ಗುರುವಾರ , ಜುಲೈ 29, 2021
27 °C
ಮೈಸೂರಿನಲ್ಲಷ್ಟೇ ಕಠಿಣ ನಿರ್ಬಂಧ ಮುಂದುವರಿಕೆ

ಅರ್ಧ ನಾಡು ನಿರಾಳ: 16 ಜಿಲ್ಲೆಗಳಲ್ಲಿ ಹಗಲಿನ ಲಾಕ್‌ಡೌನ್‌ ಸಂಪೂರ್ಣ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದು ವಾರದ ಅವಧಿಯಲ್ಲಿ ಸರಾಸರಿ, ಶೇಕಡ 5ಕ್ಕಿಂತ ಕಡಿಮೆ ಕೋವಿಡ್‌ ದೃಢ ಪ್ರಮಾಣ ದಾಖಲಾಗಿರುವ 16 ಜಿಲ್ಲೆಗಳಲ್ಲಿ ಸೋಮವಾರದಿಂದ ಹಗಲಿನ ವೇಳೆ ಲಾಕ್‌ಡೌನ್‌ ಸಂಪೂರ್ಣ ತೆರವಾಗಲಿದೆ.

ಕೋವಿಡ್ ದೃಢಪ್ರಮಾಣ ದರ ಶೇ 5ರಿಂದ ಶೇ 10ರಷ್ಟು ಇರುವ 14 ಜಿಲ್ಲೆಗಳಲ್ಲಿ ಮಧ್ಯಾಹ್ನ 2ರವರೆಗೂ ಲಾಕ್‌ಡೌನ್‌ ಸಡಿಲಿಕೆ ಆಗಲಿದ್ದು, ಶೇ 10ಕ್ಕಿಂತ ಹೆಚ್ಚಿನ ದೃಢಪ್ರಮಾಣ ದರ ಇರುವ ಮೈಸೂರು ಜಿಲ್ಲೆಯಲ್ಲಿ ಮಾತ್ರ ಕಠಿಣ ನಿರ್ಬಂಧ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಶನಿವಾರ ಸಂಜೆ ಸಭೆ ನಡೆಸಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಲಹೆಗಳ ಕುರಿತು ಚರ್ಚಿಸಿದರು. ಬಳಿಕ ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ ತೀರ್ಮಾನಗಳನ್ನು ಪ್ರಕಟಿಸಿದರು. ಸೋಮವಾರ(ಜೂ.21) ಬೆಳಿಗ್ಗೆಯಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ.

ಯಾವುದೆಲ್ಲ ನಿರ್ಬಂಧ?: ರಾಜ್ಯದಾದ್ಯಂತ ಬಾರ್‌ ಅಂಡ್‌ ರೆಸ್ಟೋರೆಂಟ್‌
ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ಇಲ್ಲ. ಪಬ್‌, ಈಜುಕೊಳಗಳನ್ನು ತೆರೆಯುವಂತಿಲ್ಲ. ಸಭೆ, ಸಮಾರಂಭ ಮತ್ತು ರಾಜಕೀಯ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಪೂಜಾ ಸ್ಥಳ
ಗಳಿಗೆ ಸಾರ್ವಜನಿಕರ ಭೇಟಿಗೆ ಅವಕಾಶವಿಲ್ಲ. ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳು, ಶಾಪಿಂಗ್‌ ಮಾಲ್‌ಗಳು, ಮನರಂಜನಾ ಪಾರ್ಕ್‌
ಗಳು, ಹವಾನಿಯಂತ್ರಿತ ಶಾಪಿಂಗ್‌ ಕಾಂಪ್ಲೆಕ್ಸ್‌ಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯದಾದ್ಯಂತ ಶೇ 50ರಷ್ಟು ಪ್ರಯಾಣಿಕರ ಸಂಖ್ಯೆಯನ್ನು ಮಿತಿಗೊಳಿಸಿ
ಕೊಂಡು ಬಸ್‌ ಹಾಗೂ ಬೆಂಗಳೂರಿನಲ್ಲಿ ಮೆಟ್ರೊ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದರು.

ರಾತ್ರಿ, ವಾರಾಂತ್ಯ ಕರ್ಫ್ಯೂ: ರಾಜ್ಯದ ಎಲ್ಲೆಡೆ ಪ್ರತಿ ದಿನ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಮುಂದುವರಿಯಲಿದೆ ಎಂದು ತಿಳಿಸಿದರು.

16 ಜಿಲ್ಲೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಡಿಲಿಕೆ

l ಸಂಜೆ 5ರವರೆಗೆ ಎಲ್ಲ ಅಂಗಡಿಗಳನ್ನೂ ತೆರೆಯಬಹುದು.

l ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹೋಟೆಲ್‌, ಕ್ಲಬ್‌ ಮತ್ತು ರೆಸ್ಟೋರೆಂಟ್‌ ಗಳಲ್ಲಿ ಶೇ 50ರಷ್ಟು ಗ್ರಾಹಕರ ಮಿತಿಯಲ್ಲಿ ಸಂಜೆ 5ರವರೆಗೂ ಕುಳಿತು ಆಹಾರ ಸೇವಿಸಬಹುದು.

l ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ.

l ಶೇ 50ರಷ್ಟು ಪ್ರಯಾಣಿಕರ ಮಿತಿಯಲ್ಲಿ ಬಸ್‌, ಬೆಂಗಳೂರಿನಲ್ಲಿ ಮೆಟ್ರೊ ರೈಲು ಸಂಚಾರ.

l ವೀಕ್ಷಕರಿಲ್ಲದೆ ಹೊರಾಂಗಣ ಕ್ರೀಡಾ ಚಟುವಟಿಕೆಗೆ ಅನುಮತಿ.

l ಶೇ 50ರಷ್ಟು ಸಿಬ್ಬಂದಿಯೊಂದಿಗೆ ಸರ್ಕಾರಿ, ಖಾಸಗಿ ಕಚೇರಿಗಳ ಕಾರ್ಯ
ನಿರ್ವಹಣೆ.

l ಲಾಡ್ಜ್ ಮತ್ತು ರೆಸಾರ್ಟ್‌ಗಳಲ್ಲಿ ಶೇ 50ರಷ್ಟು ಗ್ರಾಹಕರು ತಂಗಬಹುದು.

l ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದೆ ಜಿಮ್‌ಗಳಲ್ಲಿ ಸಾಮರ್ಥ್ಯದ ಶೇ 50ರಷ್ಟು ಮಂದಿಗೆ ಅವಕಾಶ.

ಯಾವ ಜಿಲ್ಲೆಗಳು: ಬೆಂಗಳೂರು ನಗರ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್‌ ಹಾಗೂ ಬಿಬಿಎಂಪಿ ವ್ಯಾಪ್ತಿ ಪ್ರದೇಶ.

14 ಜಿಲ್ಲೆಗಳಲ್ಲಿ ಸಡಿಲಿಕೆ ಏನೇನು?

l ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ವಹಿವಾಟು.

l ಬೀದಿಬದಿ ವ್ಯಾಪಾರಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನದ 2ರವರೆಗೆ ಮಾರಾಟ ಮಾಡಬಹುದು.

l ಆಟೊ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ.

l ಹೋಟೆಲ್, ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ.

l ಬೆಳಿಗ್ಗೆ 5ರಿಂದ 10 ಗಂಟೆಯವರೆಗೆ ಉದ್ಯಾನಗಳಲ್ಲಿ ವಾಯುವಿಹಾರ ಮಾಡಬಹುದು.

l ಎಲ್ಲ ಕಾರ್ಖಾನೆಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಮತ್ತು ಗಾರ್ಮೆಂಟ್ಸ್‌ಗಳಲ್ಲಿ ಶೇ 30ರಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬಹುದು.

l ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ನಡೆಸಲು ಅವಕಾಶ. ಅದಕ್ಕೆ ಪೂರಕವಾಗಿ ಉಕ್ಕು, ಸಿಮೆಂಟ್‌ ಮತ್ತಿತರ ಸಾಮಗ್ರಿಗಳನ್ನು ಮಾರಾಟ ಮಾಡಬಹುದು.

ಯಾವ ಜಿಲ್ಲೆಗಳು: ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ವಿಜಯಪುರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು