ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹಾಗೆ ಬಂದು, ಹೀಗೆ ಹೋದ ಸಿಎಂ!

ಚಿಕ್ಕಬಳ್ಳಾಪುರ: ಕಾಲುವೆ, ಕೆರೆ ವೀಕ್ಷಣೆಗಷ್ಟೇ ಸೀಮಿತವಾದ ಮಳೆ ಹಾನಿ ಪರಿಶೀಲನೆ
Last Updated 21 ನವೆಂಬರ್ 2021, 19:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದು ವಾರದಿಂದ ಸುರಿಯುತ್ತಿರುವ ಮಳೆ ಸ್ವಲ್ಪ ಬಿಡುವು ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಭಾನುವಾರಜಿಲ್ಲೆಯ ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡಿದರು. ಆದರೆ, ಈ ಭೇಟಿ ತರಾತುರಿಯಲ್ಲಿ ಮುಗಿದು ಹೋಯಿತು.

ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಭೇಟಿ ನೀಡಬೇಕಾಗಿತ್ತು. ನಂತರ ಸಮಯವನ್ನು ಸಂಜೆ 4ಕ್ಕೆ ಮುಂದೂಡಲಾಯಿತು. ಮುಖ್ಯಮಂತ್ರಿ ಬಂದಾಗ ಸಂಜೆ 4.30. ಬಿ.ಬಿ ರಸ್ತೆಯಲ್ಲಿ ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣಕೆರೆಗೆ ನೀರು ಹರಿಯುತ್ತಿರುವ ಕಾಲುವೆಯನ್ನು ಪರಿಶೀಲಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲವೂ 30 ನಿಮಿಷಗಳಲ್ಲಿ ಮುಗಿಯಿತು.

ನಂತರ ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಅಗ್ರಹಾರ ಕೆರೆ ಪರಿಶೀಲಿಸಿದರು.ಬಶೆಟ್ಟಹಳ್ಳಿಯಲ್ಲಿ ಅಧಿಕಾರಿಗಳು ತಂದಿಟ್ಟಿದ್ದ ಬೆಳೆಹಾನಿಯ ಮಾದರಿಗಳನ್ನು ವೀಕ್ಷಿಸಿದರು.ಕಾರ್ಯಕ್ರಮಗಳ ಪಟ್ಟಿಯಲ್ಲಿದೊಡ್ಡಬಂಧರಘಟ್ಟ ಗ್ರಾಮದ ಕೆರೆ ಹಾಗೂ ಗುಡಿಬಂಡೆ ಕೆರೆಗಳನ್ಕು ವೀಕ್ಷಿಸಬೇಕಿತ್ತು. ಆದರೆ ಈ ಎರಡೂ ಕೆರೆಗಳನ್ನು ಅವರು ವೀಕ್ಷಿಸಲಿಲ್ಲ. ಕತ್ತಲಾದ ಕಾರಣ ಗುಡಿಬಂಡೆ ಕೆರೆ ಬಳಿ ಅಧಿಕಾರಿಗಳು ವಿದ್ಯುತ್ ವ್ಯವಸ್ಥೆ ಮಾಡಿ ಮುಖ್ಯಮಂತ್ರಿಗಾಗಿ ಕಾಯುತ್ತಿದ್ದರು. ಸಿ.ಎಂ ಭೇಟಿ ಕಾಲುವೆ ಮತ್ತು ಕೆರೆ ವೀಕ್ಷಣೆಗೆ ಸೀಮಿತವಾಗಿತ್ತು.

ಈ ವೇಳೆ ಮಾತನಾಡಿದ ಬೊಮ್ಮಾಯಿ, ‘ಕೆಲವು ಸಚಿವರು ಈಗಾಗಲೇ ಮಳೆ ಹಾನಿ ಸ್ಥಳಗಳಲ್ಲಿ ಇದ್ದು ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹೋಗಬೇಕಾಗಿದೆ. ಪ್ರಾಥಮಿಕ ಸಮೀಕ್ಷೆ ಪ್ರಕಾರರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. 40 ಸಾವಿರ ಮನೆಗಳಿಗೆ ಹಾನಿ ಆಗಿದೆ’ ಎಂದರು.

ಜಿಲ್ಲೆಯಲ್ಲಿ ಮಳೆಯಿಂದದೊಡ್ಡ ಮಟ್ಟದಲ್ಲಿ ಬೆಳೆಗಳಿಗೆ, ರಸ್ತೆಗಳಿಗೆ, ಕೆರೆಗಳಿಗೆ ಹಾನಿ ಆಗಿದೆ.ಚಿಕ್ಕಬಳ್ಳಾಪುರದಲ್ಲಿ ಕೆರೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ರಾಜಕಾಲುವೆ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. 24 ಮನೆಗಳು ಪೂರ್ಣವಾಗಿ ಬಿದ್ದಿವೆ. 1078 ಮನೆಗಳಿಗೆ ಭಾಗಶಃ ಹಾನಿ ಆಗಿದೆ. ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ’ ಎಂದರು.

ನೀತಿ ಸಂಹಿತೆ ಅಡ್ಡಿ!

‘ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಡಿಯೊ ಸಂವಾದಕ್ಕೂ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕಾಗಿದೆ. ಮಳೆ ಹಾನಿ ಸ್ಥಳಗಳಿಗೆ ಸಚಿವರು ಭೇಟಿ ನೀಡಿದಾಗ ಅಧಿಕಾರಿಗಳು ಬರಬೇಕು ಎಂದರೆ ಆಯೋಗಕ್ಕೆ ಲಿಖಿತವಾಗಿ ಮಾಹಿತಿ ನೀಡಿ ಅನುಮತಿ ಕೋರಬೇಕಾಗಿದೆ. ಆ ಕೆಲಸ ಮಾಡುತ್ತಿದ್ದೇವೆ. ಅನುಮತಿಗೆ ಕಾಯದೆ ನಾನು ಬಂದಿದ್ದೇನೆ. ನಾಳೆಯೂ ಕೆಲ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT