ಶನಿವಾರ, ಅಕ್ಟೋಬರ್ 8, 2022
21 °C

ಸಿಇಟಿ ರ್‍ಯಾಂಕಿಂಗ್ ಗೊಂದಲ, ಮೇಲ್ಮನವಿಗೆ ನಿರ್ಧಾರ: ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2020-21ರಲ್ಲಿ ಪಿಯು ತೇರ್ಗಡೆಯಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ಅಭ್ಯರ್ಥಿಗಳ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸಿ ರ್‍ಯಾಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂಬ ಹೈಕೋರ್ಟ್ ತೀರ್ಪಿನಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಹಾಗಾಗಿ, ತೀರ್ಪು ಪ್ರಶ್ನಿಸಿ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ಸೋಮವಾರ ಸಮಾಲೋಚನೆ ನಡೆಸಿದ ಬಳಿಕ ಅವರು ಮಾತನಾಡಿದರು.

ತೀರ್ಪು ನೀಡಿರುವ ಏಕ ಸದಸ್ಯ  ಪೀಠದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಅಥವಾ ಮೇಲ್ಮನವಿ ಸಲ್ಲಿಸಬೇಕೋ ಎನ್ನುವುದನ್ನು ವಕೀಲರು ತೀರ್ಮಾನಿಸುತ್ತಾರೆ. ತ್ವರಿತವಾಗಿ ಯಾವುದು ಆಗುತ್ತದೆಯೋ ಅದನ್ನು ಮಾಡಲು ಸೂಚಿಸಲಾಗಿದೆ ಎಂದರು.

ಕೋರ್ಟ್ ತೀರ್ಪನ್ನು ಪಾಲಿಸಲು ಹೋದರೆ ಈ ವರ್ಷ ಸಿಇಟಿ ಬರೆದಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅವರ ರ್‍ಯಾಂಕ್ ಪಟ್ಟಿ ದೊಡ್ಡ ಪ್ರಮಾಣದಲ್ಲಿ ಏರುಪೇರಾಗುತ್ತದೆ ಎಂದು ಅವರು ತಿಳಿಸಿದರು.

ಕೋರ್ಟ್ ಮೆಟ್ಟಿಲೇರಿದ್ದವರು ಯಾವುದೋ ಒಂದು ತಾಂತ್ರಿಕ ಅಂಶಕ್ಕೆ ಅಂಟಿಕೊಂಡಿದ್ದಾರೆ. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡ ತೀರ್ಮಾನವನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.

ಹೋದ ವರ್ಷದ ವಿದ್ಯಾರ್ಥಿಗಳ ಬಗ್ಗೆ ನಮಗೆ ಅಸಮಾಧಾನವೇನಿಲ್ಲ. ನಾವು ಯಾರಿಗೂ ಅನ್ಯಾಯ ಆಗದಂತೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಎಲ್ಲವೂ ನಿಗದಿತ ಕಾಲಮಿತಿಯಲ್ಲೇ ನಡೆಯಲಿದೆ ಎಂದು ಅವರು ಭರವಸೆ ನೀಡಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು