ಶನಿವಾರ, ಅಕ್ಟೋಬರ್ 23, 2021
21 °C

ವಿಧಾನ ಪರಿಷತ್: ‘ಚಾಣಕ್ಯ’ ವಿವಿ ಮಸೂದೆ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಡಳಿತ– ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ಯುದ್ಧ, ಗದ್ದಲ, ಆರೋಪ– ಪ್ರತ್ಯಾರೋಪ, ಕೊನೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಸಭಾತ್ಯಾಗದ ಬಳಿಕ ವಿಧಾನ ಪರಿಷತ್‌ನಲ್ಲಿ ಬುಧವಾರ ರಾತ್ರಿ ‘ಚಾಣಕ್ಯ’ ಖಾಸಗಿ ವಿಶ್ವವಿದ್ಯಾಲಯ ಮಸೂದೆ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಮಸೂದೆ ಮಂಡಿಸುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

‘ಮಸೂದೆಯಲ್ಲಿ ಏನಿದೆ ಎಂದು ಓದಲು ಅವಕಾಶ ನೀಡಿಲ್ಲ. ದಿನದ ಕಾರ್ಯಸೂಚಿಯಲ್ಲಿಯೂ ಮಸೂದೆ ಮಂಡಿಸುವ ಪ್ರಸ್ತಾವ ಇಲ್ಲ’ ಎಂದು ಆಕ್ಷೇಪಿಸಿದರು. ‘ಸಚಿವರು ಮಸೂದೆ ಮಂಡಿಸಿದ್ದಾರೆ, ಚರ್ಚೆ ಮಾಡಿ ಇವತ್ತೇ ಮುಗಿಸಬೇಕು’ ಎಂದು ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್ ಹೇಳುತ್ತಿದ್ದಂತೆ, ಪೀಠದ ಮುಂಭಾಗಕ್ಕೆ ಬಂದ ಜೆಡಿಎಸ್‌ನ ಮರಿತಿಬ್ಬೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಆಡಳಿತ– ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಮಾಧಾನಪಡಿಸಲು ಮುಂದಾದ ಪ್ರಾಣೇಶ್, ‘ಸದಸ್ಯರು ಪೀಠದ ಎದುರು ಬಂದು ಸಂತೆ ಮಾರುಕಟ್ಟೆ ಮಾಡಬೇಡಿ’ ಎಂದು ಗರಂ ಆದರು. ಸದಸ್ಯರ ಮಾತಿನ ಸಮರ ಕೆಲಹೊತ್ತು ಮುಂದುವರಿಯಿತು.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ತರಾತುರಿಯಲ್ಲಿ ಈ ಮಸೂದೆ ತರುವ ಅವಕಾಶ ಇರಲಿಲ್ಲ. ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಆತುರ ಏಕೆ’ ಎಂದು ಪ್ರಶ್ನಿಸಿದರು. ‘ಪಾಯಿಂಟ್ ಆಫ್ ಆರ್ಡರ್’ ಪ್ರಸ್ತಾಪ ಮಾಡಿದ ಕಾಂಗ್ರೆಸ್‌ನ ಪಿ.ಆರ್. ರಮೇಶ್, ‘ಮೂರು ದಿನ ಮುಂಚಿತವಾಗಿ ಮಸೂದೆ ಪ್ರತಿ ನೀಡಬೇಕು. ತುರ್ತಾಗಿ ಮಂಡಿಸುವಂತಿಲ್ಲ’ ಎಂದು ಹೇಳಿದಾಗ, ನಿಯಮದ ಬಗ್ಗೆಯೇ ಸುದೀರ್ಘ ವಾದ– ವಿವಾದ ನಡೆಯಿತು.

ಈ ಮಧ್ಯೆ, ಸಚಿವ ಅಶ್ವತ್ಥನಾರಾಯಣ ಮಸೂದೆ ಕುರಿತು ವಿವರಿಸಿದರು. ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ‘ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಇದ್ದರೂ ವಿನಾಯಿತಿ ನೀಡದೆ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ. 27 ಪುಟದ ವಿವರ ನೀಡಿ ಓದಲು ಅವಕಾಶ ನೀಡಿಲ್ಲ. ವಿಶ್ವವಿದ್ಯಾಲಯಕ್ಕೆ ಜಾಗ ಎಲ್ಲಿ ನೀಡಲಾಗಿದೆ, ಎಷ್ಟು ಮೊತ್ತಕ್ಕೆ ನೀಡಲಾಗಿದೆ, ಸಂಸ್ಥೆಗೆ ಅಪ್ಪ ಅಮ್ಮ ಯಾರು ಎಂದೂ ತಿಳಿಸಿಲ್ಲ’ ಎಂದರು.

‘ನಮ್ಮ ಮಾಹಿತಿ ಪ್ರಕಾರ ದೇವನಹಳ್ಳಿ ಸಮೀಪದ ಬಳಿ 116.16 ಎಕರೆ ಭೂಮಿ ನೀಡಲು ಮುಂದಾಗಿದೆ. ಕೆಐಎಡಿಬಿ ಕಾರ್ಖಾನೆಗಳ ಸ್ಥಾಪನೆಗೆ 3 ಸಾವಿರ ಎಕರೆ ಭೂಮಿ ವಶಪಡಿಸಿಕೊಂಡಿದ್ದು, ಈ ಜಾಗವನ್ನು ಅತ್ಯಂತ ಕಡಿಮೆ ಹಣಕ್ಕೆ ನೀಡಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಇದೆ’ ಎಂದರು.

ಮಧ್ಯಪ್ರವೇಶಿಸಿದ ಸಚಿವ ಅಶ್ವತ್ಥನಾರಾಯಣ, ‘ಮಸೂದೆಯ ವಿಚಾರ ಚರ್ಚೆ ಮಾಡಿ. ಜಮೀನಿನ ಬಗ್ಗೆ ಈಗ ಚರ್ಚೆ ಯಾಕೆ’ ಎಂದರು. ಆಗ ಮತ್ತೆ ವಾಗ್ವಾದ ನಡೆಯಿತು. ಭೂಮಿ ವಿಚಾರವನ್ನು ಕಾಂಗ್ರೆಸ್‌ ಸದಸ್ಯರು ಪದೇ ಪದೇ ಪ್ರಸ್ತಾಪಿಸುತ್ತಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಮಸೂದೆ ಬಗ್ಗೆ ಮಾತ್ರ ಮಾತನಾಡಿ. ಇಲ್ಲಿ ಏನು ನಡೆಯುತ್ತಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ‘ನೀವು ಹೇಳಿದ್ದನ್ನು ಕೇಳಲು ಸಾಧ್ಯವಿಲ್ಲ’ ಎಂದು ನಾರಾಯಣಸ್ವಾಮಿ, ಸಭಾಪತಿ ಪೀಠಕ್ಕೆ ತಿಳಿಸಿದಾಗ ಸಭಾನಾಯಕ, ಮಾಧುಸ್ವಾಮಿ, ಅಶ್ವತ್ಥನಾರಾಯಣ ಮತ್ತಿತರ ಸದಸ್ಯರು, ‘ನಾರಾಯಣಸ್ವಾಮಿ ಅವರನ್ನು ಸದನದಿಂದ ಹೊರಹಾಕಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ನಾರಾಯಣಸ್ವಾಮಿ, ‘ಈ ಸರ್ಕಾರದಲ್ಲಿ ಆಗಿರುವ ದೊಡ್ಡ ಹಗರಣವಿದು. ಈ ವಿಶ್ವವಿದ್ಯಾಲಯದ ಮುಖ್ಯಸ್ಥ ಎಂ.ಕೆ. ಶ್ರೀಧರ್ ಆರೆಸ್ಸೆಸ್ ಕಟ್ಟಾಳು’ ಎಂದಾಗ ಬಿಜೆಪಿ ಸದಸ್ಯರು ಏರು ಧ್ವನಿಯಲ್ಲಿ ವಿರೋಧಿಸಿದರು. ‘ಅವರು ದೇಶದ ನಾಗರಿಕ. ಇಟಲಿಯವರಲ್ಲ’ಎಂದರು. ‘ಜನರ ಹಣ ಗುಳುಂ ಮಾಡಿದ ಬಿಜೆಪಿ ಸರ್ಕಾರಕ್ಕೆ ನನ್ನ ಧಿಕ್ಕಾರ’ ಎಂದು ಮಾತು ಮುಗಿಸಿದರು.

ವಿರೋಧ ಪಕ್ಷ ನಾಯಕ ಎಸ್‌.ಆರ್‌.ಪಾಟೀಲ, ‘ಕೈಗಾರಿಕೆಗೆ ಭೂಮಿ ಪಡೆದು, ಖಾಸಗಿ ವಿಶ್ವವಿದ್ಯಾಲಯಕ್ಕೆ ನೀಡುವುದು ಸರಿಯಲ್ಲ. ರೈತರಿಂದ ಏರೋಸ್ಪೇಸ್ ಅಭಿವೃದ್ಧಿಗೆ ಭೂಮಿ ಖರೀದಿಸಿ, ಅದನ್ನು ಖಾಸಗಿ ವಿಶ್ವವಿದ್ಯಾಲಯಕ್ಕೆ ನೀಡುವುದು ಸರ್ಕಾರದ ಜನವಿರೋಧಿ ನಿರ್ಧಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಧಿಕ್ಕಾರ ಕೂಗುತ್ತಾ ಪಕ್ಷದ ಇತರ ಸದಸ್ಯರ ಜೊತೆ ಸಭಾತ್ಯಾಗ ಮಾಡಿದರು.

ಅದಕ್ಕೂ ಮೊದಲು ಮಸೂದೆಗೆ ಜೆಡಿಎಸ್‌ನ ಬೋಜೇಗೌಡ ಬೆಂಬಲ ವ್ಯಕ್ತಪಡಿಸಿದರೆ, ಶ್ರೀಕಂಠೇಗೌಡ ವಿರೋಧಿಸಿದರು. ಬಳಿಕ, ‘ಮಸೂದೆ ವಿರೋಧಿಸಿ ನಾವು ಸಭಾತ್ಯಾಗ ಮಾಡುತ್ತೇವೆ’ ಎಂದು ಘೋಷಿಸಿ ಜೆಡಿಎಸ್ ಸದಸ್ಯರು ಸದನದಿಂದ ಹೊರನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.