. ಸಚಿವರಾಗಿದ್ದರಿಂದ ಕೆಲಸ ಸಿಗಬಹುದೆಂಬ ಆಸೆಯಿಂದ ಅವರು ಹೇಳಿದ್ದಕ್ಕೆಲ್ಲ ಒಪ್ಪಿದೆ. ಲೈಂಗಿಕವಾಗಿ ನನ್ನನ್ನು ಬಳಸಿಕೊಂಡರು’ ಎಂದೂ ಸಂತ್ರಸ್ತೆ ತಿಳಿಸಿದ್ದಾರೆ.

‘ಆರಂಭದಲ್ಲೇ ಅವರು ನನಗೆ ಉಡುಗೊರೆ ನೀಡಲಾರಂಭಿಸಿದ್ದರು. ಚಿನ್ನಾಭರಣ ಖರೀದಿಸಿ ಕೊಟ್ಟರು. ಅದರ ರಶೀದಿ ಇಲ್ಲಿದೆ. ಜೊತೆಗೆ, ಮೊಬೈಲ್ ಸಹ ಕೊಟ್ಟರು. ಅದನ್ನೂ ನಿಮಗೆ ನೀಡುತ್ತೇನೆ. ನನಗೆ ಸಾಕಷ್ಟು ಅನ್ಯಾಯವಾಗಿದೆ. ಪ್ರಭಾವಿ ಜೊತೆ ಹೋರಾಟ ಮಾಡುವುದು ತುಂಬಾ ಕಷ್ಟವೆಂದು ತಿಳಿದು ಹಲವರನ್ನು ಸಂಪರ್ಕಿಸಿದ್ದೆ. ನನ್ನನ್ನೇ ಕೊಲ್ಲಬಹುದೆಂದು ಹೆದರಿ ಅಜ್ಞಾತ ಸ್ಥಳದಲ್ಲಿದ್ದೆ. ನಾನು ನೀಡಿರುವ ದೂರಿಗೆ ಸದಾ ಬದ್ಧ. ದಯವಿಟ್ಟು ನನಗೆ ನ್ಯಾಯ ಕೊಡಿಸಿ’ ಎಂದೂ ಸಂತ್ರಸ್ತೆ ಕೋರಿರುವುದಾಗಿ ಗೊತ್ತಾಗಿದೆ.

‘ರಮೇಶ ಜಾರಕಿಹೊಳಿ ಅವರನ್ನು ಯಾವೆಲ್ಲ ಸ್ಥಳದಲ್ಲಿ ಭೇಟಿಯಾಗಿದ್ದೀರಾ? ಆ ಸ್ಥಳಗಳನ್ನು ಗುರುತು ಹಿಡಿಯುತ್ತೀರಾ. ನಮ್ಮ ಮಹಜರು ಪ್ರಕ್ರಿಯೆ ಸಹಕರಿಸುತ್ತೀರಾ ?’ ಎಂದು ಕೇಳಿದ್ದಕ್ಕೆ, ‘ಖಂಡಿತ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದೂ ಸಂತ್ರಸ್ತೆ ಹೇಳಿದ್ದಾರೆ.

‘ಸಂತ್ರಸ್ತೆ ಧೈರ್ಯದಿಂದಲೇ ಉತ್ತರಿಸುತ್ತಿದ್ದಾರೆ. ಕೆಲ ಪ್ರಶ್ನೆಗಳಿಗೆ ಗೊತ್ತಿಲ್ಲವೆಂದು ಹೇಳುತ್ತಿದ್ದಾರೆ.
ಇದು ಪ್ರಾಥಮಿಕ ವಿಚಾರಣಾ ಹೇಳಿಕೆ. ಇದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಗುರುವಾರ ಬೆಳಿಗ್ಗೆ ಪುನಃ
ವಿಚಾರಣೆಗೆ ಬರುವಂತೆ ಸಂತ್ರಸ್ತೆಗೆ ತಿಳಿಸಲಾಗಿದೆ’ ಎಂದು  ಮೂಲಗಳು ಹೇಳಿವೆ.

ವಿಡಿಯೊ ಚಿತ್ರೀಕರಿಸಿದ್ದು ನಾನೇ ಎಂದ ಯುವತಿ

‘ಸಿ.ಡಿ.ಯಲ್ಲಿರುವ ವಿಡಿಯೊ ಅಸಲಿ. ನನಗೆ ಕೆಲಸ ಕೊಡಿಸಲಾಗದು ಎಂದಿದ್ದ ರಮೇಶ ಜಾರಕಿಹೊಳಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದರು. ಅದರಿಂದ ತುಂಬಾ ನೋವಾಗಿತ್ತು. ಅದಕ್ಕೆ ನಾನೇ, ಇಬ್ಬರು ಸೇರುವ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದೆ. ಮೂಲ ದೃಶ್ಯವನ್ನೂ ನಿಮಗೆ ನೀಡುತ್ತೇನೆ’ ಎಂದು ಯುವತಿ, ತನಿಖಾಧಿಕಾರಿಗೆ ಹೇಳಿರುವುದಾಗಿ ಗೊತ್ತಾಗಿದೆ.

ರಮೇಶ ವಿಚಾರಣೆ ನಾಳೆ

ನ್ಯಾಯಾಲಯದಲ್ಲಿ ಸಂತ್ರಸ್ತೆ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬಂಧನದ ಭೀತಿ ಶುರುವಾಗಿದೆ. ಏಪ್ರಿಲ್ 2ರಂದು ಅವರು ತನಿಖೆಗೆ ಹಾಜರಾಗಬೇಕಿದ್ದು, ಅಂದೇ ಅವರನ್ನು ತನಿಖಾಧಿಕಾರಿ, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ಸಾಧ್ಯತೆ ಇದೆ.

ಮಾರ್ಚ್ 29ರಂದು ಪ್ರಕರಣದ ವಿಚಾರಣೆಗಾಗಿ ರಮೇಶ ಜಾರಕಿಹೊಳಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಿದ್ದರು. ತನಿಖಾಧಿಕಾರಿಯವರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿರಲಿಲ್ಲ. ಏಪ್ರಿಲ್ 2ರಂದು ಮತ್ತೆ ವಿಚಾರಣೆಗೆ ಬರುವುದಾಗಿ ಕೋರಿದ್ದರು. ಹೀಗಾಗಿ, ಅದೇ ದಿನ ವಿಚಾರಣೆ ನಡೆಸಲು ತನಿಖಾಧಿಕಾರಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು