ಶನಿವಾರ, ಜುಲೈ 24, 2021
20 °C

30 ದಿನ ಕಾಂಗ್ರೆಸ್‌ ಅಭಿಯಾನ: ಡಿ.ಕೆ. ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ನಿಂದ ಸಾವು-ನೋವು ಉಂಡವರು, ಉದ್ಯೋಗ–ಆರೋಗ್ಯ ಕಳೆದುಕೊಂಡವರು, ಆರ್ಥಿಕವಾಗಿ ಸಂಕಷ್ಟಕ್ಕೀಡಾದ ರೈತರು, ಕಾರ್ಮಿಕರು, ವರ್ತಕರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಲು ಕಾಂಗ್ರೆಸ್ ವತಿಯಿಂದ 30 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೋವಿಡ್‌ನಿಂದ ಯಾರು ನೊಂದಿದ್ದಾರೆ, ಬೆಂದಿದ್ದಾರೆ, ಜೀವ, ಜೀವನ ಕಳೆದುಕೊಂಡಿದ್ದಾರೆ, ಅವರನ್ನು ತಲುಪಲು ಎಐಸಿಸಿ ಸೂಚನೆಯಂತೆ ಪಕ್ಷ ಈ ಅಭಿಯಾನ ಹಮ್ಮಿಕೊಂಡಿದೆ’ ಎಂದರು.

‘ಸೋಂಕಿತರು, ಸೋಂಕಿನಿಂದ ಮೃತಪಟ್ಟಿದ್ದರೆ ಹೆಸರು, ವಯಸ್ಸು, ಅಂಥವರ ಮನೆಯಲ್ಲಿ ದುಡಿಯುವ ವ್ಯಕ್ತಿಗಳಿದ್ದಾರೆಯೇ, ಯಾರಾದರೂ ಉದ್ಯೋಗ ಕಳೆದುಕೊಂಡಿದ್ದರೆ ಅವರ ಹೆಸರು, ವಯಸ್ಸು, ಆ ಕುಟುಂಬಕ್ಕೆ ಅಗತ್ಯವಿರುವ ನೆರವು (ದಿನಸಿ, ಉದ್ಯೋಗ, ಶಿಕ್ಷಣ, ಆರ್ಥಿಕ ನೆರವು) ಏನು ಎಂಬ ಮಾಹಿತಿ ಸಂಗ್ರಹಿಸಿ ಅದನ್ನು ಪಕ್ಷದ ಕಾರ್ಯಕರ್ತರು ಕೆಪಿಸಿಸಿಗೆ ಕಳುಹಿಸಿಕೊಡಬೇಕು. ನಂತರ ಅದನ್ನು ಎಐಸಿಸಿಗೆ ರವಾನಿಸಲಾಗುವುದು’ ಎಂದರು.

ಜುಲೈ 1ರಿಂದ 30 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ನಾಯಕರು, ಪದಾಧಿಕಾರಿಗಳು ಪ್ರತಿ ಬ್ಲಾಕ್‌ನಲ್ಲಿ ಕನಿಷ್ಠ 10 ಜನರ ತಂಡ ರಚಿಸಿ, ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ’ ಎಂದರು.

1.20 ಲಕ್ಷ ಮರಣ ಪ್ರಮಾಣ ಪತ್ರ: ‘ಕೋವಿಡ್‌ನಿಂದ ಸತ್ತವರ ಸಂಖ್ಯೆ 30 ಸಾವಿರ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರಾಜ್ಯದಲ್ಲಿ 1.20 ಲಕ್ಷ ಮರಣ ಪ್ರಮಾಣಪತ್ರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರದಲ್ಲಿ ಸಾವಿನ ಕಾರಣ ಇಲ್ಲದಿದ್ದರೆ ಪರಿಹಾರ ಸಿಗುವುದಿಲ್ಲ. ಹೀಗಾಗಿ, ಕೋವಿಡ್‌ನಿಂದ ಸತ್ತಿರುವ ಎಲ್ಲರಿಗೂ ಪ್ರಮಾಣಪತ್ರ ಕೊಡಿಸಿ, ಪರಿಹಾರ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು