ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಸದಾನಂದ ಗೌಡ ಅಸಮಾಧಾನ: ಆಡಿಯೊ ವೈರಲ್‌

Last Updated 14 ಮೇ 2021, 14:20 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿ ಕಾರ್ಯಕರ್ತರೊಬ್ಬರು ಕರೆ ಮಾಡಿದಾಗ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾದ ಧ್ವನಿ ಮುದ್ರಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಧ್ವನಿ ಮುದ್ರಣ ತುಳು ಭಾಷೆಯಲ್ಲಿದೆ. ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂದು ಹೇಳಿದ ವ್ಯಕ್ತಿಗೆ, ಸದಾನಂದ ಗೌಡರು, ‘ನಾವು ಕೇಂದ್ರದಿಂದ ಕೊಡುವುದನ್ನೆಲ್ಲ ಕೊಟ್ಟಿದ್ದೇವೆ. ನಿಮ್ಮ ರಾಜ್ಯದ ಅಧ್ಯಕ್ಷರನ್ನು ಕೇಳಿ. ನಾವು ಕೇಂದ್ರದಿಂದ ಕೊಟ್ಟಿದ್ದನ್ನು ನೀವು ಜನರಿಗೆ ಕೊಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ನಾವು ಕೇಳಿದ್ದಕ್ಕಿಂತ ಹೆಚ್ಚೇ ಕೊಟ್ಟಿದ್ದೇವೆ. ರಾಜ್ಯದಲ್ಲಿ ಸಮಸ್ಯೆ ಇದ್ದರೆ, ಅವರು ಸರಿ ಮಾಡಲಿ, ನಾವು ಮಾಡುವುದಲ್ಲ. ನಿಮ್ಮಲ್ಲಿ ಎಂಎಲ್‌ಎ, ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರಲ್ಲ, ಹಾಗಾದ್ರೆ ಅವರೆಲ್ಲ ಯಾಕೆ ಇರುವುದು? ನೀವು ಅವರಲ್ಲಿ ಕೇಳದೇ ನಮ್ಮಲ್ಲಿ ಏನು ಕೇಳುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

‘ನಿಮಗೆ ರೆಮ್‌ಡಿಸಿವಿರ್ ಬೇಕಾ? ಆಮ್ಲಜನಕ, ಅಕ್ಕಿ ಎಲ್ಲವನ್ನೂ ಕೊಡಿಸಿದ್ದೇವೆ. ಏನನ್ನೂ ಬಾಕಿ ಇಟ್ಟಿಲ್ಲ. ನೀವೆಲ್ಲ ಒಮ್ಮೆ ಹೋಗಿ ಕೂತು, ಅವರಲ್ಲಿ ಆಗಲೇ ಬೇಕು ಅಂತ ಹೇಳಿ. ಅವರು ಇಲ್ಲಿ ಕತ್ತೆ ಕಾಯಲಿಕ್ಕೆ ಇರುವುದಾ’ ಎಂದಿರುವ ಸಂಗತಿ ಧ್ವನಿ ಮುದ್ರಣದಲ್ಲಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಪ್ರಶ್ನಿಸಿದಾಗ, ‘ನಾನು ಆಡಿಯೊ ಕೇಳಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ನುಣುಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT