ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದರ ಜನ್ಮದಿನ: ಬಜೆಟ್‌ನಲ್ಲಿ ‘ಯುವ ಕಾರ್ಯನೀತಿ’ ಘೋಷಣೆ –ಬೊಮ್ಮಾಯಿ

Last Updated 12 ಜನವರಿ 2022, 11:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪರಿಣಾಮಕಾರಿಯಾದ ಹೊಸ ‘ಯುವ ಕಾರ್ಯನೀತಿ’ಯನ್ನು ರೂಪಿಸಲು ಉನ್ನತ ಮಟ್ಟದಲ್ಲಿ ಸಮಾಲೋಚನೆಗಳು ನಡೆಯುತ್ತಿವೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯುವಜನರ ಕ್ರಿಯಾಶೀಲತೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದಿದ್ದಾರೆ.

ಉನ್ನತ ಶಿಕ್ಷಣ ಮತ್ತು ಯುವಜನ ಹಾಗೂ ಕ್ರೀಡಾ ಇಲಾಖೆಗಳು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನ ಆಚರಣೆ ಮತ್ತು ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುಯಲ್ ಆಗಿ ಪಾಲ್ಗೊಂಡು ಅವರು ಮಾತನಾಡಿದರು.

‘ವಿವೇಕಾನಂದರು ಯುಗಪುರುಷರಾಗಿದ್ದರು. ಅವರು ದೇಶದ ಯುವ ಸಮೂಹದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಅವರ ಚಿಂತನೆಗಳಿಗೆ ತಕ್ಕಂತೆ ಸರಕಾರವು ಯುವಜನರ ಭವಿಷ್ಯವನ್ನು ರೂಪಿಸಲಿದೆ’ ಎಂದು ನುಡಿದರು.

‘ಸ್ವತಃ ನಾನು ವಿವೇಕಾನಂದರ ವಿಚಾರಗಳ ವಿದ್ಯಾರ್ಥಿಯಾಗಿದ್ದೇನೆ. ಅವರದು ಕಾಲ ಮತ್ತು ದೇಶಗಳನ್ನು ಮೀರಿದ ಚಿಂತನೆಗಳಾಗಿದ್ದವು. ಅವರು ಪ್ರತಿದಿನವೂ ಹೊಸ ಹಾದಿಯಲ್ಲಿ ಮುನ್ನಡೆಯುತ್ತಿದ್ದರು. ಮನುಷ್ಯನು ಭೌತಿಕವಾಗಿ ಕಣ್ಮರೆಯಾದರೂ ಚಿರಂತನವಾಗಿ ಹೇಗೆ ಬದುಕಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಅವರು ಬಣ್ಣಿಸಿದರು.

‘ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರಂತಹ ಆಧ್ಯಾತ್ಮಿಕ ಅನುಭಾವಿ ಗುರುವಾಗಿ ಸಿಕ್ಕಿದರು. ತಮ್ಮ ಶಿಷ್ಯನಿಗೆ ಪರಮಹಂಸರು ಒಳ್ಳೆಯ ಹೆಸರನ್ನೇ ಇಟ್ಟರು. ಎಲ್ಲೆಲ್ಲಿ ವಿವೇಕ ಇರುತ್ತದೆಯೋ ಅಲ್ಲೆಲ್ಲ ಆನಂದವಿರುತ್ತದೆ. ಇದು ವಿವೇಕಾನಂದರಿಗೆ ಅನ್ವರ್ಥವಾಗಿದೆ’ ಎಂದು ಬೊಮ್ಮಾಯಿ ವ್ಯಾಖ್ಯಾನಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ರಾಜ್ಯವು ಇಂದು ಗುಣಮಟ್ಟದ ಶಿಕ್ಷಣ ಮತ್ತು ಉದ್ಯಮಶೀಲತೆಗೆ ಹೆಸರಾಗಿದ್ದು, ವಿವೇಕಾನಂದರ ಆಶಯದಂತೆ ಜಾಗತಿಕ ನಾಯಕತ್ವವನ್ನು ಸೃಷ್ಟಿಸುತ್ತಿದೆ’ ಎಂದರು.

‘ಅಕ್ಷರ ಕಲಿಕೆಯಷ್ಟೇ ಶಿಕ್ಷಣವಲ್ಲ. ವಿದ್ಯೆಯಲ್ಲಿ ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳು ಇರಬೇಕು. ಇದಕ್ಕೆ ತಕ್ಕಂತೆ ಶಿಕ್ಷಣವನ್ನು ಸುಧಾರಿಸಲಾಗುತ್ತಿದ್ದು, ಎನ್ಇಪಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಕನಿಷ್ಠ ಪಕ್ಷ ಹತ್ತು ಪಟ್ಟು ಸುಧಾರಿಸಲಿದೆ,’ ಎಂದು ಅಭಿಪ್ರಾಯಪಟ್ಟರು.

‘ಯುವಜನರು ದೈಹಿಕ, ಮಾನಸಿಕ ಮತ್ತು ಬೌದ್ಧಿಕ ದೃಢತೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದನ್ನು ಮನಗಂಡೇ ಎನ್ಇಪಿಯಲ್ಲಿ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕೌಶಲ್ಯಗಳ ಪೂರೈಕೆ, ಬಹುಶಿಸ್ತೀಯ ಕಲಿಕೆ ಮತ್ತು ಕ್ರೀಡಾ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ಕೊಡಲಾಗಿದೆ’ ಎಂದು ಸಚಿವರು ವಿವರಿಸಿದರು.

ವಿವೇಕಾನಂದರ ವಿಚಾರಗಳ ಬಗ್ಗೆ ಮಾತನಾಡಿದ ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ತದ್ಯುಕ್ತಾನಂದ ಮಹಾರಾಜ್, ‘ವಿವೇಕಾನಂದರು ಕರ್ಮ, ಭಕ್ತಿ, ರಾಜ ಮತ್ತು ಜ್ಞಾನಯೋಗಗಳ ಪ್ರತಿಪಾದಕರಾಗಿದ್ದರು. ಅವರಿಂದಾಗಿ ಇಂದು ಇಡೀ ಜಗತ್ತು ಆಧ್ಯಾತ್ಮಿಕತೆಗಾಗಿ ಭಾರತದತ್ತ ನೋಡುವಂತಾಗಿದೆ. ಇವತ್ತು ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ವ್ಯಾಪಕವಾಗಿರುವುದೇ ಇದಕ್ಕೆ ನಿದರ್ಶನ’ ಎಂದರು.

‘ಸಶಕ್ತ ಭಾರತ ನಿರ್ಮಾಣ ಸಾಕಾರಗೊಳ್ಳಬೇಕಾದರೆ ಶಿಕ್ಷಣದಲ್ಲಿ ಆಧ್ಯಾತ್ಮಿಕ ಅಂಶಗಳನ್ನೂ ಸೇರಿಸಬೇಕು. ಇಲ್ಲದೆ ಹೋದರೆ ಜಗತ್ತಿನ ಅನೇಕ ನಾಗರಿಕತೆಗಳಂತೆ ನಮ್ಮ ನಾಗರಿಕತೆಯೂ ಕಣ್ಮರೆಯಾಗಿ ಹೋಗಲಿದೆ’ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ನಾರಾಯಣಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಚ್.ಎನ್. ಗೋಪಾಲಕೃಷ್ಣ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಬಿ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ನಾನಾ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯುವಜನರಿಗೆಂದೇ ಇರುವ ನಾನಾ ಯೋಜನೆಗಳನ್ನು ಕುರಿತ ಸಮಗ್ರ ಮಾಹಿತಿಯನ್ನೊಳಗೊಂಡ `ಯುವಜನ ಕಣಜ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT