ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PSI ನೇಮಕಾತಿ ಪರೀಕ್ಷೆ ಅಕ್ರಮ: ಕಲಬುರಗಿ ಬಿಜೆಪಿ ನಾಯಕಿ ಮನೆ ಮೇಲೆ ಸಿಐಡಿ ದಾಳಿ

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ, ಸಿಐಡಿ ತನಿಖೆ ಚುರುಕು, ದಿವ್ಯಾ ಹಾಗರಗಿ ಮನೆಯಲ್ಲಿ ದಾಖಲೆಗಳಿಗೆ ಹುಡುಕಾಟ
Last Updated 17 ಏಪ್ರಿಲ್ 2022, 20:45 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ, ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆ ಮೇಲೆ ಭಾನುವಾರ ದಾಳಿ ಮಾಡಿದ ಸಿಐಡಿ ಅಧಿಕಾರಿಗಳು, ಕೆಲ ದಾಖಲೆ ವಶಪಡಿಸಿಕೊಂಡರು.

‘ಪರೀಕ್ಷಾ ಅಕ್ರಮ ನಡೆದ ಶಾಲೆಯು ದಿವ್ಯಾ ಅವರಿಗೆ ಸೇರಿದ್ದರಿಂದ ಅವರ ವಿಚಾರಣೆ ಮತ್ತೊಮ್ಮೆ ಅಗತ್ಯವಿತ್ತು. ಅವರು ಸಂಪರ್ಕಕ್ಕೆ ಸಿಗದ ಕಾರಣ ಮನೆಯಲ್ಲಿ ಶೋಧ ನಡೆಸಿದೆವು. ಹಣಕಾಸು ವ್ಯವಹಾರದ ಪ್ರತಿಗಳು, ಶಾಲೆಗೆ ಸಂಬಂಧಿಸಿದ ಪತ್ರಗಳು ಸೇರಿದಂತೆ ತನಿಖೆಗೆ ಅಗತ್ಯವಿರುವ ಕೆಲ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘545 ಪಿಎಸ್‌ಐ ನೇಮಕಾತಿಗೆ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಜ್ಞಾನಜ್ಯೋತಿಶಾಲೆಯಲ್ಲಿ ತೆರೆದಿದ್ದ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಪರೀಕ್ಷಾ ಮೇಲ್ವಿಚಾರಕಿಯರನ್ನು ಈಗಾಗಲೇ ಬಂಧಿಸಲಾಗಿದೆ. ಈ ಮೂವರೂ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶಿಕ್ಷಕಿಯರೇ ಆಗಿದ್ದಾರೆ’ ಎಂದು ವಿವರಿಸಿದರು.

‘ಮುಖ್ಯ ಶಿಕ್ಷಕಿ ಮತ್ತು ಇತರ ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ. ಸಿ.ಸಿ.ಟಿವಿ ಕ್ಯಾಮೆರಾದ ದಾಖಲೆಗಳೂ ನಾಶಪಡಿಸಲಾಗಿದೆ. ಪರೀಕ್ಷೆ ನಡೆದ ವೇಳೆ ದಿವ್ಯಾ ಕೇಂದ್ರದೊಳಗೆ ಇದ್ದರು ಎಂಬ ದೂರುಗಳೂ ಇವೆ. ಅದನ್ನು ಖಚಿತಪಡಿಸಿಕೊಳ್ಳಲು ಸಿ.ಸಿ.ಟಿವಿ ದಾಖಲೆಗಳು ಬೇಕು. ಹೀಗಾಗಿ, ಸಂಬಂಧಪಟ್ಟವರ ಮನೆ ಮೇಲೆ ದಾಳಿ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ ನೇತೃತ್ವದ ತಂಡವು, ಇಲ್ಲಿನ ಹಳೆ ಜೇವರ್ಗಿ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿತು. ಈ ವೇಳೆ ದಿವ್ಯಾ ಮನೆಯಲ್ಲಿ ಇರಲಿಲ್ಲ. ಪ್ರಕರಣ ಬೆಳಕಿಗೆ ಬಂದಾಗಿ
ನಿಂದ ಅವರು ತಲೆಮರೆಸಿಕೊಂಡಿದ್ದಾರೆ. ಅವರ ಪತಿಯಿಂದ ಮಾಹಿತಿ ಪಡೆಯಲು ಯತ್ನಿಸಿದರೂ ಸರಿಯಾದ ಉತ್ತರ ಸಿಗಲಿಲ್ಲ.

‘ನನ್ನ ಪತ್ನಿ ಯಾವುದೋ ಊರಿಗೆ ಹೋಗಿದ್ದಾಳೆ. ಎಲ್ಲಿಗೆ ಹೋಗಿದ್ದಾಳೆ ಗೊತ್ತಿಲ್ಲ. ಅವರನ್ನು ಸಂಪರ್ಕಿಸಲು ನನ್ನ ಬಳಿ ಮೊಬೈಲ್‌ ಕೂಡ ಇಲ್ಲ. ಮನೆಯ ಕೀಲಿಕೈ ಕೆಲಸದವರ ಬಳಿ ಇದೆ. ನಾನು ಹೊಲದಲ್ಲೇ ಇರುತ್ತೇನೆ’ ಎಂದು ದಿವ್ಯಾ ಅವರ ಪತಿ ರಾಜೇಶ್‌ ಹೇಳಿದರು. ನಂತರ ಮನೆಯ ಕೆಲಸದವರನ್ನೇ ಕರೆಸಿದ ಅಧಿಕಾರಿಗಳು, ಬಾಗಿಲು ತೆಗೆಸಿ ದಾಖಲೆಗಳಿಗಾಗಿ ತಡಕಾಡಿದರು.

ಪ್ರಕರಣದ ಸಂಬಂಧ ಈಗಾಗಲೇ ಅಭ್ಯರ್ಥಿಗಳಾದ ಕಲಬುರಗಿಯ ವೀರೇಶ ನಿಡಗುಂದಾ, ಅರುಣ ಪಾಟೀಲ,ರಾಯಚೂರಿನ ಕೆ.ಪ್ರವೀಣಕುಮಾರ, ಚೇತನ ನಂದಗಾಂವ, ಪರೀಕ್ಷಾ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಶಿಕ್ಷಕಿಯರಾದ ಸುಮಾ, ಸಿದ್ದಮ್ಮ ಹಾಗೂ ಸಾವಿತ್ರಿ ಅವರನ್ನು ಬಂಧಿಸಲಾಗಿದೆ. ಇನ್ನೂ ಕೆಲಅಭ್ಯರ್ಥಿಗಳು, ಮಧ್ಯವರ್ತಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ಇದ್ದು, ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮನೆಗೆ ಭೇಟಿ ನೀಡಿದ್ದ ಗೃಹ ಸಚಿವ: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಈಚೆಗೆ ಕಲಬುರಗಿಗೆ ಬಂದಿದ್ದಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದಿವ್ಯಾ ಹಾಗರಗಿ ಮನೆಗೂ ಭೇಟಿ ನೀಡಿದ್ದರು. ಆ ಸಂದರ್ಭ ಕುಟುಂಬದೊಂದಿಗೆ ತೆಗೆಸಿಕೊಂಡ ಫೋಟೊ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಸದ್ಯ ಇದೇ ಮನೆಯ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

‘ತನಿಖಾ ವರದಿ ಆಧರಿಸಿ ಕ್ರಮ’

ಬೆಂಗಳೂರು: ‘545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅದರ ಅಂತಿಮ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು ಹಾಗೂ ಸಹಾಯಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿ ಆಯ್ಕೆಯಾದ ನಿಜವಾದ ಅಭ್ಯರ್ಥಿಗಳ ಹಿತಾಸಕ್ತಿ ರಕ್ಷಿಸಲಾಗುವುದು’ ಎಂದಿದ್ದಾರೆ.

‘ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನಾಲ್ವರು ಅಭ್ಯರ್ಥಿಗಳು ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದೂ ಹೇಳಿದ್ದಾರೆ.

'545 ಹುದ್ದೆಗಳ ಅಕ್ರಮ ಪ್ರಕರಣದ ತನಿಖೆ ಮುಗಿದ ನಂತರ, 402 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಆದಷ್ಟು ಬೇಗ ಪರೀಕ್ಷೆ ನಡೆಸಲಾಗುವುದು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT