ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ನಕಾರ: ಮಧ್ಯಂತರ ಮನವಿ ತಳ್ಳಿ ಹಾಕಿದ ಹೈಕೋರ್ಟ್‌

Last Updated 25 ಸೆಪ್ಟೆಂಬರ್ 2022, 4:34 IST
ಅಕ್ಷರ ಗಾತ್ರ

ಬೆಂಗಳೂರು: ‘ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಅಗ್ರಪೂಜೆ ಸಲ್ಲಿಸಲು ಅಡ್ಡಿಪಡಿಸಲಾಗುತ್ತಿದ್ದು, ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಮೈಸೂರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು‘ ಎಂಬ ಅರ್ಜಿದಾರರೊಬ್ಬರ ಮಧ್ಯಂತರ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಹೈಕೋರ್ಟ್‌, ಈ ಸಂಬಂಧ ಹೆಚ್ಚಿನ ವಿವರಣೆಗಾಗಿಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿದೆ.

ಮೈಸೂರಿನ ವಕೀಲ ಪಿ.ಚಂದ್ರಶೇಖರ್‌ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಮಹಿಷಾಸುರ ಪ್ರತಿಮೆಯನ್ನು ಪೂಜೆ ಮಾಡಿದ ನಂತರ ಚಾಮುಂಡಿ ದೇವತೆಗೆ ಪೂಜೆ ಸಲ್ಲಿಸಿದ ಬಗ್ಗೆ ಯಾವುದಾದರೂ ಅಧಿಕೃತ ಮತ್ತು ಪರಿಗಣನಾರ್ಹ ವಿವರಗಳು ಲಭ್ಯವಿದ್ದರೆ ಹಾಜರುಪಡಿಸಿ’ ಎಂದು ಅರ್ಜಿದಾರರ ಪರ ವಕೀಲ ಅಬೂಬಕರ್ ಶಫಿ ಅವರಿಗೆ ಸೂಚಿಸಿದೆ.

ಅರ್ಜಿದಾರರ ಮಧ್ಯಂತರ ಮನವಿಯನ್ನು ತಳ್ಳಿ ಹಾಕಿ ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಾಕ್ಷಸರು ಕೆಟ್ಟವರೇನೂ ಅಲ್ಲ. ದೇವತೆಗಳು ಯಾವ ತಪ್ಪೂ ಮಾಡದೇ ಇರುವವರೂ ಅಲ್ಲ. ಅವರಲ್ಲೂ ಕೆಟ್ಟವರಿದ್ದಾರೆ. ಅವರವರ ಗುಣಾವಗುಣಗಳನ್ನು ಪರಿಗಣಿಸಿ ಮೌಲ್ಯಮಾಪನ ಮಾಡಬೇಕಾಗುತ್ತದೆ’ ಎಂದಿತು.

‘ಮಹಿಷಾಸುರನ ಮೂರ್ತಿಗೆ ಪೂಜೆ ಸಲ್ಲಿಸಬೇಕು ಎಂಬುದಕ್ಕೆ ಕರ್ನಾಟಕದ ಇತಿಹಾಸವನ್ನು ಬರೆದ ಸೂರ್ಯನಾಥ ಕಾಮತ್‌, ಫ್ರಾನ್ಸಿಸ್‌ ಬುಚನನ್‌, ಕೆ.ಎ.ನೀಲಕಂಠ ಶಾಸ್ತ್ರಿ ಅವರ ಕೃತಿಗಳಲ್ಲಿ, ಮೈಸೂರು ಗೆಜೆಟಿಯರ್, ಪ್ರಸಾರಾಂಗದ ಪುಸ್ತಕಗಳಲ್ಲಾಗಲೀ ಮಾಹಿತಿ ಇಲ್ಲ’ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT