ಗುರುವಾರ , ಅಕ್ಟೋಬರ್ 28, 2021
19 °C
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯರ ಆಕ್ರೋಶ

3 ವರ್ಷದಿಂದ ಒಂದೂ ಮನೆ ನೀಡದ ಸರ್ಕಾರ: ಕಾಂಗ್ರೆಸ್ ಸದಸ್ಯರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಶರತ್‌ ಬಚ್ಚೇಗೌಡ ಅವರು ಮನೆ ಹಂಚಿಕೆ ಬಗ್ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ವಸತಿ ಸಚಿವ ವಿ.ಸೋಮಣ್ಣ ಉತ್ತರ ನೀಡಿ ಸರ್ಕಾರದ ಸಾಧನೆ ಬಗ್ಗೆ ಹೇಳಿಕೊಂಡರು.

ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಎಂಟಿಬಿ ನಾಗರಾಜ್‌ ವಸತಿ ಸಚಿವರಾಗಿದ್ದ ವೇಳೆ ಬಾದಾಮಿ ಕ್ಷೇತ್ರಕ್ಕೆ 7500 ಮನೆಗಳನ್ನು ಮಂಜೂರು ಮಾಡಿದ್ದರು. ಆ ಬಳಿಕ ಈವರೆಗೆ ಒಂದೇ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಲಾಕ್ ಮಾಡಲಾಗಿದೆ. ಅಕ್ರಮ ಮಾಡಿದ್ದರೆ ತನಿಖೆ ನಡೆಸಲಿ. ಅದು ಬಿಟ್ಟು ಮನೆ ಹಂಚಿಕೆ ಮಾಡದೆ ಇರುವುದು ಸರಿಯಲ್ಲ’ ಎಂದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 3 ಲಕ್ಷದಂತೆ ಒಟ್ಟು 15 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಂದು ಲಕ್ಷ ವಸತಿ ಯೋಜನೆಗೆ ಚಾಲನೆ ನೀಡಿದ್ದೆವು’ ಎಂದು ಅವರು ಹೇಳಿದರು. ‘ಒಂದೇ ಒಂದು ಮನೆ ನಿರ್ಮಾಣ ಆಗಿಲ್ಲ’ ಎಂದು ಡಿ.ಕೆ.ಶಿವಕುಮಾರ್‌, ಯು.ಟಿ.ಖಾದರ್‌ ಸೇರಿದಂತೆ ಹಲವು ಸದಸ್ಯರು ದೂರಿದರು. ‘ನನ್ನ ಕ್ಷೇತ್ರಕ್ಕೆ ಹಂಚಿಕೆಯಾಗಿದ್ದ ಮನೆಯನ್ನು ಬೇರೆ ಕ್ಷೇತ್ರಕ್ಕೆ ಮರು ಹಂಚಿಕೆ ಮಾಡಲಾಗಿದೆ’ ಎಂದು ತನ್ವೀರ್ ಸೇಠ್‌ ದೂರಿದರು.

ವಿ.ಸೋಮಣ್ಣ, ‘ಒಂದು ಲಕ್ಷ ವಸತಿ ಯೋಜನೆಗೆ ಕ್ವಾರಿ ಜಾಗ ನೀಡಲಾಗಿತ್ತು. 3–4 ಕಡೆ ಮಾತ್ರ ಮನೆ ನಿರ್ಮಾಣ ಸಾಧ್ಯ. ಯೋಜನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಈಗ ಈ ಎಲ್ಲ ಗೊಂದಲಗಳನ್ನು ನಿವಾರಿಸಲಾಗಿದೆ. 3–4 ತಿಂಗಳಲ್ಲಿ 38 ಸಾವಿರ ಜನರಿಗೆ ಮನೆ ಹಂಚಿಕೆ ಮಾಡುತ್ತೇವೆ’ ಎಂದರು.

ಕ್ಷೇತ್ರಗಳ ಬಗ್ಗೆ ಮನೆ ಹಂಚಿಕೆ ಮಾಡದ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಅದಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಒಪ್ಪಿದರು.

ವಿ.ಸೋಮಣ್ಣ ಪ್ರತಿಕ್ರಿಯಿಸಿ, ‘ಯಾವ ಕ್ಷೇತ್ರಕ್ಕೆ ಈ ಹಿಂದೆ ಎಷ್ಟು ಮನೆ ಹಂಚಿಕೆ ಮಾಡಲಾಗಿತ್ತು, ಈಗ ಎಷ್ಟು ಹಂಚಿಕೆ ಮಾಡಲಾಗಿದೆ ಎಂಬ ವಿವರಗಳನ್ನು ಇದೇ 23ರಂದು ಸದನದಲ್ಲಿ ಹೇಳುವೆ’ ಎಂದರು.

ಐದು ಮಸೂದೆಗಳಿಗೆ ಪರಿಷತ್‌ ಒಪ್ಪಿಗೆ
ರಾಜ್ಯ ಬಂದೀಖಾನೆ ಅಭಿವೃದ್ಧಿ ಮಂಡಳಿ ಮಸೂದೆ–2021 ಸೇರಿದಂತೆ ವಿಧಾನಸಭೆಯ ಅಂಗೀಕಾರ ಪಡೆದಿದ್ದ ಐದು ಮಸೂದೆಗಳಿಗೆ ವಿಧಾನ ಪರಿಷತ್‌ ಸೋಮವಾರ ಒಪ್ಪಿಗೆ ನೀಡಿತು.

ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ಮಸೂದೆ–2021, ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ಮಸೂದೆ– 2021, ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ಮಸೂದೆ–2021 ಹಾಗೂ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ–2021 ವಿಧಾನ ಪರಿಷತ್‌ನ ಅಂಗೀಕಾರ ಪಡೆದಿರುವ ಇತರ ಮಸೂದೆಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು