ಶುಕ್ರವಾರ, ಮೇ 20, 2022
25 °C

ವಸತಿ ಯೋಜನೆಗಳ ಅನುಷ್ಠಾನ: 3 ತಿಂಗಳೊಳಗೆ ಸಾಲ ಮಂಜೂರಾತಿಗೆ ಯಡಿಯೂರಪ್ಪ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನಮಂತ್ರಿ ಆವಾಸ್, ಮುಖ್ಯಮಂತ್ರಿಯವರ ಒಂದು ಲಕ್ಷ‌ ಮನೆ ಸೇರಿದಂತೆ ನಗರ ಪ್ರದೇಶಗಳಲ್ಲಿನ ವಸತಿ ಯೋಜನೆ ಫಲಾನುಭವಿಗಳಿಗೆ ಮೂರು ತಿಂಗಳೊಳಗೆ ಸಾಲ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಧಾನಮಂತ್ರಿ ಸ್ವನಿಧಿ, ಪ್ರಧಾನಮಂತ್ರಿ ಆವಾಸ್ ಮತ್ತು ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳ ಪ್ರಗತಿಗೆ ಸಂಬಂಧಿಸಿದಂತೆ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಅವರು, ಮೂರು ತಿಂಗಳೊಳಗೆ ಸಾಲ ಮಂಜೂರು ಮಾಡದಿದ್ದರೆ ಮುಂದಿನ ಕ್ರಮ‌ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, 'ವಸತಿ ಯೋಜನೆಗಳ ಫಲಾನುಭವಿಗಳಿಗೆ ಸಾಲ‌ ಮಂಜೂರು ಮಾಡಲು ಬ್ಯಾಂಕುಗಳು ಸದಾ ತಕರಾರು ತೆಗೆಯುತ್ತಿದ್ದವು. ಇನ್ನು ಮುಂದೆ ಫಲಾನುಭವಿಯ ಆಧಾರ್ ಕಾರ್ಡ್ ಹಾಗೂ ಹಕ್ಕುಪತ್ರದ ಆಧಾರದಲ್ಲಿ ಸಾಲ‌ ಮಂಜೂರು‌ ಮಾಡುವಂತೆ ಮುಖ್ಯಮಂತ್ರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ' ಎಂದರು.

ಇತರ ನಗರ ಪ್ರದೇಶಗಳಲ್ಲಿ ಪ್ರತಿ ಫಲಾನುಭವಿಗೆ ₹2.5 ಲಕ್ಷ ಮತ್ತು ಬೆಂಗಳೂರಿನಲ್ಲಿ ಸ್ವಲ್ಪ ಹೆಚ್ಚು ಮೊತ್ತದ ಸಾಲ‌ ಮಂಜೂರು ಮಾಡುವಂತೆ ಸೂಚನೆ ನೀಡಿದ್ದಾರೆ. ‌ಒಟ್ಟು 3.40 ಲಕ್ಷ‌ ಫಲಾನುಭವಿಗಳಿಗೆ ಸಾಲ ದೊರೆಯಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆಯಲ್ಲಿ ಈಗಾಗಲೇ 53,000 ಮನೆಗಳ ನಿರ್ಮಾಣ ಆರಂಭವಾಗಿದೆ. ಜೂನ್ ನಲ್ಲಿ ಮೊದಲ ಹಂತದಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು