ಶುಕ್ರವಾರ, ಸೆಪ್ಟೆಂಬರ್ 17, 2021
31 °C

ಆನಂದ್ ಸಿಂಗ್‌ ಕರೆದು ಮಾತನಾಡುತ್ತೇನೆ, ಅಂತಿಮವಾಗಿ ಎಲ್ಲ ಸರಿಯಾಗಲಿದೆ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ‘ಆನಂದ್‌ ಸಿಂಗ್‌ ಮತ್ತು ನಾನು ಮೂರು ದಶಕಗಳ ಗೆಳೆಯರು. ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆಯೂ ಮಾತನಾಡಿದ್ದೇನೆ. ಇವತ್ತು ಕೂಡಾ ಮಾತನಾಡುತ್ತೇನೆ. ಅವರ ವಿಚಾರ ಏನು ಎಂದು ನನಗೆ ಗೊತ್ತಿದೆ. ನಾನು ಕೂಡಾ ಹಲವು ವಿಚಾರ ಹೇಳಿದ್ದೇನೆ. ಅವರು ಮಾತನಾಡಿದ ಬಳಿಕ ಎಲ್ಲವೂ ಸರಿ ಹೋಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆರ್.ಟಿ. ನಗರದ ತಮ್ಮ‌ ನಿವಾಸದ ಬಳಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಂತಿಮವಾಗಿ ಎಲ್ಲ ಸರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆನಂದ್‌ ಸಿಂಗ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕೆಲವು ಮಾಧ್ಯಮಗಳಲ್ಲಿ ಆನಂದ್‍‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು.

‘ನನ್ನ ಬಳಿ ಎಲ್ಲ ವಿಷಯವನ್ನು ಅವರು ಹೇಳಿಕೊಂಡಿರುವುದು ನಿಜ. ನಾನೂ  ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಅದನ್ನು ಚರ್ಚೆ ಮಾಡುತ್ತಿದ್ದೇನೆ. ಅವರನ್ನು ಕರೆದು ಮಾತನಾಡುತ್ತೇನೆ. ನಾನು ಏನು ಮಾಡುತ್ತೇನೆ ಎಂದು ನಿಮಗೆ ಈಗ ಹೇಳುವುದಿಲ್ಲ’ ಎಂದರು.

‘ಅವರಿಗೆ (ಆನಂದ್‌ ಸಿಂಗ್‌) ಇವತ್ತು  ಬರಲು ಹೇಳಿದ್ದೇನೆ. ನಾಳೆ ನಾನು ಇರಲ್ಲ, ನಾಳಿದ್ದು ಬರಲಿ. ಅವರು ಅನುಕೂಲ ನೋಡಿಕೊಂಡು ಬರಲಿ. ಎಂಟಿಬಿ ನಾಗರಾಜ್‌ ಜೊತೆಗೆ ಮಾತನಾಡಿದ್ದೇನೆ. ಅವರದ್ದು ಏನೂ ಇಲ್ಲ’ ಎಂದರು.

ಸುಖಾಂತ್ಯವಾಗಲಿದೆ: ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಯಲ್ಲಿ ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, 'ಸಚಿವ ಆನಂದ ಸಿಂಗ್ ಅವರ ಅಸಮಾಧಾನ ಎರಡು ದಿನಗಳಲ್ಲಿ ಸುಖಾಂತ್ಯವಾಗಲಿದೆ ಎಂದರು.'ಆನಂದ್‌ ಸಿಂಗ್ ಬುದ್ದಿವಂತರಿದ್ದಾರೆ. ಈಗಾಗಲೇ ಅವರ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಹೈಕಮಾಂಡ್ ಜೊತೆ ಚರ್ಚಿಸಿ ಬಸವರಾಜ್ ಬೊಮ್ಮಾಯಿ ಇನ್ನೊಮ್ಮೆ ಆನಂದ ಸಿಂಗ್ ಜೊತೆ ಮಾತನಾಡುತ್ತಾರೆ. ಬೊಮ್ಮಾಯಿ ಸೂಕ್ಷ್ಮವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರ ಮಾರ್ಗದರ್ಶನವನ್ನೂ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಆನಂದ್ ಸಿಂಗ್ ಅವರ ಅಸಮಾಧಾನ ಸರಿಯಾಗಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು