ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧದ ಹೋರಾಟ: ಆಶಾ ಕಾರ್ಯಕರ್ತೆಯರ ಜತೆ ಬಿಎಸ್‌ವೈ ಸಂವಾದ

ಮುಂಚೂಣಿ ಕಾರ್ಯಕರ್ತರಿಗೆ ಯಡಿಯೂರಪ್ಪ ಶ್ಲಾಘನೆ
Last Updated 8 ಜೂನ್ 2021, 16:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ಆಶಾ ಕಾರ್ಯಕರ್ತೆಯರ ಜತೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೋವಿಡ್‌ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ಇರುವವರ ಶ್ರಮ ಹಾಗೂ ತ್ಯಾಗವನ್ನು ಶ್ಲಾಘಿಸಿದರು.

‘ಕೋವಿಡ್‌ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರು ಗಣನೀಯ ಕೆಲಸ ಮಾಡಿದ್ದಾರೆ. ಅಪಾಯಕಾರಿ ಸನ್ನಿವೇಶದಲ್ಲೂ ಪರಿಶ್ರಮದಿಂದ ಕಾರ್ಯನಿರ್ವಹಿಸಿರುವ ಅವರಿಗೆ ರಾಜ್ಯ ಸರ್ಕಾರ ತಲಾ ₹ 3,000 ಸಹಾಯಧನ ನೀಡುತ್ತಿದೆ. ಕೋವಿಡ್‌ ಲಸಿಕೆ ಪಡೆಯುವಂತೆ ಎಲ್ಲರನ್ನೂ ಮನವೊಲಿಸುವ ಮೂಲಕ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಲಸಿಕೆ ಹಾಕಿಸಿಕೊಳ್ಳಲು ಜನರು ಭಯದಿಂದ ಹಿಂಜರಿಯುತ್ತಿದ್ದುದು, ಆರೈಕೆ ಕೇಂದ್ರಗಳಿಗೆ ದಾಖಲಾಗಲು ಸೋಂಕಿತರು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಸುವಾಗ ಹಾಗೂ ಲಸಿಕಾ ಕೇಂದ್ರಗಳಿಗೆ ಜನರನ್ನು ಕರೆದೊ
ಯ್ಯುವಾಗ ಎದುರಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಆಶಾ ಕಾರ್ಯಕರ್ತೆಯರು ಯಡಿಯೂರಪ್ಪ ಅವರೊಂದಿಗೆ ಮಾಹಿತಿ ಹಂಚಿಕೊಂಡರು.

ಬೆಳಗಾವಿ ಜಿಲ್ಲೆ ಸುರೇಬಾನ ಗ್ರಾಮದ ಶಾರದಾ ಅವರು ತಮ್ಮ ವ್ಯಾಪ್ತಿಯ ಬಡ ರೋಗಿಗಳ ಚಿಕಿತ್ಸೆಗೆ ದಾನಿಗಳಿಂದ ನೆರವು ಕೊಡಿಸುವ ಪ್ರಯತ್ನ ಮಾಡುತ್ತಿರುವುದನ್ನು ಯಡಿಯೂರಪ್ಪ ಶ್ಲಾಘಿಸಿದರು. ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮುಂಬಾರು ಗ್ರಾಮದ ಶಾರದಾ ಕೆ.ವಿ., ಅಸ್ಪತ್ರೆಯಿಂದಲೇ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದರು. ಜನರು ಕೋವಿಡ್‌ ಲಸಿಕೆ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾಗ ಅವರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ತಮ್ಮ ಪತಿಗೆ ಮೊದಲಿಗೆ ಲಸಿಕೆ ಕೊಡಿಸಿದ್ದ ವಿಷಯವನ್ನು ರಾಮನಗರದ ಶಿವಲಿಂಗಮ್ಮ ತಿಳಿಸಿದರು.

ತಮ್ಮ ಗ್ರಾಮದಲ್ಲಿ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 120 ಜನರಲ್ಲಿ 115 ಮಂದಿಗೆ ಲಸಿಕೆ ಹಾಕಿಸಿರುವುದಾಗಿ ಕೊಪ್ಪಳ ಜಿಲ್ಲೆ ನವಲಿ ಗ್ರಾಮದ ಲಕ್ಷ್ಮವ್ವ ನಾಯಕ್‌ ಮಾಹಿತಿ ನೀಡಿದರು.

ಧಾರವಾಡ ಜಿಲ್ಲೆ ಅಮ್ಮಿನಭಾವಿಯ ಪ್ರೇಮಾ ಪ್ರಕಾಶ್ ಕಬ್ಬೂರು, ದಕ್ಷಿಣ ಕನ್ನಡ ಜಿಲ್ಲೆ ಸುಲ್ಕೇರಿಯ ಹೇಮಲತಾ, ವಿಜಯಪುರ ಜಿಲ್ಲೆ ಕಂಬಾಗಿಯ ದೀಪಾ ಬಜ್ಜನವರ್, ಬೆಂಗಳೂರು ನಗರ ಜಿಲ್ಲೆ ಸಬ್ಬಮಂಗಲದ ರತ್ನಮ್ಮ, ಬಳ್ಳಾರಿ ಜಿಲ್ಲೆ ದಬ್ಬೂರಿನ ಪರಿಮಳಾ, ರಾಯಚೂರು ಜಿಲ್ಲೆ ಗಣಮೂರಿನ ಇಂದಿರಾ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಆರೋಗ್ಯ ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT