ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಇನ್ನಿಲ್ಲ

Last Updated 10 ಜನವರಿ 2022, 3:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತ್ಯ ಲೋಕದಲ್ಲಿ 'ಚಂಪಾ' ಎಂದೇ ಹೆಸರಾದ ಕವಿ, ನಾಟಕಕಾರ ಪ್ರೊ.ಚಂದ್ರಶೇಖರ ಪಾಟೀಲ(82) ಇಂದು ಬೆಳಿಗ್ಗೆ ನಿಧನರಾದರು.

ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಚಂಪಾ. 1939ರ ಜೂನ್‌ 18ರಂದು ಜನಿಸಿದ ಚಂಪಾ ಅವರ ಹುಟ್ಟೂರು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರು.

ಸಾಹಿತಿ, ಹೋರಾಟಗಾರ ಚಂಪಾ ಅವರು ಇಂದು ಬೆಳಿಗ್ಗೆ ನಗರದ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬರು ಪುತ್ರಿ ಇದ್ದಾರೆ. ಪಾರ್ಥಿವ ಶರೀರವನ್ನು ನಗರದ ಯಲಚೇನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು. ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ಅಥವಾ ಹಾವೇರಿ ಸಮೀಪದ ಡೊಂಬರಮತ್ತೂರಿನಲ್ಲಿ ನಡೆಸುವುದೋ ಎಂಬ ಬಗ್ಗೆ ಚರ್ಚೆ ನಡೆದಿದೆ. ಕೋವಿಡ್‌ ಪ್ರಕರಣಗಳ ಕಾರಣ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಇನ್ನೂ ನಿರ್ಧಾರ ಅಂತಿಮವಾಗಿಲ್ಲ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ಚಂ‍ಪಾ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ದೈಹಿಕವಾಗಿ ಸ್ವಲ್ಪ ಕುಗ್ಗಿದ್ದರೂ ಅವರ ಹೋರಾಟದ ಕಾವು, ಬಂಡಾಯದ ಧ್ವನಿ ಏರುಗತಿಯಲ್ಲೇ ಇತ್ತು.

ಹಾವೇರಿ, ಧಾರವಾಡದಲ್ಲಿ ಶಿಕ್ಷಣ ಪೂರೈಸಿದ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿ.ಕೃ.ಗೋಕಾಕರ ಮಾರ್ಗದರ್ಶನ ಸಿಕ್ಕಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ಅವರ ಪ್ರಥಮ ಕವನ ಸಂಕಲನ 'ಬಾನುಲಿ' (1960) ಪ್ರಕಟವಾಯಿತು. ನವ್ಯ ಮಾರ್ಗದಲ್ಲಿ ಕಾವ್ಯ ಕೃಷಿ ಆರಂಭಿಸಿದ ಅವರು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಸ್ನಾತಕೋತ್ತರ (1962) ಪದವೀಧರರು. ಅದೇ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ 'ಚಂಪಾ' ಅವರು ಸ್ನೇಹಿತರಾದ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರ ಜೊತೆ ಸೇರಿ 'ಸಂಕ್ರಮಣ' (1964) ಹೆಸರಿನಲ್ಲಿ ದ್ವೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದರು. 2018ರ ವರೆಗೂ ಆ ಪತ್ರಿಕೆ ಪ್ರಕಟವಾಗಿದೆ.

ಬ್ರಿಟಿಷ್‌ ಕೌನ್ಸಿಲ್‌ನ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡ್‌ನ ಲೀಡ್ಸ್‌ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಭಾಷಾಶಾಸ್ತ್ರ) ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮಾ ಪಡೆದಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ, ಛೇರ್‌ಮನ್‌ ಆಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ತುರ್ತುಪರಿಸ್ಥಿತಿಯ ದಿನಗಳಲ್ಲಿ, ಅದನ್ನು ಪ್ರತಿಭಟಿಸಿ, ಜೆ.ಪಿ. ಚಳವಳಿ ಬೆಂಬಲಿಸಿ ಜೈಲುವಾಸ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT