ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲೂ ‘ಸಿ.ಎಂ’ ರಗಳೆ: ನಾಯಕರ ಮಧ್ಯೆ ಶುರುವಾಯ್ತು ಪೈಪೋಟಿ

ಸುರ್ಜೇವಾಲಾ ಎಚ್ಚರಿಕೆಗೆ ಸಡ್ಡು
Last Updated 25 ಜೂನ್ 2021, 0:51 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಗೊಂದಲದ ಬಿಸಿ ಆರಿಲ್ಲ. ಅತ್ತ ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕಾದರೂ ಒಮ್ಮನಸ್ಸಿನಿಂದ ಕೂಡಿ ಕೆಲಸ ಮಾಡುತ್ತಿದ್ದಾರೆ ಎಂದು ತೋರಿಸಿಕೊಳ್ಳುತ್ತಿದ್ದ ನಾಯಕರ ಮಧ್ಯದ ಪೈಪೋಟಿ ಬೀದಿಗೆ ಬಂದಿದೆ.

ವಿಧಾನಸಭೆ ಚುನಾವಣೆಗೆ ಇನ್ನೂ1 ವರ್ಷ 10 ತಿಂಗಳು ಬಾಕಿ ಇರುವಾಗಲೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಕಿಚ್ಚು ಕಾಂಗ್ರೆಸ್‌ನ ಮನೆಯಲ್ಲಿ ಒಡಕಿನ ಧ್ವನಿ ಹೊರಡಿಸಿದ್ದು, ನಿತ್ಯದ ರಗಳೆಯಾಗಿ ಮಾರ್ಪಟ್ಟಿದೆ.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕೆಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ, ‘ಭವಿಷ್ಯದ ನಾಯಕತ್ವ’ಕ್ಕೆಈಗಲೇ ರೂಪು ನೀಡಲು ಶುರುವಿಟ್ಟಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾಎಚ್ಚರಿಕೆ ನೀಡಿದ ನಂತರವೂ ಸಿದ್ದರಾಮಯ್ಯ ಪರ ಲಾಬಿ ಮಾಡುವವರು ಸುಮ್ಮನಾಗಿಲ್ಲ; ಅದರ ಬದಲು ಮತ್ತಷ್ಟು ಶಾಸಕರು ಧ್ವನಿ ಸೇರಿಸಲು ಆರಂಭಿಸಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಎಲ್ಲೂ ಸರಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸತೊಡಗಿದೆ.

‘ಭಾವಿ ಮುಖ್ಯಮಂತ್ರಿ’ ಎಂದು ಶಾಸಕರು ಬಿಂಬಿಸುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ’ ಎಂದಷ್ಟೇ ಹೇಳಿ, ಆ ಧ್ವನಿ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದ್ದ ಸಿದ್ದರಾಮಯ್ಯ, ಇದು ತಾರಕಕ್ಕೇರುವುದು ಗೊತ್ತಾಗುತ್ತಿದ್ದಂತೆ, ‘ಇಂಥ ಹೇಳಿಕೆ ಕೊಡಬೇಡಿ’ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ.

‘ಶಾಸಕರ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದಿದ್ದರೆ, ಆ ಬಗ್ಗೆ ಗಮನ ಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ’ ಎಂದು ಪ್ರತಿಪಾದಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಈ ರಗಳೆ ಬಗೆಹರಿಸುವ ಹೊಣೆಯನ್ನು ಸಿದ್ದರಾಮಯ್ಯನವರ ಹೆಗಲಿಗೆ ಹಾಕಿದ್ದರು.ಈ ಬೆನ್ನಲ್ಲೇ, ಯಾರೂ ಮಾತನಾಡಬೇಡಿ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ.

‘ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್‌ ಮತ್ತೆ ಮತ್ತೆ ಸ್ಪಷ್ಟಪಡಿಸಿದರೂ, ಈಗಿನಿಂದಲೇ ‘ನಾಯಕನ ಪ್ರತಿಷ್ಠಾಪನೆ’ಗೆ ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ’ ಎಂಬ ಅಭಿಪ್ರಾಯ ಕಾಂಗ್ರೆಸ್‌ ವಲಯದಲ್ಲಿ ಬಲಗೊಳ್ಳುತ್ತಿದೆ.

‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಮನಸ್ಥಿತಿಯನ್ನುಪಕ್ಷ ಹಾಗೂ ಜನರಲ್ಲಿ ಸೃಷ್ಟಿಸಲು ಸಿದ್ದರಾಮಯ್ಯ ಪರ ಶಾಸಕರು ಮುಂದಾಗಿದ್ದಾರೆ. ಅವರ ಅವಧಿಯ (2013–2018) ಯೋಜನೆಗಳ ಮೆಲುಕು ಹಾಕುವ ಮೂಲಕ ಮುಂದಿನ ಮುಖ್ಯಮಂತ್ರಿ ಎಂಬ ಚಿಂತನೆಯನ್ನು ಗಟ್ಟಿ ಮಾಡಲು ಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ಸೇರುವ ಅವರ ಬೆಂಬಲಿಗ ಶಾಸಕರು, ಮಾಜಿ ಶಾಸಕರು, ನಾಯಕರು ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಿದ್ದಾರೆ’ ಎಂಬ ಅಭಿಪ್ರಾಯಗಳು ಕೆಪಿಸಿಸಿ ಕಚೇರಿ ಸುತ್ತ ಮಾರ್ದನಿಸುತ್ತಿವೆ.

‘ತಮ್ಮ‌ ಮನಸ್ಸಿನಲ್ಲಿ ಇರುವುದನ್ನು ಆಪ್ತ ಶಾಸಕರ ಮೂಲಕ ಸಿದ್ದರಾಮಯ್ಯ ಹೊರ ಹಾಕುತ್ತಿದ್ದಾರೆ. ಅದಕ್ಕೆ ಪೂರಕವಾಗಿ, ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಆಪ್ತ ಬಳಗ ಬಿಂಬಿಸುತ್ತಿದೆ’ ಎನ್ನುವುದು ಶಿವಕುಮಾರ್‌ ಆಪ್ತ ವಲಯದ ದೂರು.

ಶಾಸಕರಾದ ಜಮೀರ್ ಅಹಮ್ಮದ್ ಖಾನ್‌, ರಾಘವೇಂದ್ರ ಹಿಟ್ನಾಳ್, ಭೀಮಾ ನಾಯಕ್, ಕಂಪ್ಲಿ ಗಣೇಶ್, ಭೈರತಿ ಸುರೇಶ್‌, ರಾಮಪ್ಪ, ಮಾಜಿ ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಹಲವರು ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

‘ಮುಖ್ಯಮಂತ್ರಿ ವಿಷಯದಲ್ಲಿ ಜಮೀರ್‌ ಪದೇ ಪದೇ ನೀಡುತ್ತಿರುವ ಹೇಳಿಕೆ ಎಲ್ಲ ಗೊಂದಲಕ್ಕೆ ಕಾರಣವೆಂದು ಶಾಸಕರಾದ ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್, ರಿಜ್ವಾನ್ ಅರ್ಷದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಸೇರಿದಂತೆ ಹಲವರು ತಮ್ಮ ಆಪ್ತ ಬಳಗದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಜಮೀರ್ ಹಾದಿಯಲ್ಲಿಯೇ ಇತರ ಕೆಲವು ಶಾಸಕರು ಮಾತನಾಡಲು ಆರಂಭಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಸಮುದಾಯದ ಪ್ರಮುಖ ನಾಯಕ ತಾನು ಎಂಬಂತೆ ಜಮೀರ್‌ ಬಿಂಬಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದಾಗ ಕುಮಾರಸ್ವಾಮಿ, ಈಗ ಸಿದ್ದರಾಮಯ್ಯ ಅವರನ್ನು ಜಮೀರ್‌ ಅತಿಯಾಗಿ ಓಲೈಸುತ್ತಿದ್ದಾರೆ. ಪಕ್ಷದಲ್ಲಿ ಒಂದು ಶಿಸ್ತು, ಚೌಕಟ್ಟಿದೆ. ಅದನ್ನು ಮೀರಿ ವರ್ತಿಸುವುದಕ್ಕೆ ತೆರೆ ಎಳೆಯ ಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಹೈಕಮಾಂಡ್‌ ಕದ ತಟ್ಟಲು ಕೆಲವು ನಾಯಕರು ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

‘ಮುಂದಿನ ಮುಖ್ಯಮಂತ್ರಿ’ ಹೇಳಿಕೆ ಬೇಡ: ಸಿದ್ದರಾಮಯ್ಯ

ಮುಂದಿನ ಮುಖ್ಯಮಂತ್ರಿ ಕುರಿತು ಇನ್ನು ಮುಂದೆ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರಲ್ಲಿ ಮನವಿ ಮಾಡಿದ್ದಾರೆ.

‘ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಾಗಿ, ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಹೇಳಿಕೆ ನೀಡಬಾರದು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸು
ತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಹೇಳಿದ್ದಾರೆ.

ಸೋತವರೂ ಮುಖ್ಯಮಂತ್ರಿ ಆಗಿದ್ದಾರೆ: ಡಿಕೆಶಿ

‘ಚುನಾವಣೆಗೆ ಸ್ಪರ್ಧಿಸುವ 224 ಜನರಲ್ಲಿ ಗೆಲ್ಲುವವರ ಜತೆಗೆ, ಸೋತವರು ಕೂಡ ಮುಖ್ಯಮಂತ್ರಿ ಆಗಿರುವುದನ್ನು ರಾಜ್ಯ ರಾಜಕೀಯದ ಇತಿಹಾಸದಲ್ಲಿ ನೋಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ದೇವರಾಜ ಅರಸು ಅವರು ಚುನಾವಣೆಯಲ್ಲಿ ಗೆದ್ದಿರಲಿಲ್ಲ, ಆದರೂ ಮುಖ್ಯಮಂತ್ರಿ ಆಗಲಿಲ್ಲವೇ. ರಾಮಕೃಷ್ಣ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ, ಆದರೂ ಮುಖ್ಯಮಂತ್ರಿ ಆಗಲಿಲ್ಲವೇ’ ಎಂದು ಪ್ರಶ್ನಿಸಿದರು.

ಶಾಸಕ ಜಿ. ಪರಮೇಶ್ವರ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಬೆಂಬಲಿಗರು ‘ಮುಂದಿನ ಮುಖ್ಯಮಂತ್ರಿ ಪರಮೇಶ್ವರ’ ಎಂದು ಜೈಕಾರ ಹಾಕಿದ್ದರ ಬಗ್ಗೆ ಪ್ರಸ್ತಾಪಿಸಿದಾಗ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದುರ್ಬಲವಾಗಿದೆ. ಹೀಗಾಗಿ ಪಕ್ಷದಲ್ಲಿ ನಾಯಕತ್ವದ ವಿಚಾರವಾಗಿ ಚರ್ಚೆ ನಡೆಯುತ್ತಿದೆ’ ಎಂದು ಸಚಿವ ಆರ್‌. ಅಶೋಕ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಅವರು ಮೊದಲು ತೆಗೆದುಹಾಕಲಿ, ಆಮೇಲೆ ಬೇರೆಯವರ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ಸಾಕಷ್ಟು ನಾಯಕರಿದ್ದಾರೆ:ಕೆ.ಎನ್‌. ರಾಜಣ್ಣ

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎನ್ನುವುದು ಶಾಸಕರ ವೈಯಕ್ತಿಕ ಅಭಿಪ್ರಾಯ’ ಎಂದುಮಾಜಿ ಶಾಸಕ ಕೆ.ಎನ್‌. ರಾಜಣ್ಣ ಹೇಳಿದರು.

ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದರು. ಹೀಗಾಗಿ ಮತ್ತೆ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಹೇಳುತ್ತಾರೆ. ಅದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ, ಆರ್‌‌.ವಿ‌. ದೇಶಪಾಂಡೆ, ಕೆ.ಎಚ್. ಮುನಿಯಪ್ಪ ಹೀಗೆ ಸಾಕಷ್ಟು ನಾಯಕರು ಇದ್ದಾರೆ ಎಂದರು.

‘ಈಗ ಮಾತನಾಡುವವರೆಲ್ಲ ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು. ಎಷ್ಟೂ ಜನ ಗೆಲ್ಲುವುದಿಲ್ಲ. ಹೊಸಬರು ಆಯ್ಕೆಯಾಗುತ್ತಾರೆ. ಪಕ್ಷ ಬಹುಮತ ಪಡೆದ ಬಳಿಕ ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT