ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹100 ಕೋಟಿ ಕಾರ್ಯಕ್ರಮಗಳ ಮೌಲ್ಯಮಾಪನಕ್ಕೆ ಸಿಎಂ ಸೂಚನೆ

Last Updated 20 ಜುಲೈ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ₹100 ಕೋಟಿಗಿಂತ ಹೆಚ್ಚು ಅನುದಾನವಿರುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲು ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಕಳೆದ ಆಯವ್ಯಯ ಭಾಷಣದಲ್ಲಿ ಈ ವಿಷಯ ಘೋಷಿಸಲಾಗಿತ್ತು. ಮೌಲ್ಯಮಾಪನವನ್ನು ‘ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ’ ದಿಂದಲೇ ನಡೆಸಲಾಗುವುದು ಎಂದು ಅವರು ಹೇಳಿದರು.

ಇಂದಿನ ಸಭೆಯಲ್ಲಿ 11 ಪ್ರಮುಖ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿಯ ಪರಿಶೀಲನೆ ನಡೆಸಲಾಯಿತು. 24 ವಿವಿಧ ಇಲಾಖೆಗಳಲ್ಲಿ 96 ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳು ಅನುಷ್ಠಾನದಲ್ಲಿವೆ. 2020–21 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಒಟ್ಟು ಅನುದಾನ ₹39,601 ಕೋಟಿಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು ₹18,715 ಕೋಟಿ ಇದ್ದು, 2021 ರ ಮಾರ್ಚ್‌ ಅಂತ್ಯಕ್ಕೆ ₹16,320 ಕೋಟಿ ಬಿಡುಗಡೆಯಾಗಿದೆ ಎಂದರು.

2021–22ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಟ್ಟು ಅನುದಾನ ₹38,078 ಕೋಟಿಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು ₹17,536 ಕೋಟಿ ಆಗಿದ್ದು, ಜೂನ್‌ ಅಂತ್ಯಕ್ಕೆ ₹4,074 ಕೋಟಿ ಬಿಡುಗಡೆಯಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020–21 ನೇ ಸಾಲಿನಲ್ಲಿ ₹6,446 ಕೋಟಿ ಅನುದಾನ ಕೇಂದ್ರದಿಂದ ಬಿಡುಗಡೆಯಾಗಬೇಕಿದ್ದು, ₹5,605 ಕೋಟಿ ಬಿಡುಗಡೆ ಆಗಿದ್ದು, ಉಳಿದ ₹840 ಕೋಟಿ ಇದೇ ಜೂನ್‌ನಲ್ಲಿ ಬಿಡುಗಡೆ ಆಗಿದೆ. ಭೌತಿಕ ಪ್ರಗತಿಯಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ. 2020–21 ನೇ ಸಾಲಿನಲ್ಲಿ ₹14.85 ಕೋಟಿ ಮತ್ತು ಈ ಸಾಲಿನಲ್ಲಿ ಜುಲೈ 18 ರವರೆಗೆ 5.47 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಎಂದು ಸುರೇಶ್‌ಕುಮಾರ್‌ ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 3ನೇ ಹಂತಕ್ಕೆ ಅನುಮೋದನೆ ಸಿಕ್ಕಿದೆ. 2020–21 ನೇ ಸಾಲಿನಲ್ಲಿ ಕೋವಿಡ್‌ ಕಾರಣ 495 ಕಿ.ಮೀ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. 2021–22 ನೇ ಸಾಲಿಗೆ 5,611 ಕಿ.ಮೀ ರಸ್ತೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕೊಳೆಗೇರಿ ಪ್ರದೇಶದಲ್ಲಿ 1.20 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ನಗರ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿ 69 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಸುರೇಶ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT