ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 2 ತಿಂಗಳಾದರೂ ಸಿಕ್ಕಿಲ್ಲ ₹ 1 ಲಕ್ಷ ಪರಿಹಾರ

ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲುಪದ ಸರ್ಕಾರದ ನೆರವು
Last Updated 12 ಸೆಪ್ಟೆಂಬರ್ 2021, 1:36 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 1 ಲಕ್ಷ ಆರ್ಥಿಕ ಪರಿಹಾರ ಘೋಷಿಸಿ ಎರಡು ತಿಂಗಳು ಕಳೆದರೂ ಫಲಾನುಭವಿ ಕುಟುಂಬಗಳಿಗೆ ಹಣ ಪಾವತಿ ಆಗಿಲ್ಲ.

ರಾಜ್ಯದಲ್ಲಿ 2020 ಮಾರ್ಚ್‌ನಿಂದ ಕೋವಿಡ್‌ ಮೊದಲ ಮತ್ತು ನಂತರ ಎರಡನೇ ಅಲೆ ಸಂದರ್ಭದಲ್ಲಿ ಹಲವರು ಮೃತಪಟ್ಟಿದ್ದಾರೆ. ಈ ಪೈಕಿ, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ದುಡಿಯುವ ಸದಸ್ಯರನ್ನು ಕಳೆದುಕೊಂಡಿದೆ ಎಂಬ ಕಾರಣಕ್ಕೆ, ಅಂಥ ಕುಟುಂಬಗಳಿಗೆ ತಲಾ ₹ 1 ಲಕ್ಷ ನೆರವನ್ನು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದರು. ಜುಲೈ 8ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

ಮೃತರ ಪತ್ನಿ ಅಥವಾ ಕುಟುಂಬದ ಕಾನೂನುಬದ್ಧ ವಾರಸುದಾರರ ಬ್ಯಾಂಕ್‌ ಖಾತೆಗೆ ಹಣವನ್ನು ಆರ್‌ಟಿಜಿಎಸ್‌ ಅಥವಾ ನೆಫ್ಟ್‌ ಮೂಲಕ ನೇರವಾಗಿ ಜಮೆ ಮಾಡುವ ಹೊಣೆಯನ್ನು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕರಿಗೆ ನೀಡಲಾಗಿದೆ. ಆದರೆ, ನೆರವಿಗೆ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯೇ ಆರಂಭ ಆಗಿಲ್ಲ! ಮೃತರ ವಾರಸುದಾರರಿಂದ ಅರ್ಜಿ ಆಹ್ವಾನಿಸಿ, ಬೆರಳೊತ್ತಿದರೆ ಪರಿಹಾರ ಹಣ ಖಾತೆಗೆ ಜಮೆ ಆಗುವರೆಗಿನ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ನಡೆಸಬೇಕು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ, ಎನ್‌ಐಸಿ (ನ್ಯಾಷನಲ್ ಇನ್‌ಫಾರ್ಮಟಿಕ್ ಸೆಂಟರ್) ಮೂಲಕ ಹೊಸ ತಂತ್ರಾಂಶವನ್ನು ಪಿಂಚಣಿ ನಿರ್ದೇಶನಾಲಯ ಅಭಿವೃದ್ಧಿಪಡಿಸುತ್ತಿದೆ. ಈ ಕಾರ್ಯ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.

‘ಮೃತರ ಪತ್ನಿ ಅಥವಾ ಕಾನೂನುಬದ್ಧ ವಾರಸುದಾರರು ನಾಡ ಕಚೇರಿಗೆ ತೆರಳಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಆಧಾರದಲ್ಲಿ ಗ್ರಾಮ ಸಹಾಯಕರು (ವಿಎ) ಮೃತಪಟ್ಟವರ ಮನೆಗಳಿಗೆ ತೆರಳಿ ಪರಿಶೀಲಿಸಿ, ಕಂದಾಯ ನಿರೀಕ್ಷಕರಿಗೆ ವರದಿ ನೀಡಲಿದ್ದಾರೆ. ಅವರು ತಹಶೀಲ್ದಾರ್‌, ಬಳಿಕ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ. ಕೋವಿಡ್‌ನಿಂದ ವ್ಯಕ್ತಿ ಮೃತಪಟ್ಟ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದು, ವಾರಸುದಾರರನ್ನು ಜಿಲ್ಲಾಧಿಕಾರಿಗಳು ಖಚಿತಪಡಿಸಿ ಹಣ ಬಿಡುಗಡೆಗೆ ಶಿಫಾರಸು ಮಾಡಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಕೇವಲ ಒಂದು ತಿಂಗಳಲ್ಲಿ ಮುಗಿಯಲಿದೆ’ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕ ಸತೀಶ್‌ಕುಮಾರ್‌ ಡಿ.ಎಂ. ತಿಳಿಸಿದರು.

‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಕೋವಿಡ್‌ನಿಂದ ಆಗುವ ಮರಣಗಳನ್ನು ದೃಢಪಡಿಸಲು ಮಾನದಂಡಗಳನ್ನು ನಿಗದಿಪಡಿಸಿದೆ. ಅದನ್ನು ಆಧರಿಸಿ, ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ ಸಾವಿನ ಪ್ರಕರಣಗಳಿಗೆ ಮಾತ್ರ ಪರಿಹಾರ ಪಾವತಿಸಲಾಗುತ್ತದೆ. ಒಂದು ಬಿಪಿಎಲ್‌ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಕೋವಿಡ್‌ನಿಂದ ಮೃತಪಟ್ಟಿದ್ದರೂ ಒಬ್ಬರಿಗೆ ಮಾತ್ರ ನೆರವು ಸಿಗಲಿದೆ’ ಎಂದೂ ವಿವರಿಸಿದರು.

‘ಒಂದೇ ಬಾರಿಗೆ ಹಣ’

‘ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಎಲ್ಲ ಫಲಾನುಭವಿಗಳ ಖಾತೆಗೆ ಒಂದೇ ಬಾರಿಗೆ ಹಣ ಮಂಜೂರು ಮಾಡಲಾಗುವುದು. ಎಲ್ಲ ಪ್ರಕ್ರಿಯೆ ಆನ್‌ಲೈನ್‌ ಮೂಲಕ ನಡೆಯುವುದರಿಂದ ‌ಮಾನವ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಕೋವಿಡ್‌ನಿಂದ ರಾಜ್ಯದಲ್ಲಿ ಸುಮಾರು 37 ಸಾವಿರ ಮೃತ ಪ್ರಕರಣಗಳಿದ್ದು, ಬಿಪಿಎಲ್‌ ಕುಟುಂಬದವರು ಪ್ರತಿ ಜಿಲ್ಲೆಯಲ್ಲಿ 500 ಇರಬಹುದು. ಅರ್ಜಿ ಬಂದ ನಂತರವೇ ಸರಿಯಾದ ಮಾಹಿತಿ ಲಭ್ಯ ಆಗಬಹುದು’ ಎಂದು ಸತೀಶ್‌ಕುಮಾರ್‌ ಡಿ.ಎಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT