ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳದಲ್ಲಿ ಮೂರು ಜ್ಯೋತಿ ಯಾತ್ರೆಗಳ ಸಂಗಮ

ಮೊದಲ ದಿನ ಕೆ.ಆರ್‌.ಪೇಟೆಯಲ್ಲಿ ಸಾಂಸ್ಕೃತಿಕ ಉತ್ಸವ
Last Updated 13 ಅಕ್ಟೋಬರ್ 2022, 19:52 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನಾಲ್ಕು ದಿನಗಳ ಕುಂಭಮೇಳ ಆರಂಭಗೊಂಡಿದ್ದು ಮೊದಲ ದಿನವಾದ ಗುರುವಾರ ವಿವಿಧ ಜಿಲ್ಲೆಗಳಿಂದ ಹಾದು ಬಂದಿದ್ದ ಮೂರು ಜ್ಯೋತಿಯಾತ್ರೆಗಳು ಪಟ್ಟಣದಲ್ಲಿ ಸಂಗಮಿಸಿದವು.

ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟದಲ್ಲಿ ಅ.6ರಂದು ಜ್ಯೋತಿಯಾತ್ರೆಗೆ ಚಾಲನೆ ನೀಡಲಾಗಿತ್ತು. ಪ್ರತ್ಯೇಕವಾಗಿ ಸಾಗಿ ಬಂದ ಜ್ಯೋತಿಯಾತ್ರೆ ಒಂದಾದ ನಂತರ ಪಟ್ಟಣದಾದ್ಯಂತ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನ, ವಿದ್ಯಾರ್ಥಿಗಳು, ಕಲಾ ತಂಡಗಳ ಸದಸ್ಯರು ಭಾಗವಹಿಸಿದ್ದರು.

ಮೆರವಣಿಗೆ ಸಾಗುವ ಮಾರ್ಗವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ರಂಗೋಲಿಯ ಚಿತ್ತಾರ ಮೂಡಿಸಿದ್ದರು.

ಆಳ್ವಾಸ್ ಸಂಸ್ಥೆಯ 113 ಕಲಾತಂಡಗಳು, 3 ಸಾವಿರಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡೊಳ್ಳುಕುಣಿತ, ನಗಾರಿ, ವೀರಗಾಸೆ, ತಮಟೆ ವಾದ್ಯ, ಕಹಳೆ, ಕಂಸಾಳೆ, ಹುಲಿವೇಷ ಪ್ರದರ್ಶನ
ಗಳು ಗಮನ ಸೆಳೆದವು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮೆರವಣಿಗೆಗೆ ಚಾಲನೆ ನೀಡಿದರು. ಸಚಿವ ಕೆ.ಸಿ.ನಾರಾಯಣಗೌಡ ಹಾಜರಿದ್ದರು.

ಟಿಎಪಿಸಿಎಂಎಸ್‌ ಭವನದಿಂದ ಟಿ.ಬಿ ಸರ್ಕಲ್‌ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ ಮೆರವಣಿಗೆ ವೀಕ್ಷಿಸಿದರು. ಪುರಸಭೆ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್‌ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆರವಣಿಗೆಯಲ್ಲಿ ಸಾಗಿ ಬಂದ ಜನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು.

ಇಂದು ಚಾಲನೆ: ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕುಂಭಮೇಳಕ್ಕೆ ಧರ್ಮಸ್ಥಳ ಧರ್ಮಾಧಿ
ಕಾರಿ, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಲಿದ್ದಾರೆ. ನಂತರ, ನದಿ ತಟದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಲೆಮಹದೇಶ್ವರ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.

ಸಂಜೆ 7 ಗಂಟೆಗೆ ವಾರಾಣಸಿ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ನಡೆಯಲಿದೆ. ಪ್ರತಿದಿನ ರಾತ್ರಿ ವಿಶೇಷ ಲೇಸರ್ ಪ್ರದರ್ಶನ ನಡೆಯಲಿದೆ. ರಾಜ್ಯ, ಹೊರರಾಜ್ಯಗಳಿಂದ ಬಂದ ಪ್ರವಾಸಿಗರಿಗೆ ಟೆಂಟ್‌ನಲ್ಲಿ ವಸತಿ ಸೌಲಭ್ಯ ಒದಗಿಸಲಾಗಿದೆ. ಭಕ್ತರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನ ಪ್ರಸಿದ್ಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT