ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪನ: ಚಿಂಚೋಳಿ- ಕೊನೆಗೂ ಕಾಳಜಿ ಕೇಂದ್ರ ಆರಂಭ

ಗಡಿಕೇಶ್ವಾರಕ್ಕೆ ತಜ್ಞರ ತಂಡ ಭೇಟಿ l ನವೆಂಬರ್‌ನಲ್ಲಿ ರಾಷ್ಟ್ರಮಟ್ಟದ ವಿಜ್ಞಾನಿಗಳಿಂದ ಸ್ಥಳ ಪರಿಶೀಲನೆ
Last Updated 13 ಅಕ್ಟೋಬರ್ 2021, 19:33 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ಪದೇ ಪದೇ ಭೂಕಂಪನ ಸಂಭವಿಸುತ್ತಿರುವ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮಕ್ಕೆ ಭೂವಿಜ್ಞಾನಿಗಳ ತಂಡ ಬುಧವಾರ ಭೇಟಿ ನೀಡಿ ಪ‍ರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿ ವಿಪತ್ತುಗಳ ಉಸ್ತುವಾರಿ ಕೇಂದ್ರದ ಭೂಕಂಪ ವಿಜ್ಞಾನಿ ಡಾ. ರಮೇಶ ದಿಕ್ಪಾಲ್, ಪದೇ ಪದೇ ಭೂಕಂಪ ಸಂಭವಿಸುತ್ತಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹ ನಿರ್ದೆಶಕ ಟಿ. ಮಹಾಂತೇಶ, ‘ನಾವು ಭೂಕಂಪದ ಕುರಿತು ಅಧ್ಯಯನ ನಡೆಸುತ್ತಿದ್ದೇವೆ. ಗಡಿಕೇಶ್ವಾರದಲ್ಲಿ ಭೂಕಂಪ ಸಂಭವಿಸುತ್ತಿರುವುದು ದೃಢಪಟ್ಟಿದೆ. ಇಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವಿದ್ದು ನವೆಂಬರ್‌ 8, 9ರಂದು ರಾಷ್ಟ್ರಮಟ್ಟದ ಹಿರಿಯ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಯವರೆಗೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರಲ್ಲದೇ, ಗ್ರಾಮಸ್ಥರ ವಾಸ್ತವ್ಯಕ್ಕಾಗಿ ಶೆಡ್ ನಿರ್ಮಿಸುವಂತೆ ಒತ್ತಾಯಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ ಅವರ ಸೂಚನೆ ಮೇರೆಗೆ ಜಿಲ್ಲಾ ಆಡಳಿತ,ಗಡಿಕೇಶ್ವಾರದಲ್ಲಿ ತಾತ್ಕಾಲಿಕ ಶಾಮಿಯಾನ ಹಾಕಿ ಜನರಿಗೆ ರಾತ್ರಿ ಮಲಗಲು ವ್ಯವಸ್ಥೆ ಮಾಡಿದೆ. ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

‘ತಾಲ್ಲೂಕಿನ ಕಪನೂರ ಗ್ರಾಮದಲ್ಲಿಯೂ ಕಾಳಜಿ ಕೇಂದ್ರ ತೆರೆಯಲಾಗುವುದು. ಜತೆಗೆ ಬಯಲಿನಲ್ಲಿ ದೊಡ್ಡ ಪ್ರಮಾಣದ ಶೆಡ್ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಯುತ್ತಿದೆ’ ಎಂದು ತಹಶೀಲ್ದಾರ್‌ ಅಂಜುಂ ತಬಸ್ಸುಮ್ ತಿಳಿಸಿದರು.

ಆರಂಭವಾಗದ ಸರ್ವೆ: ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಗ್ರಾಮದಲ್ಲಿ ವಾಸ ಯೋಗ್ಯ ಮನೆಗಳ ಪತ್ತೆಗೆ ಲೋಕೋಪಯೋಗಿ ಎಂಜಿನಿಯರ್‌ಗಳಿಂದ ಸರ್ವೆ ಮಾಡಿಸಿ ಮನೆಗಳ ಸದೃಢತೆ ಖಚಿತ ಪಡಿಸಿಕೊಳ್ಳಲಾಗುವುದು ಎಂದಿದ್ದರು. ಆದರೆ ಬುಧವಾರ ಯಾವುದೇ ಸರ್ವೆ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT