ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಿ ಮನೋಭಾವದಿಂದ ಕಾಂಗ್ರೆಸ್‌ ಪಾದಯಾತ್ರೆ: ಸಿಎಂ ಬೊಮ್ಮಾಯಿ

Last Updated 9 ಜನವರಿ 2022, 6:00 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಪಕ್ಷ ಮೇಕೆದಾಟು ಯೋಜನೆಗಾಗಿ ಏನೂ ಮಾಡಿರಲಿಲ್ಲ. ಈಗ ಅಪರಾಧಿ ಮನೋಭಾವದಿಂದ ಪಾದಯಾತ್ರೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜಲ ಸಂಪನ್ಮೂಲ ಸಚಿವರಾಗಿದ್ದರು. ಅವರ ಅವಧಿಯಲ್ಲಿ ಈ ಯೋಜನೆ ಕುರಿತು ಕಾರ್ಯಸಾಧ್ಯತಾ ವರದಿ ಮಾತ್ರ ಸಿದ್ಧಪಡಿಸಲಾಗಿತ್ತು. ವಿಸ್ತೃತ ಯೋಜನಾ ವರದಿ ಸಲ್ಲಿಸಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂದರು.

ಕಾಂಗ್ರೆಸ್‌ ಪಾದಯಾತ್ರೆ ಕುರಿತು ಸಾರ್ವಜನಿಕರ ಮನಸ್ಸಿನಲ್ಲಿ ಪ್ರಶ್ನೆ ಎದ್ದಿದೆ. ಕಾಂಗ್ರೆಸ್‌ ಮುಖಂಡರಿಗೆ ಈ ವಿಚಾರದಲ್ಲಿ ಬದ್ಧತೆ ಇಲ್ಲ. ಅಧಿಕಾರದಲ್ಲಿ ಇದ್ದಾಗ ಕೆಲಸ ಮಾಡದೇ ಇರುವುದಕ್ಕೆ ಅಪರಾಧಿ ಮನೋಭಾವ ಕಾಡುತ್ತಿದೆ. ಜನರನ್ನು ದಿಕ್ಕು ತಪ್ಪಿಸಲು ಈಗ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಯೋಜನೆ ವಿಚಾರದಲ್ಲಿ ಕೈಗೊಳ್ಳಬೇಕಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಮಾಡುತ್ತಿದೆ. ಹಿಂದೆ ಯೋಜನಾ ಪ್ರದೇಶಕ್ಕೆ ರೈತ ಸಂಘಟನೆಯವರು ಭೇಟಿ ನೀಡಿದ ಕಾರಣಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಯೋಜನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ತಡೆ ನೀಡಿತ್ತು. ಈಗ ಇಷ್ಟು ದೊಡ್ಡ ರಾಜಕೀಯ ಕಾರ್ಯಕ್ರಮ ಮಾಡುವುದರ ಪರಿಣಾಮ ಏನು ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿದೆ. ಆದರೂ, ಅವರು ಮಾಡುತ್ತಿದ್ದಾರೆ. ಅವರಿಗೆ ಜನರಿಗಿಂತ ರಾಜಕೀಯ ಮುಖ್ಯವಾಗಿದೆ ಎಂದು ಟೀಕಿಸಿದರು.

ಸಚಿವರ ಸಭೆ: ಹಿರಿಯ ಸಚಿವರ ಜತೆ ಇಂದು ಸಭೆ ನಡೆಸುತ್ತಿದ್ದೇನೆ. ಕೋವಿಡ್‌ ನಿಯಂತ್ರಣ, ಮೇಕೆದಾಟು ಯೋಜನೆ, ಕಾಂಗ್ರೆಸ್‌ನವರ ಪಾದಯಾತ್ರೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸುತ್ತೇವೆ. ಬೆಂಗಳೂರು ಅಭಿವೃದ್ಧಿ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಕಾಂಗ್ರೆಸ್‌ ನಾಯಕರಿಗೆ ಈ ಸಂಬಂಧ ನೋಟಿಸ್‌ ಜಾರಿ ಮಾಡಿದ್ದರು. ಖುದ್ದಾಗಿ ಭೇಟಿಮಾಡಿ ಸೂಚನೆಗಳನ್ನು ನೀಡಿದ್ದರು. ಆದರೆ, ಅವರು ಅದನ್ನು ಪಾಲಿಸದೇ ಉಡಾಫೆ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT