ಮಂಗಳವಾರ, ಫೆಬ್ರವರಿ 7, 2023
27 °C
ರಾಜ್ಯದ ಹಲವು ಯೋಜನೆಗಳಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

ದೆಹಲಿ ಪ್ರವಾಸ ಫಲಪ್ರದ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಎರಡು ದಿನಗಳ ನನ್ನ ದೆಹಲಿ ಪ್ರವಾಸ ಬಹಳ ಫಲಪ್ರದವಾಗಿದೆ. ರಾಜ್ಯದಲ್ಲಿ ಬಾಕಿ ಇರುವ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರ್‌.ಟಿ. ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ  ಸ್ಯಾಟಿಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್, ದಾಬಸ್‌ ಪೇಟೆಯಿಂದ ಮೈಸೂರು ರಸ್ತೆವರೆಗೆ) 2–3 ವರ್ಷಗಳಿಂದ ಬಾಕಿ ಇದೆ. ಅದನ್ನು ಮುಂದುವರಿಸಲಿದ್ದು, 5–6 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ, ವಿಜಯಪುರ–ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೂ ಒಪ್ಪಿದ್ದು, ಡಿಪಿಆರ್‌ ಆಗಿದೆ. ಅಲ್ಲದೆ, ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಭಾರತ್ ರಸ್ತೆ ಮಾಲಾದಲ್ಲಿ ಎರಡನೇ ಹಂತದಲ್ಲಿ ತೆಗೆದುಕೊಳ್ಳಲು ಕೂಡಾ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ’ ಎಂದರು.

‘ಸಚಿವ ರಾಜೀವ್‌ ಚಂದ್ರಶೇಖರ್‌ ಜೊತೆ ಗ್ರಾಮೀಣ ಕನೆಕ್ಟಿವಿಟಿಗೆ ವಿಶೇಷ ಕಾರ್ಯಕ್ರಮ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ತಂಡ ಚರ್ಚೆ ಮಾಡಿ ಮುಂದುವರಿಯಲು ತೀರ್ಮಾನಿಸಲಾಗಿದೆ’ ಎಂದರು.

‘ಬೆಂಗಳೂರು–ಕೋಲಾರ ಮಧ್ಯೆ ಹಾರ್ಡ್‌ ವೇರ್ ಪಾರ್ಕ್‌ ಮಾಡಲು ತೀರ್ಮಾನ ಆಗಿದೆ. ಸ್ಕಿಲ್‌ ವಿಶ್ವವಿದ್ಯಾಲಯ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಅದನ್ನೂ ಪರಿಶೀಲಿಸುತ್ತೇವೆ ಎಂದಿದ್ದೇವೆ. ಸಚಿವ ಹರದೀಪ್‌ ಸಿಂಗ್‌ ಪುರಿ ಅವರು ಪಿಎಂಎಎವೈ ನಗರ ಆವಾಸ್‌ ಯೋಜನೆಗೆ ₹ 400 ಕೋಟಿ ಬಿಡುಗಡೆ ಮಾಡಿದ್ದಾರೆ. ಇನ್ನು ₹ 1,500 ಕೋಟಿ ಬಿಡುಗಡೆ ಮಾಡಬೇಕು. ನಮ್ಮ ಕೆಲವು ಪ್ರಕ್ರಿಯೆಗಳು ಬಾಕಿ ಇದ್ದು ಅದನ್ನು ಪೂರ್ಣಗೊಳಿಸಿದ ಬಳಿಕ ಬಾಕಿ ಹಣ ಬಿಡುಗಡೆ ಮಾಡಲಿದ್ದಾರೆ’ ಎಂದೂ ಮುಖ್ಯಮಂತ್ರಿ ವಿವರಿಸಿದರು.

‘ಉಪ ನಗರ ರೈಲು ಯೋಜನೆ ಮತ್ತು ಬೈಯಪ್ಪನ ಹಳ್ಳಿ ಸ್ಟೇಷನ್‌ ಕೆಲಸವನ್ನು ಕೂಡಲೇ ತೆಗೆದುಕೊಳ್ಳುತ್ತೇವೆ. ಪ್ರಮುಖ ರೈಲು ಯೋಜನೆಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ತುಮಕೂರು–ದಾವಣಗೆರೆ, ಹುಬ್ಬಳ್ಳಿ–ಬೆಳಗಾವಿ, ಬೀದರ್‌, ಕಲಬುರ್ಗಿ ಎಲ್ಲ ಕಡೆ ಆದಷ್ಟು ಬೇಗ ರೈಲು ಯೋಜನೆಗಳನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆದಿದೆ. ರೈಲು ಯೋಜನೆಗೆ ನಮ್ಮ ಕಡೆಯಿಂದ ಜಾಗ ಮತ್ತು ಶೇ 50ರಷ್ಟು ವಂತಿಗೆ ಕೊಡಬೇಕಿದೆ. ಅದನ್ನು ಕೊಡಲು ಸಿದ್ಧ ಎಂದು ಹೇಳಿದ್ದೇವೆ’ ಎಂದರು.

‘ಶಿರಾಡಿ ಘಾಟ್‌ ಚತುಷ್ಪಥ ರಸ್ತೆ ಕಾಮಗಾರಿಯನ್ನು ಮುಗಿಸಲು ಕೂಡಾ ತೀರ್ಮಾನ ಆಗಿದೆ. ಹಣಕಾಸು ಸಚಿವರ ಬಳಿ ಜಿಎಸ್‌ಟಿಯನ್ನು 2022ವರೆಗೆ ವಿಸ್ತರಿಸುವಂತೆ ಮತ್ತೊಮ್ಮೆ ಮನವಿ ಮಾಡಿದ್ದೇನೆ’ ಎಂದೂ ಹೇಳಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ, ನಡ್ಡಾ ಜೊತೆ ಹೆಚ್ಚು ಸಮಯ ಚರ್ಚೆ ಮಾಡಲು ಆಗಿಲ್ಲ. ಆದರೂ ಪಕ್ಷ ಸಂಘಟನೆ, ಮುಂಬರುವ  ಚುನಾವಣೆಗೆ ಸಿದ್ಧತೆ ಬಗ್ಗೆ ಅವರು ಹೇಳಿದ್ದಾರೆ. ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಿಫಾ ವೈರಸ್‌ ಬಗ್ಗೆ ಆರೋಗ್ಯ ತಜ್ಞರಿಂದ ವರದಿ ತರಿಸಿಕೊಂಡು ನೋಡುತ್ತೇನೆ’ ಎಂದರು.

ಕಲಬುರ್ಗಿಯಲ್ಲಿ ಬಿಜೆಪಿ ಮೇಯರ್‌:  ‘ಕಲಬುರ್ಗಿ ಮಹಾನಗರಪಾಲಿಕೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಬಗ್ಗೆ ಆರಂಭಿಕ ಹಂತದ  ಚರ್ಚೆ ನಡೆದಿದೆ ಅಷ್ಟೆ. ಆದರೆ, ಅಲ್ಲಿ ಬಿಜೆಪಿ ಮೇಯರ್‌ ಆಗುತ್ತಾರೆ’ ಎಂದೂ ಬೊಮ್ಮಾಯಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು