ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹29 ಸಾವಿರ ಕೋಟಿ ಸಾಲದ ದಾರಿಗೆ ಸರ್ಕಾರ ಒಪ್ಪಿಗೆ

Last Updated 2 ಸೆಪ್ಟೆಂಬರ್ 2020, 18:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಷ್ಟ ಪರಿಹಾರದ ಅಲಭ್ಯತೆಯಿಂದಾಗಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು ಜಿಎಸ್‌ಟಿ ಸೆಸ್ ಹಾಗೂ ವಿಶೇಷ ರೂಪದ ಸಾಲ ಪಡೆಯುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಜಿಎಸ್‌ಟಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಿದ್ದ ಕೇಂದ್ರ ಸರ್ಕಾರ, ಎರಡು ಆಯ್ಕೆಗಳನ್ನು ರಾಜ್ಯಗಳ ಎದುರು ಇಟ್ಟಿತ್ತು. ಇವುಗಳಲ್ಲಿ ಆಯ್ಕೆಯನ್ನು ತಿಳಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು.

ಆಯ್ಕೆ ಒಂದರ ಪ್ರಕಾರ, ಸೆಸ್‌ ಹಾಗೂ ಕೇಂದ್ರ ಸರ್ಕಾರವೇ ವಿಶೇಷ ಗವಾಕ್ಷಿ(ವಿಂಡೋ) ಮೂಲಕ ಕೊಡಿಸುವ ಸಾಲ ಪಡೆಯುವುದು. ಹೀಗೆ ಪಡೆದಾಗ ಒಟ್ಟು ಜಿಎಸ್‌ಡಿಪಿಯ ಶೇ 1ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯುವ ಅನುಕೂಲತೆ ಕೂಡ ಇರುತ್ತದೆ. ಆಯ್ಕೆ ಎರಡರ ಪ್ರಕಾರ, ಜಿಎಸ್‌ಟಿ ನಷ್ಟ ಪರಿಹಾರದ ಮೊತ್ತ ಜಾಸ್ತಿ ಇದೆ. ಆದರೆ ಉಳಿದ ಮೊತ್ತವನ್ನು ಹೆಚ್ಚಿನ ಬಡ್ಡಿ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸಾಲಪಡೆಯಬೇಕಾಗುತ್ತದೆ.

‘ಈ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ಆಯ್ಕೆ 1ನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ‌. ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

‘ಮೊದಲ ಆಯ್ಕೆ ಅಡಿಯಲ್ಲಿ, ರಾಜ್ಯವು ಒಟ್ಟು ₹ 18,289 ಕೋಟಿ ಪರಿಹಾರ ಪಡೆಯಲು ಅರ್ಹವಾಗಿದೆ. ಇದರಲ್ಲಿ ₹ 6,965 ಕೋಟಿ ಸೆಸ್‌ನಿಂದ ಬರುತ್ತದೆ. ಉಳಿದ ₹ 11,324 ಕೋಟಿ ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಭವಿಷ್ಯದಲ್ಲಿ ಸೆಸ್‌ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿ ಮಾಡಲಾಗುವುದು. ಅಲ್ಲದೆ, ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ (ಜಿಎಎಸ್‌ಡಿಪಿ) ಶೇ 1ರಷ್ಟು (₹ 18,036 ಕೋಟಿ) ಹೆಚ್ಚುವರಿ ಸಾಲವನ್ನು ಯಾವುದೇ ಷರತ್ತು ಇಲ್ಲದೆ ಪಡೆಯಲು ಅವಕಾಶವಿದೆ’ ಎಂದೂ ಅವರು ಹೇಳಿದ್ದಾರೆ.

ಎರಡನೇ ಆಯ್ಕೆ ಏನು?: ಎರಡನೇ ಆಯ್ಕೆಯಲ್ಲಿ ರಾಜ್ಯವು ₹ 25,508 ಕೋಟಿ ಪರಿಹಾರಕ್ಕೆ ಅರ್ಹವಾಗಿದ್ದು, ಇದರಲ್ಲಿ ₹ 6,965 ಸೆಸ್‌ನಿಂದ ಬರುತ್ತದೆ. ಉಳಿದ ₹ 18,543 ಕೋಟಿಗಳಿಗೆ ಮಾರುಕಟ್ಟೆಯಿಂದ ಸಾಲವಾಗಿ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಜಿಎಸ್‌ಡಿಪಿಯ ಶೇ 1ರಷ್ಟು (₹ 18,036 ಕೋಟಿ) ಸಾಲ ಪಡೆಯಲು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ರಾಜ್ಯ ಪಡೆದುಕೊಳ್ಳಬಹುದಾದ ಸಾಲದ ಮೊತ್ತ ₹ 10,817 ಕೋಟಿಯಷ್ಟು ಕಡಿಮೆಯಾಗುತ್ತದೆ. ಅಲ್ಲದೆ, ಈ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ತನ್ನ ಸಂಪನ್ಮೂಲದಿಂದ ಪಾವತಿಸಬೇಕಾಗುತ್ತದೆ. ಹೀಗಾಗಿ, ಈ ಆಯ್ಕೆಯನ್ನು ಸರ್ಕಾರ ಕೈಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT