ಬುಧವಾರ, ಜೂನ್ 29, 2022
25 °C
₹1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ವಿಶ್ವಾಸ

ವಿದೇಶಿ ಬಂಡವಾಳ ಹೂಡಿಕೆ: ಕರ್ನಾಟಕವನ್ನು ಆಂಧ್ರ ಹಿಂದಕ್ಕೆ ಹಾಕಿಲ್ಲ- ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆಯ ಸೆಳೆಯುವಲ್ಲಿ ಕರ್ನಾಟಕವನ್ನು ಆಂಧ್ರಪ್ರದೇಶ ಹಿಂದೆ ಹಾಕಿಲ್ಲ. ದಾವೋಸ್‌ನಲ್ಲಿ ರಾಜ್ಯ ಸರ್ಕಾರದ ಜತೆ ಸಹಿ ಮಾಡಿದ ಮತ್ತು ಆಸಕ್ತಿ ತೋರಿಸಿರುವ ಕಂಪನಿಗಳ ಹೂಡಿಕೆಯ ಪ್ರಮಾಣ ಒಟ್ಟು ಸೇರಿಸಿದರೆ ಸುಮಾರು ₹1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕವನ್ನು ಆಂಧ್ರದ ಜತೆ ಹೋಲಿಸಲು ಸಾಧ್ಯವಿಲ್ಲ. ಬೆಂಗಳೂರು ಅಂತರರಾಷ್ಟ್ರೀಯ ನಗರ. ಇಲ್ಲಿ ಬಂಡವಾಳ ಹೂಡಲು ಸಹಿ ಮಾಡಿರುವ ಕಂಪನಿಗಳೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಂಪನಿಗಳು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶುಕ್ರವಾರ ದಾವೋಸ್‌ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಮರಳಿದ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಂಧ್ರಪ್ರದೇಶಕ್ಕೆ ₹1 ಲಕ್ಷ ಕೋಟಿ ಬಂಡವಾಳ ಬರುತ್ತದೆ ಎಂದು ಹೇಳಿದೆ. ನಮ್ಮಲ್ಲಿ ಹೂಡಿಕೆ ಕಡಿಮೆ ಆಗಿದೆಯಲ್ಲವೇ’ ಎಂಬ ಪ್ರಶ್ನೆಗೆ, ನಮ್ಮಲ್ಲಿ ₹52 ಸಾವಿರ ಕೋಟಿ ಹೂಡಿಕೆಗೆ ಕಂಪನಿಗಳು ಸಹಿ ಮಾಡಿವೆ. ಅಲ್ಲದೆ, ಸುಮಾರು ₹50 ಸಾವಿರದಿಂದ ₹60 ಸಾವಿರ ಕೋಟಿಗಳಷ್ಟು ಹೂಡಿಕೆ ಮಾಡುವ ಆಸಕ್ತಿ ತೋರಿಸಿವೆ. ಇವೆರಡೂ ಸೇರಿದರೆ ಸುಮಾರು ₹1 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಹೂಡಿಕೆ ಕರ್ನಾಟಕ ಅಲ್ಲದೆ ರಾಜ್ಯದ ಇತರ ನಗರಗಳಲ್ಲೂ ಹೂಡಿಕೆ ಆಗಲಿದೆ. ಭಾರತದ ಆರ್ಥಿಕ ಬಲವರ್ಧನೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದು. ಕರ್ನಾಟಕದಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣವಿದೆ. ಹಿಂದೆ ಹೂಡಿಕೆಗೆ ಹಲವು ಅಡಚಣೆಗಳು ಇದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಗಮ ವಾಣಿಜ್ಯೋದ್ಯಮಕ್ಕೆ ಅವಕಾಶ ಕಲ್ಪಿಸಿರುವುದನ್ನು ವಿವರಿಸಿದಾಗ, ಹಲವು ಉದ್ಯಮಿಗಳು ಸಂತಸದಿಂದ ಹೂಡಿಕೆ ಮಾಡುವುದಾಗಿ ಉತ್ಸಾಹ ವ್ಯಕ್ತಪಡಿಸಿದರು ಎಂದು ಬೊಮ್ಮಾಯಿ ಹೇಳಿದರು.

ಲಕ್ಷ್ಮೀಮಿತ್ತಲ್ ಅವರು ₹6,000 ಕೋಟಿ ಬಂಡವಾಳ ತೊಡಗಿಸಿ ವಿಜಯಪುರ ಜಿಲ್ಲೆಯಲ್ಲಿ ಹೈಬ್ರೀಡ್‌ ವಿದ್ಯುತ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಮಳೆ ಮತ್ತು ಪ್ರವಾಹದಿಂದ ಸಮಸ್ಯೆ ಆಗುತ್ತಿರುವುದರಿಂದ ಹೂಡಿಕೆಗೆ ತೊಂದರೆ ಆಗಿದೆಯಲ್ಲವೇ ಎಂಬ ಪ್ರಶ್ನೆಗೆ, ಜಗತ್ತಿನ ಯಾವುದೇ ದೇಶದ ದೊಡ್ಡ ನಗರಗಳಲ್ಲಿ ಮಳೆ ಬಂದರೇ ಇದೇ ಸಮಸ್ಯೆ ಇರುತ್ತದೆ. ಯಾವುದೇ ದೇಶಗಳ ನಗರ ಇದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದರು.

ರಾಜಕಾಲುವೆಗಳನ್ನು ಸರಿಪಡಿಸಲು ನಗರೋತ್ಥಾನ ಯೋಜನೆಯಡಿ ₹6,000 ಕೋಟಿ ಅನುದಾನ ನೀಡಲಾಗುವುದು. ಈ ಮೊತ್ತವನ್ನು ಇದೇ ವರ್ಷ ಖರ್ಚು ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೂಡಿಕೆಯ ಪ್ರಮುಖ ಅಂಶಗಳು:

* ರೆನ್ಯೂ ಪವರ್‌ ಪ್ರೈ.ಲಿ.ಕಂಪೆನಿಯು ₹50 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್‌, ಗ್ರೀನ್ ಹೈಡ್ರೋಜನ್‌ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ. ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ ₹11,900 ಕೋಟಿ ಬಂಡವಾಳ ಹೂಡಿ, ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ ನವೀಕರಿಸಬುದಾದ ಇಂಧನ ಮತ್ತು ಗ್ರೀನ್‌ ಹೈಡ್ರೋಜನ್ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು ₹37,500 ಬಂಡವಾಳ ಹೂಡಿಕೆ ಮಾಡಲಾಗುತ್ತದೆ.

* ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ₹2 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿವೆ.

*  ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ ಎನರ್ಜಿ, ಸೀಮೆನ್ಸ್, ಅಬ್ ಇನ್ಬೇವ್, ದಸ್ಸಾಲ್ಟ್ ಸಿಸ್ಟಂ, ನೆಸ್ಲೆ , ಆರ್ಸೆಲಾರ್ ಮಿತ್ತಲ್,  ಭಾರ್ತಿ ಎಂಟರ್ ಪ್ರೈಸಸ್, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ.

* ಜ್ಯೂಬಿಲಿಯಂಟ್ ಗ್ರೂಪ್, ಜ್ಯೂಬಿಲಿಯಂಟ್ ಫುಡ್ ವರ್ಕ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ರಾಜ್ಯ ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಆರ್ ಅಂಡ್ ಡಿ ಸೆಂಟರ್ ಸ್ಥಾಪಿಸಲು ತೀರ್ಮಾನಿಸಿದೆ. 

* ಹಿಟಾಚಿ ಎನರ್ಜಿ, ಇ.ವಿ.ಚಾಜಿಂಗ್‌ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ.

* ಸೀಮೆನ್ಸ್ ಹೆಲ್ದೀನಿಯರ್ಸ್,  ಬೆಂಗಳೂರಿನಲ್ಲಿ ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಗ್ನಾಸ್ಟಿಕ್ಸ್ ಕೇಂದ್ರೀಕೃತವಾದ ಆರ್‌ಅಂಡ್‌ಡಿ ಆರೋಗ್ಯ ಯೋಜನೆಯನ್ನು ₹ 1,600 ಕೋಟಿ  ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ.

* ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಸೀಮನ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದೆ.

*  ಅಬ್ ಇನ್ಬೇವ್ ಸಂಸ್ಥೆ ಕರ್ನಾಟಕದಲ್ಲಿ ಬೇಡಿಕೆಯಲ್ಲಿರುವ ನಾನ್ ಆಲ್ಕೋಹಾಲಿಕ್ ಪಾನೀಯಗಳ ಉತ್ಪಾದನಾ ಘಟಕವನ್ನು ₹50 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿದೆ.

* ನೆಸ್ಲೆ ಕಂಪನಿ ನಂಜನಗೂಡಿನಲ್ಲಿ ಇನ್‌ಸ್ಟಂಟ್‌ ಕಾಫಿ ಉತ್ಪಾದನಾ ಘಟಕ ನವೀಕರಣ ಮತ್ತು ವಿಸ್ತರಣಾ ಕಾರ್ಯಕ್ಕೆ ₹700 ಕೋಟಿ ಬಂಡವಾಳ ಹೂಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು