ಮಂಗಳವಾರ, ಸೆಪ್ಟೆಂಬರ್ 27, 2022
27 °C

ಸಿಇಟಿ ಗೊಂದಲ: ದಂಗಾದ ಕೆಇಎ!

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾರಣಕ್ಕೆ 2020– 21 ನೇ ಸಾಲಿನಲ್ಲಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. ಅಂಥ ವಿದ್ಯಾರ್ಥಿಗಳಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯೂ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು (ಕೆಇ‌ಎ) ದಂಗು ಬಡಿಸಿದೆ!

ಅಷ್ಟೇ ಅಲ್ಲ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೆಇಎ, ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಪೈಕಿ ಯಾರಾದರೂ ಕಳೆದ ವರ್ಷ (2020–21ರಲ್ಲಿ) ‌ಸಿಇಟಿ ಬರೆದು ಸೀಟು ಹಂಚಿಕೆಯಾಗಿ ಕೋರ್ಸ್‌ ಆಯ್ಕೆ ಮಾಡಿಕೊಂಡು ಕಲಿಯುತ್ತಿದ್ದಾರೆಯೇ? ಎಷ್ಟು ಮಂದಿ ಸೀಟು ತೆಗೆದುಕೊಂಡೂ ಕೋರ್ಸ್‌ಗೆ ಸೇರಿಲ್ಲ? ಸೀಟು ಸಿಕ್ಕವರು ಅದನ್ನು ರದ್ದುಪಡಿಸದೆ, ಈಗ ಮತ್ತೆ ಸಿಇಟಿ ಬರೆದಿದ್ದಾರೆ ಎಂದು ಪರಿಶೀಲಿಸಲು ಮುಂದಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ, ‘ಸಿಇಟಿ ಬರೆದು ಕೋರ್ಸ್‌ ಆಯ್ಕೆ ಮಾಡಿಕೊಂಡವರು‌ ಅಥವಾ ಹಂಚಿಕೆಯಾದ ಸೀಟನ್ನು ನಿಗದಿಪಡಿಸಿದ ದಿನದ ಒಳಗೆ ರದ್ದುಪಡಿಸದವರು ಮತ್ತೊಮ್ಮೆ ಸಿಇಟಿ ಮೂಲಕ ಸೀಟು ಪಡೆಯಲು ಅರ್ಹರಲ್ಲ’ ಎಂದು ಸ್ಪಷ್ಟಪಡಿಸಿದರು.

‘‌ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಹಿಂದೆಂದೂ ಎರಡನೇ ಬಾರಿ ಸಿಇಟಿ ಬರೆದ ನಿದರ್ಶನ ಇಲ್ಲ. ಈ ಬಾರಿಯೂ ಸಿಇಟಿ ಬರೆದವರಲ್ಲಿ ಬಹುತೇಕ ವಿದ್ಯಾರ್ಥಿಗಳು ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದವರು.‌ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಿಇಟಿ ಬರೆದಿರುವುದರ ಹಿಂದೆ ಯಾವುದೋ ಉದ್ದೇಶ ಇದ್ದಂತೆ ಕಾಣಿಸುತ್ತಿದೆ. ಹೀಗಾಗಿ, ಈ ಬಾರಿ ಸೀಟು ಹಂಚಿಕೆ ಪ್ರಕ್ರಿಯೆಗೂ ಮೊದಲೇ ಮತ್ತೆ ಸಿಇಟಿ ಬರೆದ ಈ ವಿದ್ಯಾರ್ಥಿಗಳನ್ನು ಪರಿಶೀಲನೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ’ ಎಂದರು.

‘ಈ ಹಿಂದೆ ಎಂದೂ 2ನೇ ಬಾರಿ ಸಿಇಟಿ ಬರೆದವರ ಸಂಖ್ಯೆ 2ಸಾವಿರ ದಾಟಿಲ್ಲ. ಪಶು ವೈದ್ಯಕೀಯ, ಬಿಎಸ್ಸಿ, ಕೃಷಿ, ನ್ಯಾಚುರೋಪಥಿ, ಯೋಗ ವಿಜ್ಞಾನ, ಬಿ. ಫಾರ್ಮಾ ಸೀಟು ಬೇಕೆಂದು ಮತ್ತೊಮ್ಮೆ ಸಿಇಟಿ ಬರೆಯುವವರು ಇದ್ದಾರೆ. ಆದರೆ, ಎಂಜಿನಿಯರಿಂಗ್‌ ನಲ್ಲಿ ಇಂಥದ್ದೇ ಕೋರ್ಸ್‌ ಬೇಕು, ಇಂಥದ್ದೇ ಕಾಲೇಜು ಬೇಕು ಎಂದು ಮತ್ತೆ ಸಿಇಟಿ ಬರೆಯುವವರ ಸಂಖ್ಯೆ ವಿರಳ. ಈ ಹಿಂದಿನ ವರ್ಷಗಳಲ್ಲಿ 400–500 ವಿದ್ಯಾರ್ಥಿಗಳು ಮಾತ್ರ ಮತ್ತೆ ಸಿಇಟಿ ಬರೆದಿದ್ದಾರೆ. ಈ ಸಂಖ್ಯೆ 2,000 ದಾಟಿದ್ದೇ ಇಲ್ಲ. ಆದರೆ, ಈ ಬಾರಿ 24 ಸಾವಿರ ವಿದ್ಯಾರ್ಥಿಗಳು ಮತ್ತೆ ಸಿಇಟಿ ಬರೆದಿದ್ದಾರೆಂದರೆ ಹಲವು ಅನುಮಾನಗಳು ಮೂಡುತ್ತವೆ. ಮೊದಲ ಸುತ್ತಿನ ಸೀಟು ಹಂಚಿಕೆಗೂ ಮೊದಲು. ಈ ವಿದ್ಯಾರ್ಥಿಗಳನ್ನು ಪರಿಶೀಲಿನೆಗೆ ಒಳಪಡಿಸುವ ಅನಗತ್ಯ ಹೊರೆ ಬಿದ್ದಿದೆ’ ಎಂದೂ ಹೇಳಿದರು.

‘ಆಯಾ ವರ್ಷ ಸಿಇಟಿ ಪರೀಕ್ಷೆ ಬರೆಯುವವರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. ಹೀಗಾಗಿ, 2020–21ನೇ ಸಾಲಿನಲ್ಲಿ ಪಿಯುಸಿ ತೇರ್ಗಡೆಯಾಗಿ ಈ ಬಾರಿ ಸಿಇಟಿ ಬರೆಯುವ ಬಗ್ಗೆ ಈ ವರ್ಷದ ಸಿಇಟಿ ಮಾರ್ಗಸೂಚಿಯಲ್ಲಿ ಯಾವುದೇ ಉಲ್ಲೇಖ ಇಲ್ಲ. ಅಲ್ಲದೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಇಟಿ ಬರೆಯುತ್ತಾರೆಂಬ ನಿರೀಕ್ಷೆಯೂ ನಮಗೆ ಇರಲಿಲ್ಲ’ ಎಂದರು.

‘2020–21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕ ಪರಿಗಣಿಸದ ಕಾರಣ ಅನ್ಯಾಯವಾಗಿದೆ ಎಂಬ ವಿದ್ಯಾರ್ಥಿಗಳ ವಾದದಲ್ಲಿಯೂ ಹುರುಳಿಲ್ಲ. ಯಾಕೆಂದರೆ, ಅಂಥ ವಿದ್ಯಾರ್ಥಿಗಳು ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೆ ರ‍್ಯಾಂಕ್‌ ಪಟ್ಟಿಯಲ್ಲಿ ಉತ್ತಮ ರ‍್ಯಾಂಕ್‌ ಗಳಿಸುವ ಅವಕಾಶ ಇತ್ತು. ಕೋವಿಡ್‌ ವರ್ಷದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಸಿಇಟಿ ಬರೆಯುವ ಮೊದಲು ನಮ್ಮನ್ನು ಸಂಪರ್ಕಿಸುತ್ತಿದ್ದರೆ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೆವು’ ಎಂದೂ ಅವರು ವಿವರಿಸಿದರು.

---

‘ಸಿಇಟಿ ಅಂಕ ಮಾತ್ರ ಪರಿಗಣಿಸಲಾಗಿದೆ’

‘2020–21 ನೇ ಸಾಲಿನಲ್ಲಿ ಪರೀಕ್ಷೆ ನಡೆಸದೆ (ಕೋವಿಡ್‌ ಕಾರಣ) ದ್ವಿತೀಯ ಪಿಯುಸಿ ಫಲಿತಾಂಶ ನೀಡಲಾಗಿತ್ತು. ಹೀಗಾಗಿ, ಆ ಸಾಲಿನಲ್ಲಿ ಪಿಯುಸಿ ತೇರ್ಗಡೆಯಾಗಿ ಈ ಬಾರಿ ಸಿಇಟಿ ತೆಗೆದುಕೊಂಡ ವಿದ್ಯಾರ್ಥಿಗಳ ಸಿಇಟಿ ಅಂಕವನ್ನು ಮಾತ್ರ ರ‍್ಯಾಂಕ್‌ಗೆ ಪರಿಗಣಿಸಲಾಗಿದೆ. ಅಂಥವರ ಪಿಯುಸಿ ಅಂಕ ಪರಿಗಣಿಸಿಲ್ಲ. 180 ಅಂಕಗಳಿಗೆ ಸಿಇಟಿ ನಡೆದಿದ್ದು, ರ‍್ಯಾಂಕ್‌ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಸಿಇಟಿಯಲ್ಲಿ ಪಡೆದ ಅಂಕವನ್ನು 100 ಅಂಕಗಳಿಗೆ ಪರಿವರ್ತಿಸಿ ಪರಿಗಣಿಸಲಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದರು.

 

‘ಕೆಇಎಯಿಂದ ಭವಿಷ್ಯ ಹಾಳಾಯಿತು’

‘2020–21 ನೇ ಸಾಲಿನಲ್ಲಿ ಪಿಯುಸಿ ತೇರ್ಗಡೆಯಾದ ನನ್ನ ಅಂಕವನ್ನು ಸಿಇಟಿಗೆ ಪರಿಗಣಿಸದೇ ಇರುವುದರಿಂದ ನನಗೆ ಅನ್ಯಾಯವಾಗಿದೆ. ಕಳೆದ ವರ್ಷ ನನಗೆ ಬೇಕಾದ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಸೀಟು ಸಿಗದ ಕಾರಣ ಈ ಬಾರಿ ಮತ್ತೆ ಸಿಇಟಿ ಬರೆದಿದ್ದೆ. ಈ ಬಾರಿ ಸಿಇಟಿಯಲ್ಲಿ ಹೆಚ್ಚು ಅಂಕ ಬಂದಿದೆ. ಆದರೆ, ಪಿಯುಸಿ ಅಂಕ ಪರಿಗಣಿಸದ ಕಾರಣ ಒಳ್ಳೆಯ ಕಾಲೇಜು ಸಿಗುವಷ್ಟು ರ‍್ಯಾಂಕ್‌ ಬಂದಿಲ್ಲ. ಕೋವಿಡ್‌ ವರ್ಷ ತೇರ್ಗಡೆ ಆದವರ ದ್ವಿತೀಯ ಪಿಯುಸಿ ಅಂಕ ಪರಿಗಣಿಸುವುದಿಲ್ಲವೆಂದು ಮೊದಲೇ ತಿಳಿಸಿದ್ದಿದ್ದರೆ, ನಾನು ಕಳೆದ ವರ್ಷವೇ ಯಾವುದಾದರೂ ಕಾಲೇಜು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಕೆಇಎಯಿಂದಾಗಿ ನನ್ನ ಭವಿಷ್ಯ ಹಾಳಾಗಿದೆ. ನನ್ನಂತೆ ಸಾವಿರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರಾಗಿದೆ’ ಎಂದು ಕುಂದಾಪುರದ ಶ್ರೇಯಾ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು