ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಬೊಮ್ಮಾಯಿಗೆ ಸಿ.ಎಂ ಪಟ್ಟ: ಮೇ 8ರಂದೇ ನಿರ್ಧಾರ ಕೈಗೊಂಡಿದ್ದ ವರಿಷ್ಠರು?

Last Updated 27 ಜುಲೈ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌. ಯಡಿಯೂರಪ್ಪ ಅವರ ರಾಜೀನಾಮೆ ಪಡೆದು, ಬಸವರಾಜ ಬೊಮ್ಮಾಯಿ ಅವರಿಗೆ ನಾಯಕತ್ವ ವಹಿಸುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಮೇ 8ರಂದೇ ನಿರ್ಧರಿಸಿದ್ದರೇ?

ಈ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್‌ ಮೂಲಗಳಿಂದ ‘ಹೌದು’ ಎಂಬ ಉತ್ತರ ದೊರೆತಿದೆ.

ಕೊರೊನಾ ಎರಡನೇ ಅಲೆ ರಾಜ್ಯದಾದ್ಯಂತ ಗಂಭೀರ ಪರಿಣಾಮ ಬೀರುತ್ತಿದ್ದ ಸಂದರ್ಭದಲ್ಲಿ, ಮೇ 7ರ ಸಂಜೆ ವಿಶೇಷ ವಿಮಾನದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರೊಂದಿಗೆ ದೆಹಲಿಗೆ ಧಾವಿಸಿದ್ದ ಬೊಮ್ಮಾಯಿ, ವರಿಷ್ಠರನ್ನು ಭೇಟಿ ಮಾಡಿದ್ದರು.

ಈ ಗೋಪ್ಯ ಭೇಟಿಯ ವೇಳೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬೊಮ್ಮಾಯಿ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದರು. ‘ನನ್ನ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಬಹುದು’ ಎಂಬ ಬೇಡಿಕೆಯನ್ನು ಯಡಿಯೂರಪ್ಪ ಅವರೇ ವರಿಷ್ಠರೆದುರು ಇರಿಸಿದ್ದರು ಎಂದೂ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಮತ್ತಿತರ ವರಿಷ್ಠರು ಬೊಮ್ಮಾಯಿ ಅವರೊಂದಿಗೆ ಸತತ ಮೂರು ಸುತ್ತು ಮಾತುಕತೆ ನಡೆಸಿ ಸಿದ್ಧತೆಗೆ ಸೂಚಿಸಿದ್ದರು. ಆದರೆ, ಯಡಿಯೂರಪ್ಪ ಅವರು ರಾಜೀನಾಮೆ ನಿರ್ಧಾರವನ್ನು ತೆಗೆದುಕೊಳ್ಳಲು ವಿಳಂಬ ನೀತಿ ಅನುಸರಿಸಿದ್ದರು ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮಾತುಕತೆಯ ವಿವರವನ್ನು ಗೋಪ್ಯವಾಗಿ ಇಡುವಂತೆ ಬೊಮ್ಮಾಯಿ ಅವರಿಗೆ ಸೂಚಿಸಿದ್ದ ವರಿಷ್ಠರು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆಯ ವಿವರಗಳನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸದಂತೆ ಕಿವಿಮಾತು ಹೇಳಿದ್ದರು ಎಂದು ಹೇಳಲಾಗಿದೆ.

ಯೋಗೇಶ್ವರ್‌ ದೂರು:ಮೇ 5ರಿಂದ ಎರಡು ದಿನಗಳ ಕಾಲ ನವದೆಹಲಿಯಲ್ಲಿ ಬೀಡು ಬಿಟ್ಟು, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಜೆ.ಪಿ. ನಡ್ಡಾ ಮತ್ತಿತರರನ್ನು ಭೇಟಿ ಮಾಡಿದ್ದ ಸಚಿವ ಸಿ.ಪಿ. ಯೋಗೇಶ್ವರ್‌, ಆಡಳಿತದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪದ ಕುರಿತು ದೂರನ್ನು ಸಲ್ಲಿಸಿದ್ದರು ಎನ್ನಲಾಗಿದೆ.

ಆ ದೂರಿನನ್ವಯ ತಕ್ಷಣ ದೆಹಲಿಗೆ ಬರುವಂತೆ ವಿಜಯೇಂದ್ರ ಅವರಿಗೆ ವರಿಷ್ಠರು ಆಹ್ವಾನ ನೀಡಿದ್ದರು. ಈ ಆಹ್ವಾನದ ಮೇರೆಗೆ ಮೇ 7ರಂದು ಸಂಜೆ ವಿಶೇಷ ವಿಮಾನದಲ್ಲಿ ಬೊಮ್ಮಾಯಿ ಅವರನ್ನೂ ತಮ್ಮೊಂದಿಗೆ ಕರೆತಂದಿದ್ದ ವಿಜಯೇಂದ್ರ, ಹಲವು ಸುತ್ತಿನ ಮಾತುಕತೆಯ ನಂತರ ಮೇ 9ರಂದು ಬೆಂಗಳೂರಿಗೆ ಮರಳಿದ್ದರು.

ವರಿಷ್ಠರೊಂದಗೆ ಚರ್ಚಿಸಿ, ದೂರು ಸಲ್ಲಿಸಿದ ಬಳಿಕ ನಡೆಸಿ ಬೆಂಗಳೂರಿಗೆ ಮರಳಿದ್ದ ಸಚಿವ ಯೋಗೇಶ್ವರ್‌, ‘ಪರೀಕ್ಷೆ ಬರೆದಾಗಿದೆ. ಶೀಘ್ರವೇ ಫಲಿತಾಂಶ ಬರಲಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT